
ನವದೆಹಲಿ(ಜ.11) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಇತ್ತೀಚಿನ ಪಂಜಾಬ್ (Punjab) ಭೇಟಿ ವೇಳೆ ನಡೆದ ಭಾರೀ ಭದ್ರತಾ ಲೋಪ ಪ್ರಕರಣದ ಸ್ವತಂತ್ರ ತನಿಖೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದೆ. ಸುಪ್ರೀಂಕೋರ್ಟ್‌ನ (Supreme Court)ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಉನ್ನತ ಸಮಿತಿ ತನಿಖೆ ನಡೆಸಲಿದೆ ಎಂದು ನ್ಯಾಯಾಲಯ ಘೋಷಿಸಿದೆ.
ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಪಂಜಾಬ್ ಸರ್ಕಾರ ನಡೆಸುತ್ತಿದ್ದ ಪ್ರತ್ಯೇಕ ತನಿಖೆಗಳಿಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ಪಂಜಾಬ್‌ನ ಪೊಲೀಸ್ ಅಧಿಕಾರಿಗಳಿಗೆ ಉತ್ತರಿಸಲು ಕೇವಲ 24 ತಾಸು ಅವಕಾಶ ನೀಡಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮೋದಿ ಅವರು ಜ.5ರಂದು ಪಂಜಾಬ್‌ಗೆ ಭೇಟಿ ನೀಡಿದಾಗ ಫಿರೋಜ್‌ಪುರ ಸನಿಹ ರೈತರ ಗುಂಪೊಂದು ರಸ್ತೆ ತಡೆ ನಡೆಸಿತ್ತು. ಹೀಗಾಗಿ ಮೋದಿ 20 ನಿಮಿಷ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಮುಂದೆ ಸಾಗಲಾಗದೆ ದಿಲ್ಲಿಗೆ ವಾಪಸಾಗಿದ್ದರು. ‘ಇದು ಭಾರೀ ಭದ್ರತಾ ಲೋಪ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ‘ಲಾಯರ್ಸ್ ವಾಯ್ಸ್ ಎಂಬ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು.
PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!
ತನಿಖೆಗೆ ಸಮಿತಿ ರಚನೆ: ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠ, ‘ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಿದ್ದೇವೆ. ಚಂಡೀಗಢ ಡಿಜಿಪಿ, ಎನ್‌ಐಎ ಮಹಾನಿರೀಕ್ಷಕರು, ರಿಜಿಸ್ಟ್ರಾರ್ ಜನರಲ್, ಗುಪ್ತಚರ ದಳದ ಹೆಚ್ಚುವರಿ ಮಹಾನಿರ್ದೇಶಕರು ಈ ಸಮಿತಿಯಲ್ಲಿ ಇರಬಹುದಾಗಿದೆ. ಹೊಸ ತನಿಖಾ ಸಮಿತಿಯಲ್ಲಿ ಯಾರು ಇರಲಿದ್ದಾರೆ ಎಂಬ ಬಗ್ಗೆ ಶೀಘ್ರ ಅಂತಿಮ ಆದೇಶ ಹೊರಡಿಸುತ್ತೇವೆ’ ಎಂದು ಪ್ರಕಟಿಸಿತು.
ವಾದ-ಪ್ರತಿವಾದ: ವಿಚಾರಣೆ ವೇಳೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಇದು ಪಂಜಾಬ್ ಸರ್ಕಾರದ ಗುಪ್ತಚರ ವೈಫಲ್ಯ. ಎಸ್‌ಪಿಜಿ ಕಾಯ್ದೆಯ ಉಲ್ಲಂಘನೆ. ರಸ್ತೆ ತಡೆ ನಡೆದಿದೆ ಎಂಬ ಮಾಹಿತಿಯನ್ನು ಪ್ರಧಾನಿ ಭದ್ರತೆಗಿದ್ದ ಎಸ್‌ಪಿಜಿಗೆ ಪಂಜಾಬ್ ಪೊಲೀಸರು ನೀಡಲೇ ಇಲ್ಲ’ ಎಂದು ಆರೋಪಿಸಿದರು. ‘ಪಂಜಾಬ್ ಸರ್ಕಾರವು ತಪ್ಪಿತಸ್ಥ ಪೊಲೀಸರನ್ನು ರಕ್ಷಿಸುತ್ತಿತ್ತು. ಹೀಗಾಗಿ ಕೇಂದ್ರ ಸರ್ಕಾರವೇ ತನಿಖಾ ಸಮಿತಿ ರಚಿಸಿತು’ ಎಂದರು.
ಇದಕ್ಕೆ ಆಕ್ಷೇಪಿಸಿದ ಪಂಜಾಬ್ ಸರ್ಕಾರದ ವಕೀಲ ಡಿ.ಎಸ್.ಪಟ್ವಾಲಿಯಾ, ‘ಕೇಂದ್ರ ಸರ್ಕಾರವು ಪಂಜಾಬ್ ಪೊಲೀಸರೇ ತಪ್ಪಿತಸ್ಥರು ಎಂದು ಪೂರ್ವಾಗ್ರಹ ಪೀಡಿತವಾಗಿ ತನಿಖೆ ಆರಂಭಿಸಿದೆ. ನೋಟಿಸ್‌ಗೆ ಉತ್ತರಿಸಿ ಎಂದು ಕೇವಲ 24 ತಾಸು ಅವಕಾಶ ನೀಡುತ್ತಿದೆ. ಹೀಗಾಗಿ ಕೇಂದ್ರದ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಇದರ ಬದಲು ಸ್ವತಂತ್ರ ತನಿಖೆ ನಡೆಸಬೇಕು’ ಎಂದು ಕೋರ್ಟ್‌ಗೆ ಕೋರಿದರು.
ಕೇಂದ್ರಕ್ಕೆ ಸುಪ್ರೀಂ ತರಾಟೆ: ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ ಎನ್.ವಿ.ರಮಣ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‘ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದರೂ 24 ತಾಸಲ್ಲಿ ಉತ್ತರಿಸಿ ಎಂದು ಪಂಜಾಬ್ ಅಧಿಕಾರಿಗಳಿಗೆ ನೋಟಸ್ ನೀಡುತ್ತೀರಿ. ಪಂಜಾಬ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ನೀವು (ಕೇಂದ್ರ) ಹೇಳುತ್ತೀರಿ. ಎಲ್ಲ ನೀವೇ ಸೂಚಿಸಿದರೆ ನಮಗೇನು ಕೆಲಸ ಉಳಿಯುತ್ತದೆ? ನಾವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಭಾವಿಸಬೇಡಿ. ಇದು ಪ್ರಧಾನಿಯ ಭದ್ರತೆ ವಿಷಯ’ ಎಂದರು.
ನ್ಯಾ. ಸೂರ್ಯಕಾಂತ್ ಕೂಡ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡು, ‘ವಿಚಾರಣೆ ಮಾಡದೇ ಅಧಿಕಾರಿಗಳನ್ನು ತಪ್ಪಿತಸ್ಥರು ಎಂದು ಹೇಗೆ ಬಿಂಬಿಸುತ್ತೀರಿ?’ ಎಂದರು. ನ್ಯಾ
ಹಿಮಾ ಕೊಹ್ಲಿ ಅವರು, ‘ಅಧಿಕಾರಿಗಳಿಗೆ ಉತ್ತರಿಸಲು ಕೇವಲ 24 ತಾಸು ಸಮಯ ನೀಡುವುದು ಸಮಂಜಸವಲ್ಲ’ ಎಂದರು. ಬಳಿಕ ಸ್ವತಂತ್ರ ತನಿಖೆಗೆ ಪೀಠ ನಿರ್ಧರಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ