
ಕೋಲ್ಕತ್ತಾ (ಫೆ.28): ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮಾರ್ಚ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತನ್ನ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಸಚಿವ ಬಾಬುಲ್ ಸುಪ್ರಿಯೋ, ಬಂಗಾಳದ ಮಾಜಿ ಡಿಜಿಪಿ ರಾಜೀವ್ ಕುಮಾರ್, ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಮತ್ತು ಖ್ಯಾತ ನಟಿ ಕೋಯಲ್ ಮಲ್ಲಿಕ್ ಅವರು ಟಿಎಂಸಿ ಪರ ಕಣಕ್ಕಿಳಿಯಲಿದ್ದಾರೆ.
ಈ ಪಟ್ಟಿಯಲ್ಲಿ ಅತ್ಯಂತ ಗಮನಾರ್ಹ ಹೆಸರು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರದ್ದು. ಇವರು ಆಯ್ಕೆಯಾದರೆ ಭಾರತದ ಸಂಸತ್ತನ್ನು ಪ್ರವೇಶಿಸಲಿರುವ ಮೊದಲ 'ಓಪನ್ಲಿ ಕ್ವೀರ್' (Openly Queer) ಅಂದರೆ ಸಲಿಂಗಕಾಮಿ ಸಮುದಾಯಕ್ಕೆ ಸೇರಿದ ಸಂಸದೆಯಾಗಲಿದ್ದಾರೆ.
ಕಾನೂನು ಹೋರಾಟ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಮೇನಕಾ, ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಿದ 'ಸೆಕ್ಷನ್ 377' ರದ್ದತಿ ಹೋರಾಟದ ಪ್ರಮುಖ ರೂವಾರಿ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಹಿಂದೆ ಇವರ ಶ್ರಮ ದೊಡ್ಡದಿದೆ. ಈ ತೀರ್ಪಿನ ನಂತರ ಇವರು ಸಹೋದ್ಯೋಗಿ ಅರುಂಧತಿ ಕಾಟ್ಜು ಅವರೊಂದಿಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸುವ ಮೂಲಕ ಸಮಾನತೆಗಾಗಿ ಧ್ವನಿ ಎತ್ತಿದ್ದರು.
ಜಾಗತಿಕ ಮನ್ನಣೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮಿಲ್ನರ್ ಹಾಲ್‌ನಲ್ಲಿ ಭಾವಚಿತ್ರ ಪ್ರದರ್ಶಿಸಲ್ಪಟ್ಟ ಮೊದಲ ಭಾರತೀಯ ಮಹಿಳೆ ಇವರು. ಹಾರ್ವರ್ಡ್ ಲಾ ಸ್ಕೂಲ್ ಮತ್ತು ಟೈಮ್ಸ್ ನಿಯತಕಾಲಿಕೆಯ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಇವರು ಸ್ಥಾನ ಪಡೆದಿದ್ದಾರೆ.
ಸೆಕ್ಷನ್ 377 ಪ್ರಕರಣ: ಎಲ್‌ಜಿಬಿಟಿಕ್ಯೂ+ ಸಮುದಾಯದ ಘನತೆಗಾಗಿ ನಡೆದ ಹೋರಾಟ.
ಬ್ಯೂರೋಕ್ರಟಿಕ್ ಸುಧಾರಣೆಗಳು: ನಿವೃತ್ತ ಐಎಎಸ್ ಅಧಿಕಾರಿಗಳ ಪರವಾಗಿ ಆಡಳಿತಾತ್ಮಕ ಸುಧಾರಣೆಗಾಗಿ ಕಾನೂನು ಹೋರಾಟ.
ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಖರೀದಿ ಭ್ರಷ್ಟಾಚಾರದ ಪ್ರಕರಣ.
ಸಲ್ವಾ ಜುಡುಮ್ ಪ್ರಕರಣ: ಛತ್ತೀಸ್‌ಗಢದಲ್ಲಿ ರಾಜ್ಯ ಪ್ರಾಯೋಜಿತ ಸಶಸ್ತ್ರ ಗುಂಪುಗಳ ವಿರುದ್ಧದ ಹೋರಾಟ.
ಶಿಕ್ಷಣದ ಹಕ್ಕು (RTE): 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಹೋರಾಟ.
ಬಂಗಾಳದ 294 ಸದಸ್ಯರ ವಿಧಾನಸಭೆಯಲ್ಲಿ ಟಿಎಂಸಿ ಸಂಖ್ಯಾಬಲವು ಹೆಚ್ಚಿರುವುದರಿಂದ, ಐದು ಸ್ಥಾನಗಳ ಪೈಕಿ ನಾಲ್ಕರಲ್ಲಿ ಟಿಎಂಸಿ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದೆ. ಒಂದು ಸ್ಥಾನ ಬಿಜೆಪಿಯ ಪಾಲಾಗುವ ಸಾಧ್ಯತೆಯಿದೆ. ಅಚ್ಚರಿಯ ಅಭ್ಯರ್ಥಿಗಳು ಯಾರೂ ಕಣಕ್ಕಿಳಿಯದಿದ್ದರೆ ಮೇನಕಾ ಗುರುಸ್ವಾಮಿ ಅವರ ಆಯ್ಕೆಯೂ ಸುಗಮವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ