
ನವದೆಹಲಿ : ಉಕ್ರೇನ್ ಯುದ್ಧ ಮೇಲೆ ಸಾರಿರುವ ಕಾರಣಕ್ಕೆ ರಷ್ಯಾ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಒತ್ತಡ ಹೇರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನ್ಯಾಟೋ ಕೂಟಕ್ಕೆ ಪರೋಕ್ಷ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮುಂದಿನ 5 ವರ್ಷಗಳ ಕಾಲ ವ್ಯಾಪಾರ, ಇಂಧನ, ಆರ್ಥಿಕ, ಪರಮಾಣು- ಮುಂತಾದ ಪರಸ್ಪರ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ.
ಭಾರತ ಪ್ರವಾಸದಲ್ಲಿದ್ದ ಪುಟಿನ್ ಹಾಗೂ ಮೋದಿಯವರ ದ್ವಿಪಕ್ಷೀಯ ಸಭೆ ಶುಕ್ರವಾರ ಫಲಪ್ರದವಾಗಿದೆ. 8 ದಶಕಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ನಿರಂತರ ಇಂಧನ ಪೂರೈಕೆ, ಆರ್ಥಿಕತೆ, ವ್ಯಾಪಾರ, ಆರೋಗ್ಯ, ಸಂಸ್ಕೃತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕುವುದಾಗಿ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ರಷ್ಯಾ ಸ್ನೇಹ ಕಡಿದುಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದ್ದ ಅಮೆರಿಕಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.
ಭಾರತವು ರಷ್ಯಾಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನೆರವಾಗುತ್ತಿದೆ ಎಂಬ ಆರೋಪವಿದೆ. ಈ ಕಾರಣಕ್ಕೇ ರಷ್ಯಾ ಜತೆ ಸಂಬಂಧ ಕಡಿದುಕೊಳ್ಳಲು ಭಾರತ ಸೇರಿ ರಷ್ಯಾ ಜತೆ ಉತ್ತಮ ಸಂಬಂಧ ಹೊಂದಿರುವ ಅನೇಕ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡ ಹೇರಿದ್ದರು. ಭಾರತಕ್ಕೆ ರಷ್ಯಾ ತೈಲ ಪೂರೈಕೆಗೂ ಅಡ್ಡಿ ಮಾಡಿದ್ದರು. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಕಾಲದಲ್ಲಿ ಅನೇಕರು ರಷ್ಯಾವನ್ನು ವಿರೋಧಿಸುತ್ತಿದ್ದಾರೆ. ಅಲ್ಲದೆ, ಯುದ್ಧಕಾಲದಲ್ಲಿ ಪುಟಿನ್ ಹೆಚ್ಚಾಗಿ ವಿದೇಶ ಪ್ರವಾಸ ಕೈಗೊಂಡಿಲ್ಲ. ಅಂಥದ್ದಲ್ಲಿ ಪುಟಿನ್ ಭಾರತಕ್ಕೆ ಬಂದು ಮೋದಿ ಜತೆ ಆಪ್ತ ಸಮಾಲೋಚನೆ ಮಾಡಿರುವುದು ಇಡೀ ವಿಶ್ವಕ್ಕೇ ಸಂದೇಶ ರವಾನೆ ಮಾಡಿದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಪುಟಿನ್ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಮಾತನಾಡಿ, ರಷ್ಯಾ ಜೊತೆ ವ್ಯಾಪಾರ, ಇಂಧನ, ಖನಿಜ ಸೇರಿದಂತೆ ಹಲವು ಕ್ಷೇತ್ರಗಳ ಪಾಲುದಾರಿಕೆ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ‘ಯುರೇಷಿಯನ್ ಆರ್ಥಿಕ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ರಷ್ಯಾ ಹೆಜ್ಜೆ ಹಾಕುತ್ತಿವೆ.
ಇಂಧನ ಭದ್ರತೆ ನಮ್ಮಿಬ್ಬರ ಪಾಲುದಾರಿಕೆಗೆ ಗಟ್ಟಿಯಾದ ಮತ್ತು ಮುಖ್ಯವಾದ ಆಧಾರಸ್ತಂಭ. ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ ನಮ್ಮ ದಶಕಗಳಷ್ಟು ಹಳೆಯದಾದ ಸಹಕಾರವು ನಿರ್ಣಾಯಕವಾಗಿದೆ. ನಾವು ಈ ಗೆಲುವು-ಗೆಲುವಿನ ಸಹಕಾರವನ್ನು ಮುಂದುವರಿಸುತ್ತೇವೆ. ಖನಿಜ ವಲಯದಲ್ಲೂ ನಮ್ಮ ಸಹಕಾರ ಮುಂದುವರಿಯುತ್ತದೆ’ ಎಂದರು.
9 ಲಕ್ಷ ಕೋಟಿ ರು.ಗೆ ವ್ಯಾಪಾರ ಹೆಚ್ಚಳ- ಪುಟಿನ್:
ಇದೇ ವೇಳೆ ಪುಟಿನ್ ಭಾರತದ ಜೊತೆ ಸಹಕಾರಕ್ಕೆ ಬದ್ಧತೆ ವ್ಯಕ್ತಪಡಿಸಿದ್ದು, ‘ಭದ್ರತೆ, ಆರ್ಥಿಕತೆ, ವ್ಯಾಪಾರ ಮತ್ತು ಸಂಸ್ಕೃತಿ ವಲಯದಲ್ಲಿ ಸಹಕಾರಕ್ಕೆ ಆದ್ಯತೆ ನೀಡಲು ಎರಡೂ ಕಡೆಯವರು ಬದ್ಧವಾಗಿದ್ದೇವೆ. 2030ರೊಳಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 9 ಲಕ್ಷ ಕೋಟಿ ರು.ಗೆ (100 ಬಿಲಿಯನ್ ಡಾಲರ್) ಏರಿಸಲು ಚಿಂತನೆ ನಡೆಸುತ್ತಿದ್ದೇವೆ. ಇಂಧನ ವಲಯದಲ್ಲೂ ಭಾರತದೊಂದಿಗೆ ಸಹಕಾರವನ್ನು ವಿಸ್ತರಿಸಲು ರಷ್ಯಾ ಯೋಚಿಸುತ್ತಿದೆ. ಭಾರತಕ್ಕೆ ನಿರಂತರ ಇಂಧನ ರಫ್ತು ಮಾಡಲು ನಮ್ಮ ದೇಶ ಸಿದ್ಧವಿದೆ’ ಎಂದರು.
ಕೂಡಂಕುಳಂಗೆ ಸಂಪೂರ್ಣ ಅಣು ನೆರವು:
ಇದಲ್ಲದೆ, ಭಾರತದ ದೊಡ್ಡ ಅಣು ಶಕ್ತಿ ಸ್ಥಾವರವಾದ ತಮಿಳುನಾಡಿನ ಕೂಡಂಕುಳಂ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಇದರ ಬೆನ್ನಲ್ಲೇ 3ನೇ ಘಟಕಕ್ಕೆ ಶುಕ್ರವಾರ ಅಣು ಇಂಧನವನ್ನು ರಷ್ಯಾ ಪೂರೈಸಿದೆ. ಸದ್ಯ 6 ಘಟಕಗಳಲ್ಲಿ 2 ಮಾತ್ರ ಚಾಲ್ತಿಯಲ್ಲಿವೆ. ಉಳಿದ 4 ಘಟಕಕ್ಕೂ ಅಣು ಇಂಧನ ಪೂರೈಕೆಗೆ ಪುಟಿನ್ ವಾಗ್ದಾನ ಮಾಡಿದ್ದಾರೆ.
-ಭಾರತ-ರಷ್ಯಾ ಒಪ್ಪಂದಗಳು
- ಆರೋಗ್ಯ, ವೈದ್ಯಕೀಯ ಶಿಕ್ಷಣ, ವಿಜ್ಞಾನ ಸಹಕಾರ ಒಪ್ಪಂದ ।
ಆಹಾರ ಸುರಕ್ಷತಾ ಒಪ್ಪಂದ ।
ಅನಧಿಕೃತ ವಲಸೆ ವಿರುದ್ಧ ಸಹಕಾರ ಒಪ್ಪಂದ
- ಹಡಗು ಚಾಲಕರಿಗೆ ತಜ್ಞರ ತರಬೇತಿ ಕುರಿತು ಒಡಂಬಡಿಕೆ.
ಬಂದರು, ಹಡಗು ರವಾನೆ ಮತ್ತು ಜಲಮಾರ್ಗದ ಒಡಂಬಡಿಕೆ
- ರಷ್ಯಾ ಮತ್ತು ಭಾರತಕ್ಕೆ ಸಂಚರಿಸುವ ವಾಹನ ಮತ್ತು ಸರಕುಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡುವಲ್ಲಿ ಪರಸ್ಪರ ಸಹಕಾರ ಒಡಂಬಡಿಕೆ
- ಅಂಚೆ ಮತ್ತು ಸಂವಹನ ಇಲಾಖೆ ಕುರಿತು ದ್ವಿಪಕ್ಷೀಯ ಒಪ್ಪಂದ
ಭಾರತದ ಪ್ರಸಾರ ಭಾರತಿ ಹಾಗೂ ರಷ್ಯಾದ ಗಜ್‌ಪ್ರೊಂ ನಡುವೆ ಸಹಕಾರ
ಉಗ್ರವಾದದ ವಿರುದ್ಧ ಜಂಟಿಹೋರಾಟ : ಮೋದಿ ಘೋಷಣೆನವದೆಹಲಿ: ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಒಟ್ಟಿಗೆ ಹೆಜ್ಜೆ ಹಾಕುತ್ತವೆ. ಈ ವಿಷಯದಲ್ಲಿ ಎರಡೂ ದೇಶಗಳು ಹಿಂದಿನಿಂದಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ಅದು ಪಹಲ್ಗಾಂ ದಾಳಿಯಾಗಿರಲಿ ಅಥವಾ ಕ್ರೋಕಸ್ ಸಿಟಿ ಹಾಲ್ ಮೇಲಿನ ದಾಳಿಯಾಗಿರಲಿ - ಈ ಎಲ್ಲಾ ಘಟನೆಗಳ ಮೂಲ ಒಂದೇ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಪುಟಿನ್‌ಗೆ ಮೋದಿ ಗೀತೆ ಉಡುಗೊರೆ!
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯನ್ ಭಾಷೆಗೆ ತರ್ಜುಮೆಯಾಗಿರುವ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಕಾಶ್ಮೀರಿ ಕೇಸರಿಯನ್ನು 2 ಪುಟ್ಟ ಬೆಳ್ಳಿ ಕರಡಿಗೆಗಳಲ್ಲಿ ಕೊಟ್ಟಿದ್ದಾರೆ.
ಯುದ್ಧದ ವಿಷಯದಲ್ಲಿ ಭಾರತ ತಟಸ್ಥವಿಲ್ಲ, ಶಾಂತಿಯ ಪರ
ನವದೆಹಲಿ: ‘ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ನಾವು ಶಾಂತಿಯ ಪರವಾಗಿದ್ದೇವೆ. ಎಲ್ಲಾ ಶಾಂತಿ ಪ್ರಯತ್ನಗಳನ್ನು ನಾವು ಬೆಂಬಲಿಸುವುದು ಮಾತ್ರವಲ್ಲ, ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ’ ಎಂದು ಪ್ರಧಾನಿ ಮೋದಿ ಅವರು ಪುಟಿನ್‌ಗೆ ತಿಳಿಸಿದ್ದಾರೆ. ಈ ಮೂಲಕ ಅಮೆರಿಕ ಸೇರಿದಂತೆ ಹಲವು ದೇಶಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ