
ನವದೆಹಲಿ : ಪೈಲಟ್‌ಗಳ ಕೊರತೆಯಿಂದ ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬ ಮುಂದುವರಿದಿದ್ದು, ಶುಕ್ರವಾರ 1000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. ಅಂದರೆ ಇಂಡಿಗೋ ನಿತ್ಯ ನಡೆಸುವ 2300 ಸಂಚಾರದ ಪೈಕಿ ಅರ್ಧಕ್ಕರ್ಧ ಸಂಚಾರ ರದ್ದಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆಯೇ ಹೀಗೆ ಸಾವಿರಾರು ಸಂಚಾರ ರದ್ದಾಗುತ್ತಿರುವ ಕಾರಣ ದೇಶವ್ಯಾಪಿ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಇದರ ಬೆನ್ನಲ್ಲೇ ವಿಮಾನಗಳ ರದ್ದು ಮತ್ತು ವಿಳಂಬಕ್ಕೆ ಕೊನೆ ಹಾಡುವ ಉದ್ದೇಶದಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ತಾನೇ ಕಳೆದ ತಿಂಗಳು ಪೈಲಟ್‌ಗಳ ಕರ್ತವ್ಯದ ಅವಧಿಗೆ ಕಡಿವಾಣ ಹಾಕಿ ಹೊರಡಿಸಿದ್ದ ಕಠಿಣ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪೈಲಟ್‌ಗಳ ಲಭ್ಯತೆ ಶನಿವಾರದಿಂದ ಹೆಚ್ಚಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ ಬೆಳವಣಿಗೆ ಕುರಿತು ತನಿಖೆಗೆ ಕೇಂದ್ರ ಸರ್ಕಾರ ನಾಲ್ವರು ಸದಸ್ಯರ ಸಮಿತಿ ರಚಿಸಿದೆ.
ಆದಾಗ್ಯೂ ಪರಿಸ್ಥಿತಿ ಡಿ.15ರವರೆಗೆ ಸುಧಾರಿಸುವ ಸಾಧ್ಯತೆ ಇಲ್ಲ. ಈ ಬಗ್ಗೆ ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್ ಹೇಳಿಕೆ ನೀಡಿದ್ದು, ‘ಶುಕ್ರವಾರ ನಮ್ಮ ಕಂಪನಿಯ 1000 ವಿಮಾನ ಹಾರಾಟ ರದ್ದಾಗಿವೆ. ಆದರೆ ಸರ್ಕಾರವು ನಿರ್ಬಂಧ ಸಡಿಲಿಸಿದ ಕಾರಣ, ಶನಿವಾರ ಇದರ ಪ್ರಮಾಣ 1000ಕ್ಕಿಂತ ಕೆಳಗೆ ಇಳಿಯಲಿದೆ. ಡಿ.10-15ರ ಒಳಗಾಗಿ ವಿಮಾನಸಂಚಾರ ಸಹಜಸ್ಥಿತಿಗೆ ಮರಳಲಿದೆ’ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಬಂಧ ಕ್ರಮಗಳಿಂದಾಗಿ ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಎಲ್ಲ ದೇಶೀಯ ವಿಮಾನಗಳನ್ನು 24 ಗಂಟೆಗಳ ಕಾಲ ಮತ್ತು ಚೆನ್ನೈನಿಂದ ಹೊರಡಬೇಕಿದ್ದ ವಿಮಾನಗಳನ್ನು ಶುಕ್ರವಾರ ಸಂಜೆ 6ರವರೆಗೆ ರದ್ದುಗೊಳಿಸಲಾಯಿತು.
ಕೆಲವು ವಿಮಾನಗಳು ನಿಗದಿತ ಸಮಯಕ್ಕಿಂತ 12 ಗಂಟೆ ತಡವಾಗಿ ಹಾರಾಟ ಆರಂಭಿಸಿದವು. ಅನೇಕ ಪ್ರಯಾಣಿಕರು ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಆಕ್ರೋಶಿತರಾದ ಪ್ರಯಾಣಿಕರು ಪ್ರತಿಭಟನೆ ಹಾಗೂ ವಾಗ್ವಾದ ನಡೆಸಿದರು.
ಮುಂಬೈ ವಿಮಾನ ನಿಲ್ದಾಣದಲ್ಲಿ, 104 (53 ನಿರ್ಗಮನ ಮತ್ತು 51 ಆಗಮನ). ಬೆಂಗಳೂರಲ್ಲಿ 102 (52 ಆಗಮನ ಮತ್ತು 50 ನಿರ್ಗಮನ), ಹೈದರಾಬಾದಲ್ಲಿ 132 (61 ಆಗಮನ ಮತ್ತು 71 ನಿರ್ಗಮನ), ಪುಣೆಯಲ್ಲಿ 32 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಡಿಗೋ ಕ್ಷಮೆಯಾಚನೆ:
ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಗುಂಟಾದ ಅಡಚಣೆಗೆ ಇಂಡಿಗೋ ಕ್ಷಮೆ ಯಾಚಿಸಿದೆ. ‘ನಾಳೆಯಿಂದ ಪರಿಸ್ಥಿತಿಯ ಸುಧಾರಣೆಗಾಗಿ ಅಗತ್ಯವಿರುವ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ. ಡಿ.5ರಿಂದ 15ರವರೆಗಿನ ವಿಮಾನ ರದ್ದತಿಯ ಹಣ ಮರಳಿಸುತ್ತೇವೆ. ಸಿಲುಕಿದ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡುತ್ತೇವೆ’ ಎಂದಿದೆ
ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ
ನಿಯಮ ರದ್ದುನವದೆಹಲಿ: ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬಕ್ಕೆ ಕೊನೆ ಹಾಡುವ ಉದ್ದೇಶದಿಂದ ಪೈಲಟ್‌ಗಳಿಗೆ ಗರಿಷ್ಠ ಕೆಲಸದ ಅವಧಿ, ವಾರದ ರಜೆ, ಹೆಚ್ಚುವರಿ ರಜೆ ಕುರಿತಂತೆ ಇತ್ತೀಚೆಗೆ ಹೊರಡಿಸಿದ್ದ ನಿಯಮಗಳನ್ನುನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.
ಹಣ ವಾಪಸ್,
ಹೋಟೆಲ್ ವ್ಯವಸ್ಥೆನವದೆಹಲಿ: ಡಿಸೆಂಬರ್ 5 ರಿಂದ 15 ರವರೆಗೆ ರದ್ದಾದ ಎಲ್ಲಾ ವಿಮಾನಗಳಿಗೆ ಪೂರ್ಣ ಮರುಪಾವತಿಯನ್ನು ನೀಡುವುದಾಗಿ ಇಂಡಿಗೋ ವಿಮಾನಯಾನ ಕಂಪನಿ, ಜೊತೆಗೆಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆಹಾರ ಮತ್ತು ತಿಂಡಿ ಜೊತೆಗೆ ಸಾವಿರಾರು ಹೋಟೆಲ್ ಕೊಠಡಿಗಳು ಮತ್ತು ಪರ್ಯಾಯ ಸಾರಿಗೆ ಆಯ್ಕೆಗೆ ವ್ಯವಸ್ಥೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ