ತಿರುಪತಿ ದೇಗುಲ ಭದ್ರತೆಗೆ ಆತಂಕ: ಒಂದು ಕಡೆ ನಕಲಿ ವೆಬ್‌ಸೈಟ್, ಇನ್ನೊಂದು ಕಡೆ ಡ್ರೋನ್ ಹಾರಾಟ, ಮೆಟಾ ಗ್ಲಾಸ್ ಬಳಕೆ!

Published : Sep 03, 2026, 10:59 AM IST
Tirupati security breach

ಸಾರಾಂಶ

ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿದ್ದ 249 ನಕಲಿ ವೆಬ್‌ಸೈಟ್‌ಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಟಿಟಿಡಿ ಕಠಿಣ ಕ್ರಮ. ದರ್ಶನ, ವಸತಿ ಸೌಲಭ್ಯದ ಆಮಿಷವೊಡ್ಡುವ ಇಂತಹ ಜಾಲಗಳ ಬಗ್ಗೆ ಎಚ್ಚರದಿಂದಿರಲು ಮತ್ತು ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಲು ಭಕ್ತರಿಗೆ ಸೂಚನೆ

ವಿಶ್ವವಿಖ್ಯಾತ ತಿರುಪತಿಗೆ ಆಗಮಿಸುವ ಭಕ್ತರಿಗೆ ವಂಚಿಸಲು ನಕಲಿ ವೆಬ್‌ಸೈಟ್, ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು ಇದೀಗ ಇವುಗಳ ವಿರುದ್ಧ ತಿರುಪತಿ ದೇವಸ್ಥಾನಂ(TTD) ಅಕ್ಷರಶಃ ಸಮರವನ್ನೇ ಸಾರಿದೆ.

ಭಕ್ತರನ್ನು ವಂಚಿಸುವ ಜಾಲವನ್ನು ಮಟ್ಟಹಾಕಲು ಟಿಟಿಡಿ ಆಡಳಿತ ಮಂಡಳಿ ಕಠಿಣ ಕ್ರಮಗಳನ್ನ ಕೈಗೊಂಡಿದ್ದು ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ.

ತಿರುಪತಿಯಲ್ಲಿ ನಕಲಿ ವೆಬ್‌ಸೈಟ್, ಮಧ್ಯವರ್ತಿಗಳ ಹಾವಳಿ

ಟಿಟಿಡಿ ಹೆಸರಲ್ಲಿ ಸುಮಾರು 249 ನಕಲಿ ವೆಬ್‌ಸೈಟ್‌ಗಳನ್ನು ಪತ್ತೆಯಾಗಿವೆ. ಇವೆಲ್ಲವೂ ನಕಲಿಯಾಗಿದ್ದು ಭಕ್ತರನ್ನು ವಂಚಿಸಲು ತಲೆಯೆತ್ತಿವೆ. ಇದೀಗ ಅವೆಲ್ಲ ನಕಲಿ ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನ, ವಸತಿ ಸೌಲಭ್ಯದಂತಹ ಆಕರ್ಷಕ ಜಾಹೀರಾತುಗಳ ಮೂಲಕ ಭಕ್ತರನ್ನು ಸೆಳೆಯುತ್ತಿದ್ದ ಈ ಜಾಲತಾಣಗಳ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಇತ್ತೀಚೆಗೆ 'devasthanam.online' ಎಂಬ ನಕಲಿ ವೆಬ್‌ಸೈಟ್, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ದರ್ಶನ ಟಿಕೆಟ್‌ಗಳು ಲಭ್ಯವಿವೆ ಎಂದು ಸುಳ್ಳು ಮಾಹಿತಿ ಹರಡುತ್ತಿತ್ತು. ಈ ಬಗ್ಗೆಯೂ ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಕ್ತರು ಮೋಸ ಹೋಗಬಾರದು

ಭಕ್ತರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಲಿಂಕ್‌ಗಳನ್ನು ನಂಬಬಾರದು ಎಂದು ಟಿಟಿಡಿ ಎಚ್ಚರಿಕೆ ನೀಡಿದೆ. ದರ್ಶನ, ವಸತಿ ಮತ್ತು ಇತರೆ ಸೇವೆಗಳಿಗಾಗಿ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಅನ್ನು ಮಾತ್ರ ಬಳಸುವಂತೆ ಮನವಿ ಮಾಡಲಾಗಿದೆ.

ಇನ್ನು, ಭಕ್ತರಿಗೆ ವಿಐಪಿ ದರ್ಶನ ಮತ್ತು ವಸತಿ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದು ಪರಾರಿಯಾಗುತ್ತಿದ್ದ ಮಧ್ಯವರ್ತಿಗಳ ವಿರುದ್ಧ ಈವರೆಗೆ 30 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ವಂಚನೆಗಳಿಗೆ ಭಕ್ತರು ಬಲಿಯಾಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆಂತರಿಕ ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ಆಮಿಷ

ದೇವಸ್ಥಾನದ ಆಂತರಿಕ ಸಿಬ್ಬಂದಿ ಮೇಲೂ ಟಿಟಿಡಿ ಹದ್ದಿನ ಕಣ್ಣಿಟ್ಟಿದೆ. ಭಕ್ತರನ್ನು ವಂಚಿಸುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಈ ವರ್ಷದಲ್ಲಿ 43 ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ಯಾರೇ ಭಾಗಿಯಾಗಿದ್ದರೂ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಕಳೆದ ವಾರವಷ್ಟೇ, 'ಎಸ್‌ಸಿಪಿ ಡೆವಲಪರ್ಸ್' (SCP Developers) ಎಂಬ ರಿಯಲ್ ಎಸ್ಟೇಟ್ ಕಂಪನಿ ವಿರುದ್ಧ ಟಿಟಿಡಿ ಕಾನೂನು ಕ್ರಮ ಆರಂಭಿಸಿದೆ. ತಿರುಪತಿ ಹೆದ್ದಾರಿಯಲ್ಲಿ ನಿವೇಶನ ಖರೀದಿಸಿದವರಿಗೆ 'ಜೀವಮಾನವಿಡೀ ಶ್ರೀವಾರಿ ವಿಐಪಿ ದರ್ಶನ' ನೀಡುವುದಾಗಿ ಈ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿತ್ತು. ಈ ಕಂಪನಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಟಿಟಿಡಿ, ದೂರು ದಾಖಲಿಸುತ್ತಿದ್ದಂತೆ ಕಂಪನಿಯು ತನ್ನ ಜಾಹೀರಾತನ್ನು ಹಿಂಪಡೆದಿದೆ.

ಮೆಟಾ ಕನ್ನಡಕ, ಡ್ರೋನ್ ಹಾವಳಿ ಟಿಟಿಡಿಗೆ ತಲೆನೋವು

ತಂತ್ರಜ್ಞಾನದ ದುರ್ಬಳಕೆಯೂ ಟಿಟಿಡಿಗೆ ಹೊಸ ತಲೆನೋವಾಗಿದೆ. ದೇವಸ್ಥಾನದ ಆವರಣದಲ್ಲಿ ಡ್ರೋನ್‌ಗಳ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ, ದೇಗುಲದ ಪ್ರವೇಶ ದ್ವಾರದಲ್ಲಿ ಈವರೆಗೆ 261 ಡ್ರೋನ್‌ಗಳು ಮತ್ತು 105 ಮೆಟಾ ಸ್ಮಾರ್ಟ್ ಗ್ಲಾಸ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ದೇವಸ್ಥಾನದ ಭದ್ರತಾ ವ್ಯವಸ್ಥೆ ಎದುರಿಸುತ್ತಿರುವ ಆಧುನಿಕ ಸವಾಲುಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

​ಹಾಸ್ಟೆಲ್‌ನಲ್ಲಿದೆಯಾ ದೆವ್ವದ ಕಾಟ? ವದಂತಿ ಬೆನ್ನತ್ತಿ ವಿದ್ಯಾರ್ಥಿಗಳ ಜೊತೆ ರಾತ್ರಿ ನಿದ್ರಿಸಿದ ಜಿಲ್ಲಾಧಿಕಾರಿ
2019ರಲ್ಲಿ ಪಾಕ್ F-16 ಜೆಟ್ ಹೊಡೆದುರುಳಿಸಿದ ವೀರಯೋಧ ಅಭಿನಂದನ್, ಈಗ ಪ್ಯಾಸೆಂಜರ್ ವಿಮಾನಕ್ಕೆ ಪೈಲಟ್!