ತಿರುಪತಿ ತಿಮ್ಮಪ್ಪನ ಲಡ್ಡುಗೆ 'ಟಾಯ್ಲೆಟ್ ಕ್ಲೀನಿಂಗ್ ರಾಸಾಯನಿಕ'ದ ತುಪ್ಪ ಬಳಕೆ; ಸಿಎಂ ಚಂದ್ರಬಾಬು ನಾಯ್ಡು

Published : Feb 06, 2026, 08:46 PM IST
Tirupati Laddu Toilet Clean Chemical Mix

ಸಾರಾಂಶ

ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಬಾತ್‌ರೂಮ್ ಕ್ಲೀನಿಂಗ್ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಹಿಂದಿನ ಜಗನ್ ಸರ್ಕಾರದ ಅವಧಿಯಲ್ಲಿ ಈ ಕಲಬೆರಕೆ ನಡೆದಿದ್ದು, ಇದು ದೇವರ ವಿರುದ್ಧದ ಮಹಾಪಾಪ ಎಂದು ಹೇಳಿದ್ದಾರೆ. 

ನವದೆಹಲಿ (ಫೆ.06): 'ಜಗತ್ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ 'ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು' (Bathroom-cleaning chemicals) ಬಳಸಲಾಗಿತ್ತು' ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದು, ಭಕ್ತವೃಂದದಲ್ಲಿ ಮತ್ತಷ್ಟು ಆತಂಕ ಮೂಡಿಸಿದ್ದಾರೆ.

ಕರ್ನೂಲ್ ಜಿಲ್ಲೆಯ ಕಲುಗೊಟ್ಲಾ ಗ್ರಾಮದಲ್ಲಿ ನಡೆದ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಅವರು (ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರ) ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪವನ್ನು ಬಳಸಿದ್ದಾರೆ. ಆ ಮೂಲಕ ಪವಿತ್ರವಾದ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳುಮಾಡಿದ್ದಾರೆ. ಕೇವಲ ತಿರುಪತಿ ಮಾತ್ರವಲ್ಲದೆ, ಪ್ರಸಿದ್ಧ ಶ್ರೀಶೈಲಂ ದೇವಸ್ಥಾನಕ್ಕೂ ಇಂತಹದ್ದೇ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡರು.

5 ವರ್ಷಗಳ ಕಾಲ ಭಕ್ತರಿಗೆ ಮೋಸ

'ಸುಮಾರು ಐದು ವರ್ಷಗಳ ಕಾಲ, ಹಿಂದಿನ ಸರ್ಕಾರದ ಆಡಳಿತದಲ್ಲಿ ರಾಸಾಯನಿಕ ಮಿಶ್ರಿತ ತುಪ್ಪವನ್ನೇ ಲಡ್ಡು ತಯಾರಿಸಲು ಬಳಸಲಾಗಿತ್ತು. ತುಪ್ಪದಲ್ಲಿ ಎರಡು ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಒಂದು ಸಸ್ಯಜನ್ಯ ಮೂಲದ್ದು, ಇದು ದುಬಾರಿಯಿರುತ್ತದೆ. ಆದರೆ ಪ್ರಾಣಿಗಳ ಕೊಬ್ಬು (Animal Fat) ಅಗ್ಗವಾಗಿ ಸಿಗುತ್ತದೆ. ಹಣ ಉಳಿಸುವ ದುರಾಸೆಗೆ ಬಿದ್ದು ದೇವರ ಪ್ರಸಾದವನ್ನೂ ಬಿಡದೆ ಅಪಚಾರ ಎಸಗಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (NDDB) ವರದಿಯೇ ಸಾಕ್ಷಿಯಾಗಿದೆ. ಈ ವರದಿಯ ಪ್ರಕಾರ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ದೃಢಪಟ್ಟಿದೆ ಎಂದರು.

ಸಿಬಿಐ ಕ್ಲೀನ್ ಚಿಟ್ ಬಗ್ಗೆ ಸ್ಪಷ್ಟನೆ

ವೈಎಸ್‌ಆರ್‌ಸಿಪಿ ನಾಯಕರು ಸಿಬಿಐ ನೇತೃತ್ವದ ವಿಶೇಷ ತನಿಖಾ ದಳ (SIT) ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ನಾಯ್ಡು, 'ಜಗನ್ ಅವರ ಚಿಕ್ಕಪ್ಪ ಮತ್ತು ಟಿಟಿಡಿಯ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರೇ ಈ ಹಿಂದೆ ಕಲಬೆರಕೆ ನಡೆದಿರುವುದನ್ನು ಒಪ್ಪಿಕೊಂಡಿದ್ದರು. ಈಗ ಎಸ್‌ಐಟಿ ವರದಿಯ ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ, ನನ್ನ ಸರ್ಕಾರ ಈ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಈಗ ತಯಾರಾಗುತ್ತಿರುವ ಲಡ್ಡುಗಳಿಗೂ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೂ ಸಾಕಷ್ಟು ವ್ಯತ್ಯಾಸವಿದೆ' ಎಂದು ಹೇಳಿದರು.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ

ಇದಕ್ಕೂ ಮುನ್ನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಯ್ಡು, 'ತುಪ್ಪದ ಕಲಬೆರಕೆಯು ದೇವರ ವಿರುದ್ಧ ಮಾಡಿದ ಮಹಾಪಾಪ. ಈ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ. ಎಸ್‌ಐಟಿ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಏಕಸದಸ್ಯ ಸಮಿತಿಯನ್ನು ರಚಿಸಲಾಗುವುದು' ಎಂದು ಘೋಷಿಸಿದ್ದರು. 2022ರಲ್ಲೇ ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CFTRI) ನೀಡಿದ ವರದಿಯಲ್ಲಿ ಕಲಬೆರಕೆ ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ, ಹಿಂದಿನ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗಿತ್ತು ಎಂದು ಆರೋಪಿಸಿದರು.

ವೈಎಸ್‌ಆರ್‌ಸಿಪಿ ಪ್ರತಿಕ್ರಿಯೆ

ಚಂದ್ರಬಾಬು ನಾಯ್ಡು ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ ರಾಜ್ಯಸಭಾ ಸಂಸದ ವೈ.ವಿ. ಸುಬ್ಬಾರೆಡ್ಡಿ, '2022ರ ಸಿಎಫ್‌ಟಿಆರ್‌ಐ ವರದಿಯಲ್ಲಿ ಕಲಬೆರಕೆ ಬಗ್ಗೆ ಉಲ್ಲೇಖವಿದ್ದರೂ, ಅದರಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ನಾನೇ ಸ್ವತಃ ಪತ್ರ ಬರೆದು ಪರೀಕ್ಷೆಗೆ ಕಳುಹಿಸಿದ್ದೆ. ಹೀಗಿರುವಾಗ ನಾನು ವರದಿಯನ್ನು ಮುಚ್ಚಿಟ್ಟೆ ಎಂಬ ಆರೋಪದಲ್ಲಿ ಹುರುಳಿಲ್ಲ. ಎಸ್‌ಐಟಿ ವರದಿ ಕ್ಲೀನ್ ಚಿಟ್ ನೀಡಿದ್ದರೂ, ಟಿಡಿಪಿ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ, ತಿರುಪತಿ ಲಡ್ಡುವಿನ ಪಾವಿತ್ರ್ಯತೆಯ ವಿಚಾರ ಈಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದ್ದು, ಭಕ್ತರ ನಂಬಿಕೆಯ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಯುದ್ಧ ತಾರಕಕ್ಕೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್​ ಮೋದಿ ಬಗ್ಗೆ ಏನಂದ್ರು ಕೇಳಿ!
ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಪಿಬಿಜಿಗೆ ಸೇರಲು ಭಾರತದ 3 ಜಾತಿಗಳ ಸೈನಿಕರಿಗೆ ಮಾತ್ರ ಅವಕಾಶ: ಇದಕ್ಕೇನು ಕಾರಣ?