
ತಿರುಪತಿ (ನ.22): ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಿದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿರುವ ನಡುವೆಯೇ, ‘2019-2024ರ ಅವಧಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡು ವಿತರಿಸಲಾಗಿದೆ. ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ’ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಸ್ಫೋಟಕ ಮಾಹಿತಿ ನೀಡಿದ್ದಾರೆ.
5 ವರ್ಷದಲ್ಲಿ ದೇಗುಲಕ್ಕೆ ದೈನಂದಿನ ಭಕ್ತರ ಭೇಟಿ, ತುಪ್ಪ ಖರೀದಿ, ಲಡ್ಡು ಉತ್ಪಾದನೆ ಹಾಗೂ ಮಾರಾಟ- ಈ 4 ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಹಾಕಿದ ಲೆಕ್ಕಾಚಾರದಲ್ಲಿ ನಕಲಿ ತುಪ್ಪದಿಂದ ಮಾಡಿದ್ದ ಲಡ್ಡುಗಳು ಎಷ್ಟೆಂದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
‘5 ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ಆಗಮಿಸಿದ್ದಾರೆ. ಅವರಲ್ಲಿ ಯಾರಿಗೆ ಶುದ್ಧ ತುಪ್ಪದ ಲಡ್ಡು ಹಾಗೂ ಯಾರಿಗೆ ನಕಲಿ ತುಪ್ಪದ ಲಡ್ಡು ವಿತರಿಸಲಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ ಟಿಟಿಡಿ ಮಾರುಕಟ್ಟೆ ದಾಖಲೆಗಳ ಪ್ರಕಾರ, ಈ ಅವಧಿಯಲ್ಲಿ ಹಲವಾರು ಡೈರಿಗಳಿಂದ ಒಟ್ಟು 534.7 ಕೋಟಿ ರು. ಮೌಲ್ಯದ 1.61 ಕೋಟಿ ಕೆಜಿ ತುಪ್ಪ ಖರೀದಿಸಲಾಗಿದೆ. ಇದರಲ್ಲಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಒಡನಾಡಿ ಕಂಪನಿಗಳು ಪೂರೈಸಿದ 68 ಲಕ್ಷ ಕೆ.ಜಿ. ಅಂದರೆ ಒಟ್ಟು ತುಪ್ಪದ ಶೇ.42ರಷ್ಟು ತುಪ್ಪ ನಕಲಿ ಎಂದು ಎಸ್‌ಐಟಿ ಪತ್ತೆ ಹಚ್ಚಿದೆ’ ಎಂದು ನಾಯ್ಡು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಟಿಟಿಡಿ ಮಾಜಿ ಅಧ್ಯಕ್ಷ ಹಾಗೂ ವೈಎಸ್‌ಆರ್‌ಸಿಪಿ ಸಂಸದ ವೈ.ವಿ. ಸುಬ್ಬಾರೆಡ್ಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾರೆಡ್ಡಿಯವರ ವಿಚಾರಣೆ ನಡೆಸಿದೆ. ಈಗಾಗಲೇ ನೆಲ್ಲೂರು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಡಿ.15ಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ