ತಿರುಪತಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ 3 ದಿನಗಳ ರಿಹರ್ಸಲ್‌!

By Suvarna NewsFirst Published Jun 9, 2020, 4:43 PM IST
Highlights

ತಿರುಪತಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ 3 ದಿನಗಳ ರಿಹರ್ಸಲ್‌!| ಜೂ.11ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ

ತಿರುಪತಿ(ಜೂ.09): ದೇಶದೆಲ್ಲೆಡೆ ಲಾಕ್‌ಡೌನ್‌ ಸಡಿಲಿಕೆಯಾಗಿ ಹೋಟೆಲ್‌, ಶಾಪಿಂಗ್‌ ಮಾಲ್‌ಗಳು ಮತ್ತು ದೇವಸ್ಥಾನಗಳು ಸಾರ್ವಜನಿಕರ ಪ್ರವೇಶಕ್ಕೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನವೂ ಜೂ.11ರಿಂದ ಭಕ್ತಾದಿಗಳಿಗೆ ಮುಕ್ತವಾಗಲಿದೆ. ಈ ಹಿನ್ನೆಲೆಯಲ್ಲಿ ಜನರ ಭೇಟಿ ವೇಳೆ ಕೊರೋನಾ ಸೋಂಕು ಹಬ್ಬದಂತೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದರ ಪರಿಶೀಲನೆಗಾಗಿ 3 ದಿನಗಳ ಭಕ್ತರ ದೇವಸ್ಥಾನ ಪ್ರವೇಶದ ರಿಹರ್ಸಲ್‌ ಸೋಮವಾರದಿಂದ ಆರಂಭವಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರನ್ನು ಹೇಗೆ ನಿರ್ವಹಿಸಬೇಕು ಎಂಬುದರ ಪರಿಶೀಲನೆಗಾಗಿ ನಡೆಸಲಾಗುತ್ತಿರುವ 3 ದಿನಗಳ ರಿಹರ್ಸಲ್‌ನಲ್ಲಿ ದೇಗುಲ ಪ್ರವೇಶಕ್ಕೆ 6 ಸಾವಿರ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ. ಆ ನಂತರ ಭಕ್ತರ ದೇವಸ್ಥಾನ ಭೇಟಿ ಆರಂಭದ ಬಳಿಕ ಭಕ್ತರು ದೇಗುಲ ಪ್ರವೇಶ ಮತ್ತು ಹುಂಡಿಗೆ ತಮ್ಮ ದೇಣಿಗೆ ಸಲ್ಲಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ಅಲ್ಲದೆ, ಭಕ್ತರ ನಿರ್ವಹಣೆಗಾಗಿ ಕಾರ್ಯ ನಿರ್ವಹಿಸಲಿರುವ ಸಿಬ್ಬಂದಿಗೆ ಪಿಪಿಇ(ಖಾಸಗಿ ರಕ್ಷಣಾ ಕವಚ) ಕಿಟ್‌ಗಳನ್ನು ನೀಡಲಾಗುತ್ತದೆ.

ಸಾಮಾನ್ಯ ದಿನಗಳಲ್ಲಿ ಪ್ರತೀ ದಿನ 60 ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಸಾಂಕ್ರಮಿಕ ಕೊರೋನಾ ಅಟ್ಟಹಾಸದ ಈ ಅವಧಿಯಲ್ಲಿ ದಿನಕ್ಕೆ ಕೇವಲ 6 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಲ್ಲಿ 300 ರು. ಟಿಕೆಟ್‌ನ 3000 ಮಂದಿಗೆ ವಿಶೇಷ ದರ್ಶನವಿರಲಿದೆ. ಆದರೆ, 10 ವರ್ಷದ ಒಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವೃದ್ಧರಿಗೆ ದರ್ಶನ ಭಾಗ್ಯವಿಲ್ಲ ಎಂದು ಟಿಟಿಡಿ ತಿಳಿಸಿದೆ.

click me!