ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!

By Kannadaprabha News  |  First Published Feb 17, 2022, 7:26 AM IST

*ಅಂಜನಾದ್ರಿ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ
*ಟಿಟಿಡಿಯಿಂದ ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ
*ಕರ್ನಾಟಕವಲ್ಲ, ತಿರುಪತಿಯೇ ಹನುಮ ಜನ್ಮಸ್ಥಳ, ವೇದದಲ್ಲೇ ಈ ಅಂಶ ಇದೆ: ಶ್ರೀಗಳು


ತಿರುಮಲ (ಫೆ. 17) : ತಿರುಮಲ ಬೆಟ್ಟದಲ್ಲಿರುವ ಅಂಜನಾದ್ರಿ ಬೆಟ್ಟವೇ (Anjanadri temple) ಆಂಜನೇಯನ ಜನ್ಮಸ್ಥಾನ ಎಂಬ ಹೊಸ ವಾದ ಹುಟ್ಟುಹಾಕಿರುವ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (TTD), ಇದೀಗ ಈ ಸ್ಥಳವನ್ನು ಆಂಜನೇಯನ ಜನ್ಮಸ್ಥಳವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಬುಧವಾರ ಭೂಮಿಪೂಜೆ ನಡೆಸಿದೆ.ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಾನವೆಂದು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಆದರೆ ಇದೀಗ ಟಿಟಿಡಿ ಹೊಸ ವಾದ ಮುಂದಿಟ್ಟು ತನ್ನ ತಿರುಪತಿ ಸಮೀಪದ ಅಂಜನಾದ್ರಿ ಬೆಟ್ಟವನ್ನು ಹಾಗೂ ಬಾಲ ಹನುಮಾನ್‌ ಮಂದಿರವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.

ತಿರುಮಲ ಬೆಟ್ಟದಲ್ಲಿನ ಆಕಾಶಗಂಗಾ ಪ್ರದೇಶದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ವಿಶಾಖ ಶ್ರೀ ಶಾರದ ಪೀಠದ ಸ್ವರೂಪಾನಂದ ಸರಸ್ವತಿ, ಶ್ರೀತುಳಸಿ ಸೇವಾನ್ಯಾಸ, ಚಿತ್ರಕೂಟದ ಶ್ರೀ ರಾಮಭದ್ರಾಚಾರ್ಯ, ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವೀಶಗಿರಿಜಾಗಿರಿ ಮೊದಲಾದವರು ಭಾಗಿಯಾಗಿದ್ದರು.

Tap to resize

Latest Videos

undefined

ಈ ವೇಳೆ ಮಾತನಾಡಿದ ಸ್ವರೂಪಾನಂದ ಸರಸ್ವತಿ, ‘ಆಂಧ್ರಪ್ರದೇಶವು ವೇದಗಳ ಉಗಮ ಸ್ಥಾನವಾಗಿದ್ದು, ಹನುಮಂತನು ಈ ಅಂಜನಾದ್ರಿ ಬೆಟ್ಟದಲ್ಲೇ ಜನಿಸಿದ್ದಾನೆ. ಇದನ್ನು ಹಲವು ವೈದಿಕ ಮತ್ತು ವೈಜ್ಞಾನಿಕ ತಜ್ಞರು ಸಂಶೋಧನೆ ನಡೆಸಿ ಖಚಿತಪಡಿಸಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ: Tirupati Tirumala Temple : ದರ್ಶನದ ನಕಲಿ ಟಿಕೆಟ್‌ ಮಾರಿದ 7 ಜನರ ಬಂಧನ

ಜಗದ್ಗುರು ರಾಮಭದ್ರಾಚಾರ್ಯರು ಮಾತನಾಡಿ, ‘ಕರ್ನಾಟಕದಲ್ಲಿ ಹನುಮಂತ ಹುಟ್ಟಿದ್ದಾನೆ ಎಂಬ ವಾದಗಳಿವೆ. ಆದರೆ ವೇದ-ಪುರಾಣಗಳನ್ನು ಆಳಕ್ಕಿಳಿದು ಪರಿಶೀಲಿಸಿದಾಗ ತಿರುಪತಿಯ ಅಂಜನಾದ್ರಿ ಬೆಟ್ಟವೇ ಆತನ ಜನ್ಮಸ್ಥಳ ಎಂಬುದನ್ನು ಸಾಬೀತುಪಡಿಸುತ್ತದೆ. ಮುಂದೆ ಆತ ಕರ್ನಾಟಕದ ಕಿಷ್ಕಿಂದೆ ಸೇರಿ ವಿವಿಧ ಭಾಗಗಳಲ್ಲಿ ತನ್ನ ಜೀವನ ನಡೆಸಿದ್ದಾನೆ’ ಎಂದರು.

ಅಯೋಧ್ಯೆಯ ಗೋವಿಂದಗಿರಿ ಮಹಾರಾಜರು ಮಾತನಾಡಿ, ‘ಜನ್ಮಸ್ಥಳದ ಬಗ್ಗೆ ಭಿನ್ನಾಭಿಪ್ರಾಯ ಮರೆತು ದೇಶಕ್ಕೆ ಒಳ್ಳೆಯದಾಗುವತ್ತ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಜವಾಹರರೆಡ್ಡಿ ಮಾತನಾಡಿ, ‘ತಿರುಪತಿಯೇ ಹನುಮ ಜನ್ಮಸ್ಥಳ ಎಂದು ಸಾಬೀತು ಮಾಡುವ ಪೌರಾಣಿಕ ಹಾಗೂ ಐತಿಹಾಸಿಕ ಸಂಶೋಧನೆ ಸಂಶೋಧನೆ ನಡೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ನೀಲನಕ್ಷೆ ಬಿಡುಗಡೆ: ಈ ನಡುವೆ, ಅಂಜನಾದ್ರಿ ಬೆಟ್ಟದಲ್ಲಿ ಭವ್ಯ ದೇಗುಲ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಚಟುವಟಿಕೆ ನಡೆಸುವ ನೀಲನಕ್ಷೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: Gold Hands To Thimmappa: ಅನಾಮಧೇಯ ಭಕ್ತನಿಂದ ತಿರುಪತಿ ವೆಂಕಟರಣನಿಗೆ ಚಿನ್ನದ ಕೈ ಕಾಣಿಕೆ

ತಿರುಪತಿ ಬೆಟ್ಟದಲ್ಲಿ ಹನುಮ ದೇಗುಲ ನಿರ್ಮಾಣಕ್ಕೆ ಹೈಕೋರ್ಟ್‌ ತಡೆ: ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ದೇಗುಲ ನಿರ್ಮಿಸುವ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌) ಯೋಜನೆಗೆ ಆಂಧ್ರಪ್ರದೇಶ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ. ಆದರೆ ಬೆಟ್ಟದ ಅಭಿವೃದ್ಧಿ ಚಟುವಟಿಕೆ ಹಾಗೂ ದೇಗುಲದ ಶಂಕುಸ್ಥಾಪನೆಗೆ ಅನುಮತಿಸಿದೆ.

‘ತಿರುಮಲದ 7 ಬೆಟ್ಟಗಳಲ್ಲಿ ಮಾನವರು ಯಾವುದೇ ಪ್ರತಿಮೆಗಳನ್ನು ಸ್ಥಾಪಿಸಬಾರದು ಎಂದು ಪುರಾಣಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ಯಾವುದೇ ಸಾಕ್ಷ್ಯಗಳು ಇಲ್ಲದ ಹೊರತಾಗಿಯೂ ಟಿಟಿಡಿ ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಾನ ಎಂದು ಘೋಷಿಸಿ ಅಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಿದೆ. ಹೀಗಾಗಿ ಇದಕ್ಕೆ ತಡೆ ನೀಡಬೇಕು’ ಎಂದು ಕೋರಿ ಕರ್ನೂಲ್‌ನ ಅಗ್ರಹಾರಂ ರಾಘವೇಂದ್ರ ಹಾಗೂ ಇನ್ನಿಬ್ಬರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ತಿರುಮಲ ಬೆಟ್ಟದಲ್ಲಿ ಯಾವದೇ ದೇಗುಲ ನಿರ್ಮಾಣ ಮಾಡದಂತೆ ತಡೆ ನೀಡಿದೆ. ಆದರೆ ಅಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಅದಕ್ಕೆ ಭೂಮಿ ಪೂಜೆ ಮುಂದುವರೆಸಬಹುದು ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಅರ್ಜಿದಾರರ ವಾದದ ಬಗ್ಗೆ ಆಕ್ಷೇಪಣೆ ಹಾಗೂ ಇತರ ಎಲ್ಲ ವಿವರ ಸಲ್ಲಿಸಲು ಟಿಟಿಡಿಗೆ ಸೂಚಿಸಿ ಫೆ.21ಕ್ಕೆ ವಿಚಾರಣೆ ಮುಂದೂಡಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ, ‘ನಾವು ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆಯೋ ಹೊರತೂ ದೇಗುಲದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಾವು ಯಾವುದೇ ವಿವಾದಕ್ಕೆ ಎಡೆಮಾಡದೇ ಯಾತ್ರಿಕರಿಗೆ ಎಲ್ಲಾ ರೀತಿಯ ಉತ್ತಮ ಸೌಕರ್ಯ ಒದಗಿಸಿಕೊಡುತ್ತಿದ್ದೇವೆ. ಹಿಂಧೂ ಧರ್ಮವನ್ನು ಬೆಳೆಸುವ ಎಲ್ಲಾ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವಂತೆ ನಮಗೆ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಸೂಚಿಸಿದ್ದಾರೆ’ ಎಂದು ಹೇಳಿದರು.ಜೊತೆಗೆ ಎರಡು ತೆಲುಗು ರಾಜ್ಯಗಳು ಸೇರಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 502 ದೇಗುಲಗಳನ್ನು ವೆಂಕಟೇಶ್ವರನ ಅನುಗ್ರಹದಿಂದ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

click me!