ಮಹಿಳಾ ಸಿಜೆಐ : ಕರ್ನಾಟಕ ಹೈಕೋರ್ಟ್‌ ನ್ಯಾ. ನಾಗರತ್ನಗೆ ಒಲಿಯುತ್ತಾ ಭಾಗ್ಯ?

By Kannadaprabha News  |  First Published Apr 16, 2021, 11:41 AM IST

ಭಾರತ ದೇಶ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರನ್ನು ಕಾಣುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ.ಎಸ್‌.ಎ. ಬೋಬ್ಡೆ ಹೇಳಿದ್ದಾರೆ. ಕರ್ನಾಟಕದ ನ್ಯಾಯಾಧೀಶೆ ನಾಗರತ್ನ ಅವರಿಗೆ ಈ ಸ್ಥಾನ ಒಲಿಯುವ ಬಗ್ಗೆಯೂ ಚರ್ಚೆಗಳಾಗುತ್ತಿದೆ. 


ನವದೆಹಲಿ (ಏ.16): ಭಾರತವು ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರನ್ನು ಕಾಣುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ.ಎಸ್‌.ಎ. ಬೋಬ್ಡೆ ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಸುಪ್ರೀಂಕೋರ್ಟ್‌ಗೆ ಸದ್ಯವೇ ಪದೋನ್ನತಿ ಮಾಡಿದಲ್ಲಿ ಅವರು ದೇಶದ ಮೊದಲ ಮಹಿಳಾ ಸಿಜೆಐ ಆಗುವ ಸಾಧ್ಯತೆಗಳ ವರದಿ ಬೆನ್ನಲ್ಲೇ ನ್ಯಾ ಬೋಬ್ಡೆ ಅವರ ಮಾತು ಮಹತ್ವ ಪಡೆದುಕೊಂಡಿದೆ.

ಹೈಕೋರ್ಟ್‌ಗಳಿಗೆ ಮಹಿಳಾ ಅಡ್‌ ಹಾಕ್‌ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾ.ಬೋಬ್ಡೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

Tap to resize

Latest Videos

ಕರ್ನಾಟಕ ಜಡ್ಜ್‌ ನಾಗರತ್ನಗೆ ಪ್ರಥಮ ಮಹಿಳಾ ಸಿಜೆಐ ಅವಕಾಶ ಮಿಸ್‌? ...

‘ಮಹಿಳೆಯರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಗರಿಷ್ಠ ಪ್ರಮಾಣದಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ. ನಮ್ಮ ಚಿಂತನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಒಬ್ಬ ಉತ್ತಮ ಅಭ್ಯರ್ಥಿ ಬೇಕಷ್ಟೇ’ ಎಂದು ನ್ಯಾ.ಬೋಬ್ಡೆ ಹೇಳಿದರು.

‘ಅನೇಕ ಮಹಿಳಾ ವಕೀಲರನ್ನು ನ್ಯಾಯಾಧೀಶ ಹುದ್ದೆಗೆ ಆಹ್ವಾನಿಸಲಾಗುತ್ತದೆ. ಆದರೆ ಹಲವರು ಮಕ್ಕಳ ವಿದ್ಯಾಭ್ಯಾಸ ಹಾಗೂ ಇತ್ಯಾದಿ ಮನೆಯ ವಿಷಯಗಳನ್ನು ಮುಂದಿರಿಸಿಕೊಂಡು ಬರಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ನನಗೆ ಹೇಳಿದ್ದಾರೆ. ಈ ವಿಷಯದಲ್ಲಿ ನಾವೇನೂ ಮಾಡಲು ಆಗದು’ ಎಂದು ಅವರು ನುಡಿದರು.

ಏಪ್ರಿಲ್‌ 24ರಂದು ನ್ಯಾ. ಎನ್‌.ವಿ. ರಮಣ ಅವರು ನೂತನ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ. ಅವರ ನಂತರ ಮಹಿಳೆಯರಿಗೆ ಈ ಪದವಿ ಒಲಿಯುವುದೇ ಕಾದು ನೋಡಬೇಕು.

ಬಿ.ವಿ ನಾಗರತ್ನ 

30.10.1962 ರಲ್ಲಿ ಜನಿಸಿದ ಬಿ.ವಿ ನಾಗರತ್ನಅವರು  ಸುಪ್ರೀಂಕೋರ್ಟ್  ಮುಖ್ಯ ನ್ಯಾಯಾಧೀಶರಾಗಿದ್ದ (19 ಜೂನ್ 1989 ರಿಂದ17 ಡಿಸೆಂಬರ್1989) ಇ.ಎಸ್‌ ವೆಂಕಟರಮಣಯ್ಯ ಅವರ ಪುತ್ರಿ. ಬೆಂಗಳೂರಿನಲ್ಲಿ  1987ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 

ಬೆಂಗಳೂರಿನಲ್ಲಿಯೇ ಕಾನ್ಸ್ಟಿಟ್ಯೂಷನಲ್ ಲಾ, ಇನ್ಶೂರನ್ಸ್ ಲಾ, ಅಡ್ಮಿನಿಸ್ಟರೇಟಿವ್ ಪಬ್ಲಿಕ್ ಲಾ, ಫ್ಯಾಮಿಲಿ ಲಾ ಸೇರಿದಂತೆ ವಿವಿದ ವಿಷಯಗಳಲ್ಲಿ ಅಭ್ಯಾಸ ನಡೆಸಿದರು. 

2008 ಫೆಬ್ರವರಿ 18 ರಂದು  ಕರ್ನಾಟಕ ಹೈ ಕೋರ್ಟ್ ಹೆಚ್ಚುವರಿ ನ್ಯಾಯಧೀಶೆಯಾಗಿ ಆಯ್ಕೆಯಾದ ಅವರನ್ನು 2010 ಫೆಬ್ರವರಿ 17 ರಂದು ಕರ್ನಾಟಕ ಹೈ ಕೋರ್ಟ್ ಖಾಯಂ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಯಿತು.  

ನ್ಯಾ.ನಾಗರತ್ನ ಅವರು commercial and constitutional law ಅಡಿಯಲ್ಲಿ ಬರುವ ಅನೇಕ   ಪ್ರಕರಣಗಳಲ್ಲಿ  ನ್ಯಾಯತೀರ್ಮಾನ  ನೀಡಿದ್ದಾರೆ.  ಇದೀಗ ದೇಶದ ಮೊದಲ ಮಹಿಳಾ ನ್ಯಾಯಾಧೀಶದ ನೇಮಕ ವಿಚಾರದಲ್ಲಿ ನಮ್ಮ ರಾಜ್ಯದ ನ್ಯಾ. ನಾಗರತ್ನ ಅವರ ಹೆಸರು ಮುಂಚೂಣಿಯಲ್ಲಿದೆ. 

click me!