Murdoli Forest: ನಡುರಾತ್ರಿ ಕಾರ್‌ಗೆ ಡಿಕ್ಕಿಯಾದ ಹುಲಿ, ತೆವಳಿಕೊಂಡು ಹೋಗಿ ಪ್ರಾಣಬಿಟ್ಟಿತು!

By Santosh Naik  |  First Published Aug 11, 2023, 3:56 PM IST

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನವೆಗಾಂವ್-ನಾಗ್ಜಿರಾ ಕಾರಿಡಾರ್‌ನಲ್ಲಿ ವಯಸ್ಕ ಗಂಡು ಹುಲಿ ಕಾರ್‌ಗೆ ಢಿಕ್ಕಿಯಾಗಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಮುಂಬೈ(ಆ.11): ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ ಎಂದು ವರದಿಯಾಗಿ ಇನ್ನು ಒಂದು ವಾರವೂ ಕಳೆದಿಲ್ಲ. ಅದರ ವೇಳೆಗಾಗಲೇ ಮಹಾರಾಷ್ಟ್ರದಲ್ಲಿ ವಯಸ್ಕ ಗಂಡು ಹುಲಿಯೊಂದು ಕಾರ್‌ಗೆ ಢಿಕ್ಕಿಯಾಗಿ ಮೃತಪಟ್ಟಿದೆ.  ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಮುರ್ಡೋಲಿ ಅರಣ್ಯ ವ್ಯಾಪ್ತಿಯಲ್ಲಿರುವ ನವೆಗಾಂವ್-ನಾಗ್ಜಿರಾ ಕಾರಿಡಾರ್‌ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಗೊಂಡಿಯಾದಿಂದ ಕೊಹ್ಮಾರಾಗೆ ಸಂಪರ್ಕಿಸುವ ಅಪಘಾತದ ಸ್ಥಳವು ನವೆಗಾಂವ್-ನಾಗ್ಜಿರಾ ಕಾರಿಡಾರ್ ಅಡಿಯಲ್ಲಿ ಬರುತ್ತದೆ, ಈ ಪ್ರದೇಶದಲ್ಲಿ ಸಾಮಾನ್ಯವಾಗಿ ರಾತ್ರಿಯ ವೇಳೆ ಹುಲಿಗಳು ಹಾಗೂ ಇತರ ಪ್ರಾಣಿಗಳು ಸಂಚಾರ ನಡೆಸುತ್ತಿರುತ್ತದೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನವೆಗಾಂವ್-ನಾಗ್ಜಿರಾ ಕಾರಿಡಾರ್‌ನಲ್ಲಿ ಗುರುವಾರ ಕಾರಿಗೆ ಡಿಕ್ಕಿ ಹೊಡೆದು ವಯಸ್ಕ ಹುಲಿ ಸಾವನ್ನಪ್ಪಿದೆ ಎಂದು ಹಿರಿಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೊಹ್ಮಾರಾ-ಗೊಂಡಿಯಾ ರಸ್ತೆಯ ಮುರ್ಡೋಲಿ ಅರಣ್ಯದಲ್ಲಿ ರಸ್ತೆ ದಾಟುತ್ತಿದ್ದಾಗ ಸುಮಾರು ಎರಡು ವರ್ಷ ವಯಸ್ಸಿನ ಹುಲಿ ಕಾರ್‌ಗೆ ಡಿಕ್ಕಿ ಹೊಡೆದಿದೆ ಎಂದು ಅರಣ್ಯ ಉಪ (ಡಿಸಿಎಫ್) ಗೊಂಡಿಯಾ ವಿಭಾಗದ ಉಪ ಸಂರಕ್ಷಣಾಧಿಕಾರಿ ಪ್ರಮೋದ್ ಪಂಚಭಾಯ್ ತಿಳಿಸಿದ್ದಾರೆ.

ಕಾರ್‌ ಹೊಡೆದ ರಭಸಕ್ಕೆ ಹುಲಿಯ ಮುಂಗಾಲು ಮುರಿದು ಹೋಗಿತ್ತು. ಕೆಲ ಹೊತ್ತು ರಸ್ತೆಯಲ್ಲೇ ಕಾಲು ನೋಡಿಕೊಂಡು ಕುಳಿತಿದ್ದ ಹುಲಿ, ಕಾರ್‌ನ ಹೆಡ್‌ಲೈಟ್‌ ಬೆಳಕಿನ ಕಾರಣದಿಂದಾಗಿ ಕೆಲ ಹೊತ್ತಿನಲ್ಲಿ ಎದುರಿಗೆ ಇದ್ದ ಪೊದೆಗೆ ಕುಂಟುತ್ತಾ, ತೆವಳುತ್ತಾ ಸಾಗಿತ್ತು. ಹುಲಿಗೆ ಪೆಟ್ಟಾಗಿದ್ದನ್ನು ದಾರಿಹೋಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 7.30ರ ವೇಳೆಗೆ ಗೊಂಡಿಯಾ ವಿಭಾಗದ ಗೋರೆಗಾಂವ್ ವ್ಯಾಪ್ತಿಯ ಕಂಪಾರ್ಟ್‌ಮೆಂಟ್ ಸಂಖ್ಯೆ 419 ರಿಂದ ಹುಲಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡ ಪ್ರಾಣಿಯು ನಾಗ್ಪುರದ ಗೊರೆವಾಡದಲ್ಲಿರುವ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ತೆರಳುವ ಮಾರ್ಗಮಧ್ಯೆ ಸಾವನ್ನಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ. 

ಗೋರೆವಾಡದಲ್ಲಿರುವ ವನ್ಯಜೀವಿ ರಕ್ಷಣಾ ಕೇಂದ್ರದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ. 

ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು, ಮುಂದಾಗಿದ್ದೇನು?

ಈ ಅಪಘಾತವು ರಾತ್ರಿಯ ವೇಳೆ ಅರಣ್ಯ ವ್ಯಾಪ್ತಿಯ ರಸ್ತೆಗಳನ್ನು ಸಂಚಾರಕ್ಕೆ ಬಂದ್‌ ಮಾಡುವ ಅಗತ್ಯವನ್ನು ಎತ್ತಿ ತೋರಿಸಿದೆ. ಅರಣ್ಯ ಇಲಾಖೆಯು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಬೇಕು ಮತ್ತು ನಿಯಮಾನುಸಾರ ಸುರಕ್ಷಿತ ಅಂಡರ್‌ಪಾಸ್ ಮಾರ್ಗವನ್ನು ನಿರ್ಮಿಸಬೇಕು ಎಂದು ಗೌರವ ವನ್ಯಜೀವಿ ವಾರ್ಡನ್ ಸಾವನ್ ಬಹೇಕರ್ ಹೇಳಿದರು. 

Tap to resize

Latest Videos

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಮಹಾರಾಷ್ಟ್ರದ ನಾಗ್ಜೀರ ಅರಣ್ಯ‌ ಭಾಗದಲ್ಲಿ ವಾಹನವೊಂದರಿಂದ ಅಪಘಾತಕ್ಕೀಡಾದ ಗಂಡುಹುಲಿ ತೀವ್ರವಾಗಿ ಗಾಯಗೊಂಡು,ನಂತರ ಮೃತಪಟ್ಟಿದೆ. 😥

ಕಾಡುಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಅತ್ಯಂತ ಜವಬ್ದಾರಿಯಿಂದ ಸಂಚರಿಸಬೇಕು. ಅರಣ್ಯ ಕಾನೂನುಗಳನ್ನು ತಪ್ಪದೆ ಪಾಲಿಸಬೇಕು.‌ ಯಾವುದೇ ಕಾರಣಕ್ಕೂ ವೇಗಮಿತ ಮೀರಬಾರದು

VC: pic.twitter.com/t51NFouYKA

— ಪರಿಸರ ಪರಿವಾರ (@Parisara360)
click me!