
ಉತ್ತರ ಭಾರತ ಉಷ್ಣ ಗಾಳಿಯಿಂದ ಸುಸ್ತಾಗಿದೆ. ಇದಕ್ಕೆ ಈ ಕಳ್ಳನೇ ಸಾಕ್ಷಿ. ಕಳ್ಳತನ ಮಾಡಲೆಂದು ಮನೆಗೆ ನುಗ್ಗಿದ ಈತ ಎಸಿಯ ಥಂಡಿ ಹವಾಕ್ಕೆ ಆಹಾ ಎಂದು ನಿದ್ದೆಗೆ ಜಾರಿದ್ದಾನೆ. ಬೆಳಗ್ಗೆ ಪೋಲೀಸರು ಬಂದು ಎಚ್ಚರಿಸಿದಾಗ ತಡಬಡಾಯಿಸಿದ್ದಾನೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಭಾನುವಾರ (ಜೂನ್ 2) ವ್ಯಕ್ತಿಯೊಬ್ಬ ದರೋಡೆ ಮಾಡಲು ಪ್ರವೇಶಿಸಿದ್ದ ಮನೆಯ ಮಹಡಿಯಲ್ಲಿ ಶಾಂತಿಯುತವಾಗಿ ಮಲಗಿದ್ದನ್ನು ಪೋಲೀಸರು ನೋಡಿದ್ದಾರೆ. ನಂತರ ಆತನನ್ನು ಎಬ್ಬಿಸಿ ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ನಿವಾಸದಲ್ಲಿ ಏರ್ ಕಂಡಿಷನರ್ ಆನ್ ಮಾಡಿ ನಿದ್ರೆಗೆ ಜಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ವ್ಯಕ್ತಿ ಲಕ್ನೋದ ಇಂದಿರಾನಗರದ ಡಾ ಸುನೀಲ್ ಪಾಂಡೆ ಎಂಬುವವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ರಾತ್ರಿ ಹೊತ್ತಲ್ಲಿ ಮನೆಯ ಮುಂಭಾಗದ ಗೇಟ್ ತೆರೆದು ಒಳನುಗ್ಗಿದ್ದಾನೆ.
ಹೇಗೂ ಯಾರೂ ಇಲ್ಲವಲ್ಲ ಎಂದು ಮನೆಯ ಡ್ರಾಯಿಂಗ್ ರೂಮಿಗೆ ಹೋಗಿ ಏರ್ ಕಂಡಿಷನರ್ ಆನ್ ಮಾಡಿ, ನೆಲದ ಮೇಲೆ ಆರಾಮವಾಗಿ ಮಲಗಿದ್ದಾನೆ. ಮನೆಯ ಮುಂಭಾಗದ ಗೇಟ್ ತೆರೆದಿರುವುದನ್ನು ಕಂಡು, ಡಾ ಪಾಂಡೆಯ ನೆರೆಹೊರೆಯವರು ಅವರಿಗೆ ಕರೆ ಮಾಡಿದ್ದಾರೆ. ಆದರೆ, ಆ ವೇಳೆ ಅವರು ಲಕ್ನೋದಲ್ಲಿ ಇಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಏರ್ ಕಂಡಿಷನರ್ ಚಾಲನೆಯಲ್ಲಿತ್ತು ಮತ್ತು ವ್ಯಕ್ತಿ ಗಾಢ ನಿದ್ದೆಯಲ್ಲಿದ್ದ. ಈ ಸಂದರ್ಭದಲ್ಲಿ ಪೋಲೀಸರು ಫೋಟೋ ತೆಗೆದಿದ್ದು ಆತ ಫೋನ್ ಹಿಡಿದೇ ನಿದ್ರೆ ಮಾಡಿದ್ದಾನೆ. ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ ವ್ಯಕ್ತಿ ನಿದ್ದೆಗೆ ಜಾರಿದ್ದ ಎಂದು ಉತ್ತರ ವಲಯ ಡಿಸಿಪಿ ಆರ್ ವಿಜಯ್ ಶಂಕರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ