ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ದೇಶದ ಹಿಂದುಗಳ ನರಮೇಧ ಮಾಡಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಭೋಪಾಲ್ (ಸೆ.14): ಸನಾತನ ಧರ್ಮ ಡೆಂಘೆ, ಮಲೇರಿಯಾ ಇದ್ದ ರೀತಿ. ಅದನ್ನು ವಿರೋಧಿಸುವುದು ಮಾತ್ರವಲ್ಲ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಮಧ್ಯಪ್ರದೇಶದ ಬಿನಾದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂಡಿ ಒಕ್ಕೂಟ ಹಾಗೂ ಇಂಡಿ ಒಕ್ಕೂಟದ ಭಾಗವಾಗಿರುವ ಡಿಎಂಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದ ಮೇಲೆ ಮಾತ್ರವಲ್ಲ ಇಡೀ ಭಾರತದ ಮೌಲ್ಯಗಳ ಮೇಲೆ ಇಂಡಿ ಒಕ್ಕೂಟ ದಾಳಿ ಮಾಡುತ್ತಿದೆ. ಸನಾತನ ಧರ್ಮದಿಂದಲೇ ಇಂದು ಭಾರತ ಒಗ್ಗಟ್ಟಾಗಿದೆ ಎಂದು ಹೇಳುವ ಮೂಲಕ ಈ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸನಾತನ ಧರ್ಮಕ್ಕೆ ಅಂತ್ಯ ಹಾಡುವ ಹುನ್ನಾರ ಮಾಡುತ್ತಿದ್ದಾರೆ. ಇಡೀ ದೇಶಕ್ಕೆ ಸನಾತನದ ಬಗ್ಗೆ ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಸನಾತನ ಧರ್ಮವನ್ನು ಪಾಲಿಸುವವರು ಇಂಡಿ ಒಕ್ಕೂಟದ ಆಶಯದ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಅವರು ಸನಾತನ ಧರ್ಮವನ್ನು ದೇಶದಲ್ಲಿ ನಾಶ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದರು.
ಇಂದಿ ಒಕ್ಕೂಟ ಹಿಂದೂ ಧರ್ಮದ ವಿರೋಧಿಗಳ ಒಕ್ಕೂಟ. ನಮ್ಮ ಧರ್ಮದ ಮೇಲಿನ ದಾಳಿಯ ವಿರುದ್ಧ ಸಿಡಿದೇಳಬೇಕು. ಗಾಂಧಿ ಹಾಗೂ ತಿಲಕರು ಕೂಡ ಹಿಂದೂ ಧರ್ಮಕ್ಕಾಗಿಯೇ ಬದುಕಿದರು. ಈಗ ಈ ಇಂಡಿ ಒಕ್ಕೂಟ ಸನಾತನ ಧರ್ಮದ ನಾಶಕ್ಕೆ ಹೊರಟಿದೆ. ಇಂಡಿ ಒಕ್ಕೂಟದ ವಿರುದ್ಧ ಸನಾತನಿಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.
ಮಧ್ಯಪ್ರದೇಶದ ಬಿನಾದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಡಿ ಒಕ್ಕೂಟಕ್ಕೆ ಈಗ ನಾಯಕರಿಲ್ಲ. ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಮಾಡಿದೆ. ಸನಾತನ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಮೈತ್ರಿ ಅನುಷ್ಠಾನಕ್ಕೆ ಬಂದಿದೆ. ದೇಶ ಮತ್ತು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡುವ ಕುತಂತ್ರ ಮಾಡುತ್ತಿದೆ. ಸಾವಿರಾರು ವರ್ಷಗಳ ನಂಬಿಕೆಯ ಮುಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದೇ ಅವರ ಉದ್ದೇಶ. ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ್ ರಂತವರಿಗೆ ಸ್ಫೂರ್ತಿಯಾಗಿರುವ ಸನಾತನ ಧರ್ಮ. ಇಂಥ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಲು ಈ ಒಕ್ಕೂಟ ಹೊರಟಿದೆ. ಅವರು ಈಗಲೇ ಓಪನ್ ಆಗಿ ಹಿಂದೂ ಧರ್ಮವನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾಳೆ ಈ ಕಾರ್ಯವನ್ನು ಇನ್ನಷ್ಟು ಹೆಚ್ಚು ಮಾಡಲಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಇಂತವರನ್ನ ನಾವು ತಡೆಗಟ್ಟಬೇಕಿದೆ ಎಂದು ಹೇಳಿದ್ದಾರೆ.
ಉದಯನಿಧಿ ಸ್ಟ್ಯಾಲಿನ್ ಮಾತ್ರವಲ್ಲದೆ ತಮಿಳುನಾಡು ಸರ್ಕಾರದ ಉನ್ನತ ಶಿಕ್ಷಣ ಸಚಿವ ಪನ್ಮುಡಿ ಕೂಡ, ನಾವು ಇಂಡಿ ಒಕ್ಕೂಟವನ್ನು ರಚಿಸಿಕೊಂಡಿರುವುದೇ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಸಲುವಾಗಿ ಎಂದು ಹೇಳಿದ್ದರು. ಅದರೊಂದಿಗೆ ಡಿಎಂಕೆಯ ಸಂಸದ ಎ.ರಾಜಾ ಕೂಡ ಸನಾತನ ಧರ್ಮ ಡೆಂಘೆ, ಮಲೇರಿಯಾ ಮಾತ್ರವಲ್ಲ ಸನಾತನ ಧರ್ಮ ಎನ್ನುವುದು ಏಡ್ಸ್ ಹಾಗೂ ಕುಷ್ಠರೋಗ ಇದ್ದಂತೆ ಎಂದು ಹೇಳುವ ಮೂಲಕ ವಿವಾದಕ್ಕೆ ತುಪ್ಪ ಸುರಿದಿದ್ದರು.
ಸ್ಟಾಲಿನ್ VS ಸನಾತನ ಧರ್ಮ ದಂಗಲ್: ಗಣೇಶ ಪೆಂಡಾಲ್‌ಗೆ ಸನಾತನ ಧರ್ಮ ಹೆಸರಿಡಲು ಸೂಚನೆ..!
ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಕೂಡ, ಯಾವ ಧರ್ಮದಲ್ಲಿ ಸಮಾನತೆ ಇರೋದಿಲ್ಲವು ಅದು ರೋಗಕ್ಕೆ ಸಮಾನ ಎಂದು ಹೇಳುವ ಮೂಲಕ ಸ್ಟ್ಯಾಲಿನ್ ಅವರ ಹೇಳಿಕೆಗೆ ಬಹುತೇಕ ಬೆಂಬಲಿಸಿ ಮಾತನಾಡಿದ್ದರು. ಇದರ ಕುರಿತಾಗಿ ಕಾಂಗ್ರೆಸ್‌ನ ವೇಣುಗೋಪಾಲ್ ಕೂಡ ಉದಯನಿಧಿ ಸ್ಟ್ಯಾಲಿನ್ ಅವರ ಮಾತನ್ನು ಖಂಡಿಸುವ ಗೋಜಿಗೆ ಹೋಗಿರಲಿಲ್ಲ. ಈ ಎಲ್ಲದರ ನಡುವೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಕರೆ ನೀಡಿದ್ದ ಉದಯನಿಧಿ ಸ್ಟ್ಯಾಲಿನ್ ಕೂಡ ಇಲ್ಲಿಯವರೆಗೂ ತಮ್ಮ ಮಾತಿಗೆ ಕ್ಷಮೆ ಕೇಳಿಲ್ಲ.
‘ಸನಾತನ’ ವಿವಾದ ಹಿಂದೆ ವಿದೇಶಿ ಷಡ್ಯಂತ್ರ: ಚಕ್ರವರ್ತಿ ಸೂಲಿಬೆಲೆ