ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಎಳೆದೊಯ್ದ ಕಾರು!

By Kannadaprabha NewsFirst Published Jan 20, 2023, 8:16 AM IST
Highlights

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೂ ಕುಡುಕ ಕಾರು ಚಾಲಕನೊಬ್ಬ 10 ರಿಂದ 15 ಮೀಟರ್‌ ದೂರ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ನಡೆದಿದೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾರೊಂದು ಯುವತಿಗೆ ಡಿಕ್ಕಿ ಹೊಡೆದು ಆಕೆಯನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಘಟನೆ ಇನ್ನೂ ಹಸಿರಾಗಿರುವಾಗಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೂ ಕುಡುಕ ಕಾರು ಚಾಲಕನೊಬ್ಬ ಅದೇ ರೀತಿ 10-15 ಮೀಟರ್‌ ದೂರ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ನಡೆದಿದೆ. ಗುರುವಾರ ಬೆಳಗಿನ ಜಾವ ಮಹಿಳಾ ಆಯೋಗದ (Women Commission) ಅಧ್ಯಕ್ಷೆ ಸ್ವಾತಿ ಮಲಿವಾಲ್‌ (Swati Maliwal) ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ಚಾಲಕ ಸ್ವಾತಿಯ ಕೈ ಕಿಟಕಿಯ ಗಾಜಿನ ನಡುವೆ ಸಿಕ್ಕಿಬಿದ್ದಿರುವಾಗ ಕಾರು ಓಡಿಸಿಕೊಂಡು ಹೋಗಿದ್ದಾನೆ.

ಈ ಕುರಿತು ಪೊಲೀಸರಿಗೆ ಸ್ವಾತಿ ಮಲಿವಾಲ್‌ ದೂರು ನೀಡಿದ್ದು, 47 ವರ್ಷದ ಕಾರು ಚಾಲಕನನ್ನು ಬಂಧಿಸಲಾಗಿದೆ. ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ದೆಹಲಿ ಪೊಲೀಸರಿಂದ ಹೆಚ್ಚಿನ ಮಾಹಿತಿ ಕೇಳಿದೆ.

ತುಂಡುಡುಗೆ ಸಹವಾಸ ಉರ್ಫಿಗೆ ಸಂಕಟ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ!

ಘಟನೆ ನಡೆದಿದ್ದು ಹೇಗೆ:

ಸ್ವಾತಿ ನೀಡಿರುವ ದೂರಿನ ಪ್ರಕಾರ, ಬುಧವಾರ ಮಧ್ಯರಾತ್ರಿ ಏಮ್ಸ್‌ನ ಗೇಟ್‌ ನಂ.2ರ ಬಳಿ ಅವರ ತಂಡವು ಮಹಿಳಾ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ಸ್ವಾತಿ ಒಂಟಿಯಾಗಿ ನಿಂತಿದ್ದರು. ಆಗ ವ್ಯಕ್ತಿಯೊಬ್ಬ ಬಂದು ಕಾರು ನಿಲ್ಲಿಸಿ ‘ಬಾ, ಕಾರು ಹತ್ತು’ ಎಂದು ಕರೆದಿದ್ದಾನೆ. ಸ್ವಾತಿ ನಿರಾಕರಿಸಿದಾಗ ಮುಂದೆ ಹೋಗಿ ಮತ್ತೆ ಮರಳಿ ಬಂದು ಇನ್ನೊಮ್ಮೆ ‘ಕಾರು ಹತ್ತು’ ಎಂದು ಕರೆದಿದ್ದಾನೆ. ಆಗ ಸ್ವಾತಿ ಕಾರಿನ ಕಿಟಕಿಯೊಳಗೆ ಕೈಹಾಕಿ ಡ್ರೈವರ್‌ನನ್ನು ಹಿಡಿದು ಬೈಯಲು ಮುಂದಾಗಿದ್ದಾರೆ. ಆಗ ಇದ್ದಕ್ಕಿದ್ದಂತೆ ಕಾರಿನ ಗಾಜು ಏರಿಸಿದ ಚಾಲಕ ಕಾರನ್ನು ಮುಂದೆ ಒಯ್ದಿದ್ದಾನೆ. ಪರಿಣಾಮ, ಕೈ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಸ್ವಾತಿಯನ್ನು ಕಾರು 10-15 ಮೀಟರ್‌ನಷ್ಟುಎಳೆದೊಯ್ದಿದೆ.

ಮಹಿಳಾ ಆಯೋಗಕ್ಕೆ ಇನ್ನಷ್ಟು ಬಲ: ಸಿಎಂ ಬೊಮ್ಮಾಯಿ ಭರವಸೆ

ನಂತರ ಸ್ವಾತಿ ಆಘಾತದಿಂದ ಫುಟ್‌ಪಾತ್‌ ಬಳಿ ನಿಂತಿದ್ದಾಗ ಪೊಲೀಸ್‌ ಗಸ್ತು ವಾಹನ ಬಂದಿದೆ. ಅವರಿಗೆ ಸ್ವಾತಿ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಪತ್ತೆಹಚ್ಚಿ ದಕ್ಷಿಣ ದೆಹಲಿಯ ಸಂಗಮ್‌ ವಿಹಾರ್‌ ಪ್ರದೇಶದ ಹರೀಶ್‌ ಚಂದ್ರ ಎಂಬುವನನ್ನು ಬಂಧಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆಯಾದ ನನಗೇ ಈ ಸ್ಥಿತಿಯಾದರೆ ದೆಹಲಿಯಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು ಎಂದು ಸ್ವಾತಿ ಟ್ವೀಟ್‌ ಮಾಡಿದ್ದಾರೆ.

कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।

— Swati Maliwal (@SwatiJaiHind)

 

click me!