ಹಲವು ತಲೆಮಾರುಗಳ ಕನಸು ಕಳೆದ 10 ವರ್ಷಗಳಲ್ಲಿ ನನಸು: ಮೋದಿ

By Kannadaprabha NewsFirst Published Feb 11, 2024, 7:20 AM IST
Highlights

ಅನೇಕ ತಲೆಮಾರುಗಳು ಕಂಡಿದ್ದ ಕನಸುಗಳು 17ನೇ ಲೋಕಸಭೆ ಅವಧಿಯಲ್ಲಿ ನನಸಾಗಿವೆ. ಈ ಮೂಲಕ ಹಲವಾರು ದಶಕಗಳ ಕಾಲ ಮಾಡಲು ಆಗದ ಕಾರ್ಯಗಳನ್ನು ನಮ್ಮ 10 ವರ್ಷಗಳ ಅವಧಿಯಲ್ಲಿ ಸಾಧಿಸಲಾಗಿದೆ.   ನಮ್ಮ ಶ್ರಮದಿಂದ ಇನ್ನು 25 ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ ಹೇಳಿದ್ದು

  • ತ್ರಿವಳಿ ತಲಾಖ್‌ ರದ್ದು, 370 ವಿಧಿ ರದ್ದು, ಮಹಿಳಾ ಮೀಸಲು ನಮ್ಮ ಸಾಧನೆ
  • ರಾಮಮಂದಿರ ನಿರ್ಮಾಣವು ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್ ಪ್ರತೀಕ
  • ಹೊಸ ಸಂಸತ್‌ ಭವನದ ಕನಸು ಅತ್ಯಲ್ಪ ಅವಧಿಯಲ್ಲಿ ಸಾಕಾರ ಮಾಡಿದ್ದೇವೆ
  • ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಇವು ಒಟ್ಟಿಗೇ ಆಗುವುದು ಅಪರೂಪ, ಆದರೆ ನಮ್ಮ ಅವಧಿಯಲ್ಲಾಗಿದೆ
  • ಇನ್ನು 25 ವರ್ಷದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ
  •  ಕೆಲವರಿಗೆ ಚುನಾವಣೆ ಎಂದರೆ ನಡುಕ, ನನಗೆ ಸವಾಲು ಬಲು ಇಷ್ಟ
  •  ಮುಂದಿನ ಚುನಾವಣೆಗಳಿಂದ ದೇಶದ ವೈಭವ ಮತ್ತಷ್ಟು ಹೆಚ್ಚಳ


ನವದೆಹಲಿ: ‘ಅನೇಕ ತಲೆಮಾರುಗಳು ಕಂಡಿದ್ದ ಕನಸುಗಳು 17ನೇ ಲೋಕಸಭೆ ಅವಧಿಯಲ್ಲಿ ನನಸಾಗಿವೆ. ಈ ಮೂಲಕ ಹಲವಾರು ದಶಕಗಳ ಕಾಲ ಮಾಡಲು ಆಗದ ಕಾರ್ಯಗಳನ್ನು ನಮ್ಮ 10 ವರ್ಷಗಳ ಅವಧಿಯಲ್ಲಿ ಸಾಧಿಸಲಾಗಿದೆ. ನಮ್ಮ ಅವಧಿಯು ಸುಧಾರಣೆ, ಸಾಧನೆ ಹಾಗೂ ಪರಿವರ್ತನೆಯ ಪರ್ವವಾಗಿದ್ದು, ದೇಶವು ಭಾರಿ ಬದಲಾವಣೆಯತ್ತ ದಾಪುಗಾಲು ಹಾಕುವ ಕಾಲವಾಗಿ ಮಾರ್ಪಟ್ಟಿದೆ. ನಮ್ಮ ಶ್ರಮದಿಂದ ಇನ್ನು 25 ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ನಡೆದ ಅಂತಿಮ ಅಧಿವೇಶನದ ಕೊನೆಯ ದಿನವಾದ ಶನಿವಾರ ಸಂಜೆ ಸುದೀರ್ಘವಾಗಿ ಮಾತನಾಡಿದ ಮೋದಿ, ‘ನಮ್ಮ ಅವಧಿಯಲ್ಲಿ ಅನೇಕ ಸುಧಾರಣೆಗಳು ಸಂಭವಿಸಿದವು. ಅನೇಕ ಸವಾಲುಗಳನ್ನು ನಾವು ಎದುರಿಸಿ ಹಲವು ಮಹತ್ವದ ಕ್ರಮ ಕೈಗೊಂಡೆವು. ಹೀಗಾಗಿ ಇಂದು ದೇಶವು ಬದಲಾವಣೆಯತ್ತ ಸಾಗುತ್ತಿದೆ. ಸಂವಿಧಾನದ 370ನೇ ಕಲಂ ರದ್ದತಿ, ತ್ರಿವಳಿ ತಲಾಖ್‌ ರದ್ದತಿಗಳು ನಮ್ಮ ಕಾಲದಲ್ಲಿ ಆದವು. ಶಾಸನಸಭೆಗಳಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಯಿತು. ಇಂಥ ಕ್ರಮಗಳನ್ನು ಅನೇಕ ತಲೆಮಾರುಗಳು ನಿರೀಕ್ಷಿಸಿದ್ದವು’ ಎಂದು ಹೇಳಿದರು.

ಫೆ.13ಕ್ಕೆ ಯುಎಇಗೆ ಪ್ರಧಾನಿ ಭೇಟಿ: ಅಬುಧಾಬಿಯ ಮೊದಲ ಹಿಂದೂ ದೇಗುಲಕ್ಕೆ ಮೋದಿ ಚಾಲನೆ

ಇನ್ನು ಹೊಸ ಸಂಸತ್ತಿನ ಕಟ್ಟಡದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ‘ನಮಗೆ ಹೊಸ ಕಟ್ಟಡ ಬೇಕು’ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಈ ನಿಟ್ಟಿನಲ್ಲಿ ಎಂದೂ ನಿರ್ಧಾರ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಹೊಸ ಸಂಸತ್ ಕಟ್ಟಡ ನಿರ್ಮಿಸುವ ದಿಟ್ಟ ನಿರ್ಧಾರ ಕೈಗೊಂಡಿತು. ಅದಕ್ಕಾಗಿಯೇ ನಾವು ಇಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದೇವೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಇಂತಹ ಕೆಲಸಗಳು ಪೂರ್ಣಗೊಂಡಿವೆ’ ಎಂದು ಬಣ್ಣಿಸಿದರು. ಅಲ್ಲದೆ ಈ ಅವಧಿಯಲ್ಲಿ ನಮಗೆ ಜಿ20 ಶೃಂಗದ ಅಧ್ಯಕ್ಷತೆ ವಹಿಸುವ ಅವಕಾಶ ಒದಗಿಬಂತು. ಈ ವೇಳೆ ನಾವು ದೇಶದ ಪ್ರತಿ ರಾಜ್ಯಗಳನ್ನೂ ಸೇರ್ಪಡೆ ಮಾಡುವ ಮೂಲಕ ಇಡೀ ವಿಶ್ವದ ಮುಂದೆ ದೇಶದ ಸಾಮರ್ಥ್ಯ ಮತ್ತು ಅದರ ಹೆಗ್ಗುರುತನ್ನು ಪ್ರದರ್ಶನ ಮಾಡುವಲ್ಲಿ ಸಫಲವಾದೆವು’ ಎಂದು ಪ್ರಧಾನಿ ಹೇಳಿದರು.

‘ನಮ್ಮ 10 ವರ್ಷಗಳು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಕಾಲವಾಗಿದೆ. ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯನ್ನು ಒಟ್ಟಿಗೇ ನೋಡುವುದು ಅಪರೂಪ. ಇದರಲ್ಲಿ 21ನೇ ಶತಮಾನದ ಭಾರತದ ಬಲವಾದ ಅಡಿಪಾಯವನ್ನು ಕಾಣಬಹುದು. ಹೀಗಾಗಿ ಇಂಥ ಸಾಧನೆ ಮಾಡಿದ್ದಕ್ಕಾಗಿ 17ನೇ ಲೋಕಸಭೆಗೆ ಜನರು ಆಶೀರ್ವಾದ ಮಾಡುವುದು ಖಂಡಿತ’ ಎಂದು ಪ್ರಧಾನಿ ಹರ್ಷಿಸಿದರು.

ಕಳೆದ 10 ವರ್ಷದಲ್ಲಿ ಜನರ ಕಷ್ಟ 10 ಪಟ್ಟು ಹೆಚ್ಚಳ: ಸಿದ್ದು ತಿವಿತ

‘ನಮ್ಮ ಅವಧಿಯಲ್ಲಿ ತೃತೀಯ ಲಿಂಗಿಗಳಿಗೂ ನ್ಯಾಯ ಒದಗಿಸಲಾಯಿತು. ಅವರಿಗೂ ಪದ್ಮ ಪ್ರಶಸ್ತಿಗಳನ್ನು ನೀಡಲಾಯಿತು. ವಿದ್ಯಾರ್ಥಿಗಳ ಹಿತರಕ್ಷಣೆಗೆ ಪರೀಕ್ಷಾ ಅಕ್ರಮ ತಡೆ ಕಾಯ್ದೆ ಜಾರಿಗೊಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು ರದ್ದುಗೊಳಿಸುವುದು ಅತ್ಯುನ್ನತ ಅಂಶವಾಗಿದೆ. ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ದೂರವಿದ್ದರು. ಅವರಿಗೆ ಇಂದು ನ್ಯಾಯ ಒದಗಿಸಿದ್ದೇವೆ. ಉಗ್ರರ ಹೆಡೆಮುರಿ ಕಟ್ಟಲು ಕಾನೂನು ಬಲಪಡಿಸಿದ್ದೇವೆ’ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ ಮೋದಿ, ಕಳೆದ ಐದು ವರ್ಷಗಳಲ್ಲಿ, ‘ಶತಮಾನದ ಅತಿದೊಡ್ಡ ಬಿಕ್ಕಟ್ಟು’ ಸೃಷ್ಟಿಯಾಗಿತ್ತು. ಆದರೆ ಅದನ್ನು ಎಲ್ಲ ನಾವು ಮೆಟ್ಟಿ ನಿಂತೆವು ಎಂದು ಸ್ಮರಿಸಿದರು.

ರಾಮಮಂದಿರ ಗೊತ್ತುವಳಿಗೆ ಶ್ಲಾಘನೆ:

ಇನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣದ ಪರ ಗೊತ್ತುವಳಿಯು ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದನ್ನು ಶ್ಲಾಘಿಸಿದ ಮೋದಿ, ‘ಈ ಕ್ರಮವು ದೇಶದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಯುವಕರು ಹೆಮ್ಮೆ ಪಡುವಂತೆ ಮಾಡುತ್ತದೆ. ರಾಮ ಮಂದಿರ ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ನ ಪ್ರತೀಕ’ ಎಂದರು. ಇದೇ ವೇಳೆ ರಾಮಮಂದಿರ ನಿರ್ಮಾಣವನ್ನು ಬಲವಾಗಿ ವಿರೋಧಿಸಿದ ವಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ‘ಇಂಥದ್ದನ್ನೆಲ್ಲಾ ಮಾಡಲು ಎಲ್ಲರಿಗೂ ಧೈರ್ಯ ಇಲ್ಲ ಎಂಬುದನ್ನು ಒಪ್ಪಲೇ ಬೇಕು. ಆದರೆ ಕೆಲವು ವ್ಯಕ್ತಿಗಳು ಇಂಥದ್ದನ್ನೆಲ್ಲಾ ಎದುರಿಸುವ ಶಕ್ತಿ ಹೊಂದಿದ್ದರೆ ಇನ್ನು ಕೆಲವರು ಯುದ್ಧ ಭೂಮಿಯಿಂದ ಪರಾರಿಯಾಗುತ್ತಾರೆ’ ಎಂದರು.

ಚುನಾವಣೆಯಿಂದ ದೇಶದ ವೈಭವ ಹೆಚ್ಚಳ:

ಈ ಬೇಸಿಗೆಯಲ್ಲಿ ನಡೆಯುವ ಲೋಕಸಭೆ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ‘ಕೆಲವರಿಗೆ ಚುನಾವಣೆ ನಡುಕ ಸೃಷ್ಟಿಸಿರಬಹುದು. ಆದರೆ ನನಗೆ ಸವಾಲುಗಳು ಎಂದರೆ ಬಲು ಇಷ್ಟ. ಚುನಾವಣೆಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ದೇಶದ ವೈಭವ ಹೆಚ್ಚುವ ಎಲ್ಲ ಸಾಧ್ಯತೆಗಳು ಇವೆ’ ಎಂದರು. ಈ ಮೂಲಕ ತಾವು ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

click me!