
ಪಿಟಿಐ ಕೊಲಂಬೊ (ಮೇ.4): ಜಮ್ಮು-ಕಾಶ್ಮೀರದ ಪಹಲ್ಗಾಂ ದಾಳಿಯಲ್ಲಿ ಭಾಗಿಯಾದ 6 ಶಂಕಿತ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು ಶನಿವಾರ ವಿಮಾನದ ಪರಿಶೀಲನೆ ನಡೆಸಿದ್ದಾರೆ. ಆದರೆ ತಪಾಸಣೆ ಬಳಿಕ ಯಾವುದೇ ಶಂಕಿತರು ಪತ್ತೆ ಆಗಿಲ್ಲ.
ಚೆನ್ನೈನಿಂದ ಹೊರಟಿದ್ದ ಶ್ರೀಲಂಕಾ ಏರ್‌ಲೈನ್ಸ್‌ನ ಯುಎಲ್122 ವಿಮಾನ, ಶನಿವಾರ ಬೆಳಿಗ್ಗೆ 11:59ಕ್ಕೆ ಲಂಕಾದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಆಗ ವಿಮಾನವನ್ನು ಸಮಗ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಲಂಕಾ ಪೊಲೀಸರು, ‘ಪಹಲ್ಗಾಂ ದಾಳಿಯ 6 ಶಂಕಿತ ಉಗ್ರರು ಶ್ರೀಲಂಕನ್ ಏರ್‌ಲೈನ್ಸ್ ವಿಮಾನದ ಮೂಲಕ ಕೊಲಂಬೊಕ್ಕೆ ಪರಾರಿಯಾಗಿದ್ದಾರೆಂದು ಭಾರತೀಯ ಅಧಿಕಾರಿಗಳು ಶ್ರೀಲಂಕಾಕ್ಕೆ ಮಾಹಿತಿ ನೀಡಿದ್ದರು. ಚೆನ್ನೈ ಪ್ರದೇಶ ನಿಯಂತ್ರಣಾ ಕೇಂದ್ರ ಉಗ್ರರ ಕುರಿತು ಏರ್‌ಲೈನ್ಸ್‌ಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಅವರ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು, ಶ್ರೀಲಂಕಾ ವಾಯುಪಡೆ ಮತ್ತು ವಿಮಾನ ನಿಲ್ದಾಣದ ಭದ್ರತಾ ಘಟಕಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿವೆ. ಆದರೆ ಯಾವುದೇ ಶಂಕಿತ ವ್ಯಕ್ತಿ ಪತ್ತೆಯಾಗಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಲಷ್ಕರ್ ಭಯೋತ್ಪಾದಕರು ಇರುವ ಅನುಮಾನ, ಶ್ರೀಲಂಕಾದಲ್ಲಿ ಚೆನ್ನೈ-ಕೊಲಂಬೊ ವಿಮಾನದಲ್ಲಿ ಶೋಧ!
‘ಅಲ್ಟ್ರಾ’ ಆ್ಯಪ್ ಬಳಸಿ ಉಗ್ರರ ರಹಸ್ಯ ಸಂಭಾಷಣೆ
ಶ್ರೀನಗರ: ಪಾಕಿಸ್ತಾನದಲ್ಲಿರುವ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ಗಳು ಈಗ ಕಾಶ್ಮೀರದಲ್ಲಿರುವ ಉಗ್ರರು ಮತ್ತು ಉಗ್ರರ ಬೆಂಬಲಿಗರೊಂದಿಗೆ, ರಹಸ್ಯ ಕಾಪಾಡುವ ವಿಶೇಷ ಭದ್ರತೆಯುಳ್ಳ ‘ಅಲ್ಟ್ರಾ’ ಆ್ಯಪ್ ಮೂಲಕ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪಹಲ್ಗಾಂ ದಾಳಿಯ ಸಮಯದಲ್ಲಿ, ಜಮ್ಮು ಕಾಶ್ಮೀರದ ತ್ರಾಲ್‌ನಲ್ಲಿ ಈ ಆ್ಯಪ್ ಬಳಕೆಯಾಗಿರುವ ಪುರಾವೆ ದೊರಕಿದೆ. ದಾಳಿಗೂ ಮುನ್ನ ಪಹಲ್ಗಾಂನಲ್ಲಿ ಉಗ್ರರಿಗೆ ಸಹಾಯ ಮತ್ತು ನಿರ್ದೇಶನ ನೀಡುವ ಅಗತ್ಯತೆಯ ಬಗ್ಗೆ ಸ್ಥಳೀಯ ಉಗ್ರ ಬೆಂಬಲಿಗರು ಚರ್ಚಿಸುತ್ತಿರುವ ಚಾಟ್‌ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಪಹಲ್ಗಾಂ ನರಮೇಧ: ದಕ್ಷಿಣ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದಾರಾ ಉಗ್ರರು?
ಅವರಿಗೆ ಉಗ್ರರ ಪಿತೂರಿಯ ಬಗ್ಗೆ ತಿಳಿದಿತ್ತು. ಉಗ್ರರಿಗೆ ಮಾರ್ಗದರ್ಶನ ಮತ್ತು ಶಸ್ತ್ರಾಸ್ತ್ರಗಳ ವ್ಯವಸ್ಥೆ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, 15 ಮಂದಿಯ ಮೇಲೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ.ಅಲ್ಟ್ರಾ ಆ್ಯಪ್‌ನಲ್ಲಿ ನಡೆಸುವ ಮಾತುಕತೆಗಳು ಸಂಪೂರ್ಣ ಎನ್‌ಕ್ರಿಪ್ಟ್ ಆಗಿದ್ದು, ಸುರಕ್ಷಿತವಾಗಿರುತ್ತವೆ. ಸಂದೇಶ ಕಳಿಸದವನ ಮತ್ತು ಸ್ವೀಕರಿಸಿದವನ ಮೊಬೈಲ್‌ನಿಂದ ಯಾವುದೇ ಮಾಹಿತಿ ಸೋರಿಕೆಯಾಗುವ ಅಪಾಯವಿರುವುದಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ