ಸಂತಾರ ಪಾಲಿಸಿದ ಕಿರಿಯ ವ್ಯಕ್ತಿ ಎನಿಸಿದ 3 ವರ್ಷದ ಬಾಲಕಿ, ಸಂಪ್ರದಾಯಕ್ಕೆ ಒಳಗಾದ ಕೆಲವೇ ಕ್ಷಣದಲ್ಲಿ ಸಾವು!

Published : May 03, 2025, 11:18 PM ISTUpdated : May 04, 2025, 12:27 AM IST
ಸಂತಾರ ಪಾಲಿಸಿದ ಕಿರಿಯ ವ್ಯಕ್ತಿ ಎನಿಸಿದ 3 ವರ್ಷದ ಬಾಲಕಿ, ಸಂಪ್ರದಾಯಕ್ಕೆ ಒಳಗಾದ ಕೆಲವೇ ಕ್ಷಣದಲ್ಲಿ ಸಾವು!

ಸಾರಾಂಶ

ಮೂರು ವರ್ಷದ ಮೆದುಳಿನ ಗೆಡ್ಡೆ ಪೀಡಿತ ಬಾಲಕಿ ವಿಯಾನಾಗೆ ಇಂದೋರ್‌ನಲ್ಲಿ ಜೈನ ಮುನಿಗಳ ಸಲಹೆಯಂತೆ ಸಂತಾರ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಪೋಷಕರು ಈ ನಿರ್ಧಾರ ಕೈಗೊಂಡರು. ಸಂತಾರದ ೧೦ ನಿಮಿಷಗಳ ನಂತರ ಬಾಲಕಿ ಮೃತಪಟ್ಟಳು. ಇದನ್ನು ಅತ್ಯಂತ ಕಿರಿಯ ಸಂತಾರ ಎಂದು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ದಾಖಲಿಸಿದೆ.

ಇಂದೋರ್‌ (ಮೇ.3): ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೂರು ವರ್ಷದ ಬಾಲಕಿಗೆ ಸಂತಾರ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಬಾಲಕಿಗೆ ಮೆದುಳಿನ ಗೆಡ್ಡೆ ಇರುವುದು ಪತ್ತೆಯಾಗಿತ್ತು. ಆಕೆ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಜೈನ ಮುನಿಗಳ ಸಲಹೆಯ ಮೇರೆಗೆ ಮಾರ್ಚ್ 21 ರಂದು ಬಾಲಕಿಯ ಪೋಷಕರು ಆಕೆಗೆ ಸಂತಾರ ಸಂಪ್ರದಾಯವನ್ನು ಪಾಲಿಸಿದ್ದಾರೆ. ಧಾರ್ಮಿಕ ಪ್ರಕ್ರಿಯೆ ಮುಗಿದ 10 ನಿಮಿಷಗಳ ನಂತರ ಬಾಲಕಿ ಸಾವನ್ನಪ್ಪಿದಳು. ಇದಕ್ಕಾಗಿ ಜೈನ ಸಮುದಾಯವು ಬಾಲಕಿಯ ಪೋಷಕರನ್ನು ಗೌರವಿಸಿದೆ. ಇದು ಜಗತ್ತಿನ ಅತ್ಯಂತ ಕಿರಿಯ ಸಂತಾರ ಅಥವಾ ಸಲ್ಲೇಖನ ಎಂದು ಹೇಳಲಾಗುತ್ತಿದೆ. ಸಂತಾರ ಪಾಲಿಸಿದ ಜಗತ್ತಿನ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಕೂಡ ದಾಖಲಾಗಿದೆ.

ಈ ಬಗ್ಗೆ ಮಾತನಾಡಿರುವ 3 ವರ್ಷದ ಬಾಲಕಿ ವಿಯಾನಾ ಅವರ ಪಾಲಕರಾದ ಪೀಯುಷ್‌-ವರ್ಷ ಜೈನ್‌, 'ವಿಯಾನಾ ನಮ್ಮ ಏಕೈಕ ಮಗಳು, ಅವಳಿಗೆ ಕೇವಲ 3 ವರ್ಷ. ಕಳೆದ ವರ್ಷ ಅವಳ ಮೆದುಳಿನಲ್ಲಿ ಗೆಡ್ಡೆ ಇರುವುದು ಗೊತ್ತಾಗಿತ್ತು. ಅದಕ್ಕಾಗಿಯೇ ಅವಳಿಗೆ ಮೊದಲು ಇಂದೋರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಜನವರಿಯಲ್ಲಿ, ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು ಆದರೆ, ಇದರಿಂದ ಆಕೆಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿರಲಿಲ್ಲ. ಒಂದೂವರೆ ತಿಂಗಳ ಹಿಂದೆ (ಮಾರ್ಚ್ 21 ರಂದು), ಆಧ್ಯಾತ್ಮಿಕ ಸಂಕಲ್ಪ ಹೊಂದಿದ್ದ ರಾಜೇಶ್ ಮುನಿ ಮಹಾರಾಜ್ ಅವರನ್ನು ಭೇಟಿ ಮಾಡಲು ನಾವು ಆಕೆಯನ್ನು ಇಂದೋರ್‌ಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಈ ಸಂತಾರದ ಬಗ್ಗೆ ನಮಗೆ ತಿಳಿಯಿತು' ಎಂದು ಹೇಳಿದ್ದಾರೆ.

ಸಂತಾರ ಬಳಿಕ 10 ನಿಮಿಷದಲ್ಲೇ ಸಾವು ಕಂಡ ಬಾಲಕಿ: ಇಂದೋರ್‌ಗೆ ಹೋದಾಗ ನಮ್ಮ ಜೊತೆ ಇದ್ದ ಮಗಳ ಸ್ಥಿತಿಯನ್ನು ಅವರು ಗಮನಸಿದ್ದರು ಎಂದು ತಾಯಿ ವರ್ಷಾ ಜೈನ್‌ ತಿಳಿಸಿದ್ದಾರೆ. 'ನಾವು ಅವರ ಅನುಯಾಯಿಗಳು, ಆಧ್ಯಾತ್ಮಿಕ ಮುನಿ ಮಹಾರಾಜರು ಅವರ ಮಾರ್ಗದರ್ಶನದಲ್ಲಿ 107 ಸಂತಾರಗಳನ್ನು ನಡೆಸಿದ್ದಾರೆಂದು ನಮಗೆ ತಿಳಿದಿತ್ತು.ಈ ಬಗ್ಗೆ ನಾವು ಯೋಚನೆ ಮಾಡಿದೆವು. ಕುಟುಂಬದ ಎಲ್ಲಾ ಸದಸ್ಯರು ಕೂಡ ಅಲ್ಲಿದ್ದರು, ನಾವು ಅವರ ಒಪ್ಪಿಗೆಯನ್ನು ಪಡೆದುಕೊಂಡ ಬಳಿಕ ನಮ್ಮ ಏಕೈಕ ಮಗಳು ಸಂತಾರ ತೆಗೆದುಕೊಳ್ಳಬೇಕೆಂದು ನಾವು ಬಯಸಿದೆವು.. ಜೈನ ಸಮಾಜದಲ್ಲಿ ಸಂತಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ' ಎಂದು ವರ್ಷಾ ತಿಳಿಸಿದ್ದಾರೆ. ನಮ್ಮ ಒಪ್ಪಿಗೆಯ ನಂತರ, ಮುನಿಶ್ರೀ ಮಂತ್ರಗಳು ಮತ್ತು ಆಚರಣೆಗಳ ಪಠಣದೊಂದಿಗೆ ಸಂತಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದರು, ಸಂತಾರದ ಈ ಪ್ರಕ್ರಿಯೆಯು ಅರ್ಧ ಗಂಟೆಗಳ ಕಾಲ ಮುಂದುವರೆಯಿತು, ನಂತರ 10 ನಿಮಿಷಗಳ ನಂತರ ಪುಟ್ಟ ಹುಡುಗಿ ತನ್ನ ಪ್ರಾಣವನ್ನು ತ್ಯಜಿಸಿದಳು ಎಂದಿದ್ದಾರೆ.

ದಾಖಲೆ ಪುಸ್ತಕ ಸೇರಿದ ಬಾಲಕಿ: ತಂದೆ ಪಿಯೂಷ್ ಜೈನ್ ಮತ್ತು ತಾಯಿ ವರ್ಷಾ ಇಬ್ಬರೂ ಐಟಿ ವೃತ್ತಿಪರರು. ಸಂತಾರಾ ಆಗಿ ಒಂದೂವರೆ ತಿಂಗಳಾಗಿದೆ. ಈಗಲೂ ಕೂಡ ತಮ್ಮ ಮಗಳು ಚಿಕ್ಕವಳಾಗಿದ್ದ ತೆಗೆದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ನೋಡಿ ಕಣ್ನೀರಿಡುತ್ತಿದ್ದಾರೆ. ಆದರೆ, ಆಕೆ ಸಂತಾರ ಸಂಪ್ರದಾಯ ಪಾಲಿಸಿದ್ದನ್ನು ಹೆಮ್ಮೆಯನ್ನು ಹೇಳಿಕೊಂಡಿದ್ದಾರೆ. ಈ ನಡುವೆ, ಆಧ್ಯಾತ್ಮಿಕ ದೃಢಸಂಕಲ್ಪ ಹೊಂದಿರುವ ರಾಜೇಶ್ ಮುನಿ ಮಹಾರಾಜ್ ಮತ್ತು ರಾಜೇಂದ್ರ ಮಹಾರಾಜ್ ಅವರ ಮಾರ್ಗದರ್ಶನ ಮತ್ತು ಬೆಂಬಲದಡಿಯಲ್ಲಿ, ನಡೆದ ಈ ಸಂತಾರವನ್ನು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಒಂದು ವಿಶಿಷ್ಟ ಸಾಧನೆ ಎಂದು ಗುರುತಿಸಲಾಗಿದೆ.

ಗುರು ಅಭಿಗ್ರಹ ಧಾರಿ ರಾಜೇಶ್ ಮುನಿ ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಯಾನಾ ಅವರ ಈ ನಂಬಿಕೆ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಬುಧವಾರ, ಕಿಮ್ಟಿ ಗಾರ್ಡನ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ, ವಿಯಾನಾ ಅವರ ಪೋಷಕರಿಗೆ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಪ್ರಶಸ್ತಿಯನ್ನು ನೀಡಲಾಯಿತು. ಈ ಸಮಾರಂಭದಲ್ಲಿ ಕುಟುಂಬ ಮತ್ತು ನಿಕಟ ಸಂಬಂಧಿಗಳು ಉಪಸ್ಥಿತರಿದ್ದರು.

ಜೈನ ಧರ್ಮದ ಅತ್ಯುನ್ನತ ವ್ರತ "ಸಾಂತರ" ವನ್ನು ಪಾಲಿಸಿದ ಅತ್ಯಂತ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ನಮ್ಮ ಮಗು ಪಾತ್ರಳಾಗಿದ್ದಾಳೆ ಎಂದು ಪಿಯೂಷ್-ವರ್ಷ ಜೈನ್ ದಂಪತಿಗಳು ಈ ವೇಳೆ ಹೇಳಿದರು. ಅವಳು ತುಂಬಾ ತಮಾಷೆಯ ಮತ್ತು ಸಂತೋಷದ ಸ್ವಭಾವದ ಹುಡುಗಿಯಾಗಿದ್ದಳು. ಬಾಲ್ಯದಿಂದಲೂ ನಾವು ಅವಳಿಗೆ ಧಾರ್ಮಿಕ ಮೌಲ್ಯಗಳನ್ನು ನೀಡುತ್ತಿದ್ದೆವು. ದನದ ಕೊಟ್ಟಿಗೆಗೆ ಹೋಗುವುದು, ಪಾರಿವಾಳಗಳಿಗೆ ಆಹಾರ ನೀಡುವುದು, ಗುರುದೇವರನ್ನು ಭೇಟಿ ಮಾಡುವುದು, ಪಚ್ಖಾನ್ ಮಾಡುವುದು, ಇದೆಲ್ಲವೂ ಅವಳ ದಿನಚರಿಯಲ್ಲಿ ಸೇರಿತ್ತು ಎಂದು ಹೇಳಿದ್ದಾರೆ.

ಮಾರ್ಚ್ 21 ರಂದು ನಾವು ಸಂತಾರವನ್ನು ಮಾಡುವ ಉದ್ದೇಶದಿಂದ ಗುರೂಜಿಯ ಬಳಿಗೆ ಹೋಗಲಿಲ್ಲ ಎಂದು ಪಿಯೂಷ್ ಜೈನ್ ಹೇಳಿದರು. ನಾವು ಕುಟುಂಬದೊಂದಿಗೆ ಗುರೂಜಿಯನ್ನು ಭೇಟಿ ಮಾಡಲು ಹೋಗಿದ್ದೆವು. ಅಲ್ಲಿ ಅವರು ಹುಡುಗಿಯ ಆರೋಗ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡರು. ನಂತರ ಅವರು ಇಂದು ರಾತ್ರಿ ನೀವು ಹೊರಗೆ ಹೋಗುವುದು ಕಷ್ಟ ಎಂದಷ್ಟೇ ಹೇಳಿದ್ದರು ಎಂದಿದ್ದಾರೆ. 'ಆ ರಾತ್ರಿ ಗುರೂಜಿ ಆಕೆಯ ಸ್ಥಿತಿಯನ್ನು ಅರಿತಿದ್ದರು. ಅವರು ಮಗುವಿಗೆ ಸಂತಾರ ಸಂಪ್ರದಾಯ ಪಾಲಿಸಲು ಸಲಹೆ ನೀಡಿದರು. ತಾಯಿಯಾಗಿ, ನಾನು ಇದನ್ನು ಹೇಗೆ ಇದನ್ನು ಮಾಡಬಹುದು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿತ್ತು..' ಎಂದು ವರ್ಷಾ ತಿಳಿಸಿದ್ದಾರೆ.

ಏನಿದು ಸಂತಾರ: ಜೈನ ಧರ್ಮವು ಒಬ್ಬ ವ್ಯಕ್ತಿ ಅಥವಾ ಮುನಿ ತನ್ನ ಜೀವನವನ್ನು ಪೂರ್ಣವಾಗಿ ಬದುಕಿದಾಗ ಮತ್ತು ಅವನ ದೇಹವು ಅವನನ್ನು ಬೆಂಬಲಿಸುವುದನ್ನು ನಿಲ್ಲಿಸಿದಾಗ, ಅವನು ಸಂತಾರವನ್ನು ತೆಗೆದುಕೊಳ್ಳಬಹುದು ಎಂದು ನಂಬುತ್ತದೆ. ಸಂತಾರವನ್ನು ಸಂಲೇಖನ ಅಥವಾ ಸಲ್ಲೇಖನ ವ್ರತ ಎಂದೂ ಕರೆಯುತ್ತಾರೆ. ಸಂತಾರವು ಒಂದು ಧಾರ್ಮಿಕ ಸಂಕಲ್ಪ. ಇದರ ನಂತರ, ವ್ಯಕ್ತಿಯು ಆಹಾರವನ್ನು ತ್ಯಜಿಸಿ ಸಾವನ್ನು ಎದುರಿಸುತ್ತಾನೆ. ಸಂತಾರವನ್ನು ತೆಗೆದುಕೊಳ್ಳಲು ಧಾರ್ಮಿಕ ಅನುಮತಿ, ಯಾವುದೇ ಗೃಹಸ್ಥ ಮತ್ತು ಮುನಿ ಅಥವಾ ಸಾಧುವಿಗೆ ಇರುತ್ತದೆ.

ಜೈನ ಧರ್ಮಗ್ರಂಥಗಳಲ್ಲಿ, ಒಬ್ಬ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿ, ವೃದ್ಧಾಪ್ಯದಲ್ಲಿ ಅಥವಾ ದೀರ್ಘಕಾಲದ ಅನಾರೋಗ್ಯದ ಸಂದರ್ಭದಲ್ಲಿ ಸಂತಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಧರ್ಮದ ಪ್ರಕಾರ, ಧಾರ್ಮಿಕ ಗುರುಗಳು ಮಾತ್ರ ಸಂತಾರ ಸಂಸ್ಕಾರಕ್ಕೆ ಅನುಮತಿ ನೀಡಬಹುದು. ಅವರ ಅನುಮತಿಯ ನಂತರ, ಆ ವ್ಯಕ್ತಿಯು ಆಹಾರವನ್ನು ತ್ಯಜಿಸುತ್ತಾನೆ. ಆ ವ್ಯಕ್ತಿಯ ಸುತ್ತ ಧಾರ್ಮಿಕ ಗ್ರಂಥಗಳನ್ನು ಪಠಿಸಲಾಗುತ್ತದೆ ಮತ್ತು ಪ್ರವಚನಗಳನ್ನು ನಡೆಸಲಾಗುತ್ತದೆ. ಅನೇಕ ಜನರು ಆ ವ್ಯಕ್ತಿಯನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಲು ಬರುತ್ತಾರೆ. ಸಂತಾರ ಸಂಸ್ಕಾರ ಪಡೆದ ವ್ಯಕ್ತಿಯ ಮರಣವನ್ನು ಸಮಾಧಿ ಮೃತ್ಯು ಎಂದು ಕರೆಯಲಾಗುತ್ತದೆ.

ಸಂತಾರ ಪಾಲನೆ ಮಾಡುವವರು ಆಹಾರ, ನೀರನ್ನು ತ್ಯಜಿಸುತ್ತಾರೆ ಮತ್ತು ತಮ್ಮ ದೇಹಗಳನ್ನು ತ್ಯಜಿಸುತ್ತಾರೆ. ಈ ಸಮಯದಲ್ಲಿ, ಅವರು ಭೌತಿಕ ಬಾಂಧವ್ಯಗಳನ್ನು ಸಹ ತ್ಯಜಿಸುತ್ತಾರೆ ಮತ್ತು ದೇವರನ್ನು ಸ್ಮರಿಸುತ್ತಾರೆ. ಈ ನಿರ್ಧಾರವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಇದಕ್ಕಾಗಿ ಯಾರ ಮೇಲೂ ಒತ್ತಡ ಹೇರಲಾಗುವುದಿಲ್ಲ. ಮಕ್ಕಳು ಮತ್ತು ಯುವಕರು ಸಂತಾರ ಮಾಡಲು ಅವಕಾಶವಿಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..