ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

Published : Aug 01, 2023, 11:40 AM IST
ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

ಸಾರಾಂಶ

ಹರಿಯಾಣದ ನುಹ್‌ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯಲ್ಲಿ ಈವರೆಗೂ 4 ಮಂದಿ ಸಾವು ಕಂಡಿದ್ದಾರೆ. ಇಡೀ ಜಿಲ್ಲೆಗೆ ಎರಡು ದಿನ ಕರ್ಫ್ಯೂ ವಿಧಿಸಲಾಗಿದೆ. ಈ ನಡುವೆ ಪಕ್ಕದ ಗುರುಗ್ರಾಮ ಜಿಲ್ಲೆಗೂ ಹಿಂಸಾಚಾರ ವ್ಯಾಪಿಸಿದೆ.  

ನವದೆಹಲಿ (ಆ.1): ವಿಶ್ವ ಹಿಂದೂ ಪರಿಷತ್‌ನ ಬ್ರಜ್ ಮಂಡಲ್ ಯಾತ್ರೆಯ ಮೇಲೆ ಕಲ್ಲುತೂರಾಟ ನಡೆಸಿದ ಬೆನ್ನಲ್ಲಿಯೇ ಸಂಭವಿಸಿದ ಹಿಂಸಾಚಾರ ಮತ್ತು ಗಲಭೆಯ ಬಳಿಕ ಹರಿಯಾಣದ ಜುಹ್‌ ಜಿಲ್ಲೆಯಲ್ಲಿ ಉದ್ವಿಗ್ನತೆ ನೆಲೆಸಿದೆ. ಸ್ಥಳೀಯ ಪೊಲೀಸ್‌,  ನುಹ್‌ನಲ್ಲಿ ಎರಡು ದಿನಗಳ ಕಾಲ ಕರ್ಫ್ಯೂ ವಿಧಿಸಿದೆ. ಪರಿಸ್ಥಿತಿ ನಿಯಂತ್ರಿಸಲು 13 ಕಂಪನಿ ಅರೆಸೇನಾ ಪಡೆಗಳನ್ನು ಇಡೀ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಮತ್ತೊಂದೆಡೆ, ನುಹ್ ಪಕ್ಕದಲ್ಲಿರುವ ರಾಜಸ್ಥಾನದ ಭರತ್‌ಪುರದಲ್ಲೂ ಎಚ್ಚರಿಕೆ ನೀಡಲಾಗಿದೆ. ಇಲ್ಲಿನ 4 ಪ್ರದೇಶಗಳಲ್ಲಿ ಇಂಟರ್‌ನೆಟ್ ಕೂಡ ಸ್ಥಗಿತಗೊಳಿಸಲಾಗಿದೆ. ನುಹ್‌ ಜಿಲ್ಲೆಯ ಮೇವಾತ್‌ನಲ್ಲಿ ನಡೆದ ಹಿಂಸಾಚಾರವೀಗ ಪಕ್ಕದ ಗುರುಗ್ರಾಮಕ್ಕೂ ವ್ಯಾಪಿಸಿದೆ.  ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಎರಡು ಜಿಲ್ಲೆಗಳಲ್ಲದೆ ರೇವಾರಿ, ಪಲ್ವಾಲ್, ಫರಿದಾಬಾದ್ ಸೇರಿದಂತೆ 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇಂಟರ್ನೆಟ್ ಸಂಪೂರ್ಣ ಬಂದ್‌ ಮಾಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಮಂಗಳವಾರ ಅಂದರೆ ಆಗಸ್ಟ್ 1 ರಂದು ನುಹ್, ಫರಿದಾಬಾದ್ ಮತ್ತು ಪಲ್ವಾಲ್‌ನಲ್ಲಿ ಮುಚ್ಚಲಾಗಿದೆ.

ನುಹ್‌ನಲ್ಲಿ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಈ ಪರೀಕ್ಷೆಗಳು ಆಗಸ್ಟ್ 1 ಮತ್ತು 2 ರಂದು ನಡೆಯಬೇಕಿತ್ತು. ಡಿಸಿ ಪ್ರಶಾಂತ್ ಪನ್ವಾರ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಮತ್ತೆ ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ವ ಸಮಾಜದ ಸಭೆ ಕರೆದಿದ್ದಾರೆ.

ಸೋಮವಾರ ನುಹ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಬ್ರಜ್‌ ಮಂಡಲ್‌ ಯಾತ್ರೆಯ ವೇಳೆ ಮುಸ್ಲಿಂ ಸಮುದಾಯದ ಜನರು ಕಲ್ಲು ತೂರಾಟ ನಡೆಸಿದ್ದರು. ಇಬ್ಬರು ಮುಸ್ಲಿಂ ವ್ಯಕ್ತಿಗಳ ಕೊಲೆ ಆರೋಪ ಹೊತ್ತುಕೊಂಡಿದ್ದ ಗೋರಕ್ಷಕ ಮೋನು ಮಣೇಸರ್‌ ಈ ಯಾತ್ರೆಯಲ್ಲಿಪಾಲ್ಗೊಂಡಿದ್ದನ್ನು ವಿರೋಧಿಸಿ ಕಲ್ಲುತೂರಾಟ ನಡೆದಿತ್ತು. ಆ ಬಳಿಕ ಹಿಂದು ಹಾಗೂ ಮುಸ್ಲಿಂ ಎರಡೂ ಕಡೆಯ ಜನರು ಹಿಂಸಾಚಾರ ನಡೆಸಿದ್ದರು. ಈ ಗಲಾಟೆಯಲ್ಲಿ ಗುರುಗ್ರಾಮದ ಹೋಮ್‌ ಗಾರ್ಡ್‌ ನೀರಜ್‌, ಒಬ್ಬರು ಗೋಸೇವಕ, ಒಬ್ಬ ಇಮಾಮ್‌ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಾಮಾನ್ಯ ಜನರು ಗಾಯಗೊಂಡಿದ್ದಾರೆ.

ಘಟನೆ ನಡೆದ ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿದ್ದ ಎಲ್ಲಾ ವಾಹನಗಳಳಿಗೆ ಬೆಂಕಿ ಹಚ್ಚಲಾಗಿದೆ. 500ಕ್ಕೂ ಅಧಿಕ ಮಂದಿ ಬಸ್‌ನ ಮೇಲೆ ದಾಳಿ ಮಾಡಿದ್ದಲ್ಲದೆ, ಪೊಲೀಸ್‌ ಸ್ಟೇಷನ್‌ಗೂ ನುಗ್ಗಿ ದಾಂಧನೆ ಮಾಡಿದ್ದಾರೆ. ಅದಲ್ಲದೆ, ಹತ್ತಿರದಲ್ಲಿಯೇ ಇದ್ದ ಹಿರೋ ಬೈಕ್‌ ಶೋರೂಮ್‌ಗೆ ನುಗ್ಗಿ 200ಕ್ಕೂ ಅಧಿಕ ಬೈಕ್‌ ಲೂಟಿ ಮಾಡಿ, ಶೋರೂಮ್‌ ಅನ್ನು ಧ್ವಂಸ ಮಾಡಿದ್ದಾರೆ.

ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

ಹರಿಯಾಣದ ಹಿಂಸಾಚಾರದ ಬಗ್ಗೆ ಇತ್ತೀಚಿನ ಸುದ್ದಿ: ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 20 ಎಫ್‌ಐಆರ್‌ಗಳನ್ನು ದಾಖಲು ಮಾಡಿದ್ದಾರೆ. ರೇವಾರಿ, ಗುರುಗ್ರಾಮ, ಪಲ್ವಾಲ್‌ನಿಂದ ನುಹ್‌ಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ. ಇಡೀ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರಕರಣದ ವರದಿ ತೆಗೆದುಕೊಂಡಿದ್ದಾರೆ. ರಾಜ್ಯ ಡಿಜಿಪಿ ಪಿಕೆ ಅಗರ್ವಾಲ್ ಮತ್ತು ಸಿಐಡಿ ಮುಖ್ಯಸ್ಥ ಅಲೋಕ್ ಮಿತ್ತಲ್ ಕೂಡ ನುಹ್‌ಗೆ ತೆರಳಿದ್ದಾರೆ. ಸದ್ಯಕ್ಕೆ ಶಾಂತಿ ಮರುಸ್ಥಾಪನೆ ಮಾಡುವುದು ಗುರಿ, ಆ ಬಳಿಕ ಪ್ರಕರಣದ ಸಂಪೂರ್ಣ ತನಿಕೆ ಮಾಡಲಿದ್ದೇವೆ ಎಂದು ಗೃಹ ಸಚಿವ ಅನಿಲ್‌ ವಿಜ್‌ ಹೇಳಿದ್ದಾರೆ. ತಪ್ಪು ಎಲ್ಲಾಗಿದೆ ಅನ್ನೋದನ್ನು ಹುಡುಕುತ್ತೇವೆ. ಅಗತ್ಯಬಿದ್ದಲ್ಲಿ ಸೇನೆಯ ಸಹಾಯವನ್ನೂ ಪಡೆಯಲಿದ್ದೇವೆ ಎಂದಿದ್ದಾರೆ.  ನೂಹ್ ಘಟನೆ ದುರದೃಷ್ಟಕರ ಎಂದು ಸಿಎಂ ಮನೋಹರ್ ಲಾಲ್ ಹೇಳಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ನಾನು ಎಲ್ಲ ಜನರಿಗೆ ಮನವಿ ಮಾಡುತ್ತೇನೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದಿದ್ದಾರೆ. 

ಕಾಂಗ್ರೆಸ್ ನಾಯಕ ಧರಮ್ ಸಿಂಗ್ ಮನೆ ಮೇಲೆ ಇಡಿ ದಾಳಿ, 4 ಕೋಟಿ ರೂ ಮೌಲ್ಯದ ಕಾರು, ಚಿನ್ನಾಭರಣ ಜಪ್ತಿ!

ಗುರುಗ್ರಾಮ್‌ನ ಸೊಹ್ನಾ, ಪಟೋಡಿ ಮತ್ತು ಮಾನೇಸರ್‌ನಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಸುಮಾರು 250 ಪ್ರತಿಭಟನಾಕಾರರು ನಿನ್ನೆ ಸಂಜೆ 6 ಗಂಟೆಗೆ ಅಂಬೇಡ್ಕರ್ ಚೌಕ್ ಸೊಹ್ನಾದಲ್ಲಿ 5 ವಾಹನಗಳು, ಒಂದು ಆಟೋ, ಒಂದು ಅಂಗಡಿ ಮತ್ತು 4 ಗೂಡಂಗಡಿಗಳಿಗೆ ಬೆಂಕಿ ಹಚ್ಚಿದರು. ಕಲ್ಲು ತೂರಾಟವೂ ನಡೆದಿದೆ. ಸೆಕ್ಟರ್ 57ರಲ್ಲಿರುವ ಅಂಜುಮನ್ ಮಸೀದಿ ಮೇಲೆ ಮಧ್ಯರಾತ್ರಿ 12.10ರ ಸುಮಾರಿಗೆ ಗುರುಗ್ರಾಮ್‌ನಲ್ಲಿ ದಾಳಿ ನಡೆದಿದೆ. ಗುರುಗ್ರಾಮದಲ್ಲಿ ಧಾರ್ಮಿಕ ಸ್ಥಳಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು