ಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!

Published : Feb 06, 2026, 11:10 PM IST
telangana Swamiji Ganja Case

ಸಾರಾಂಶ

ನಮ್ಮ ರಾಜ್ಯದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಬೆಳೆಸಿ ಜೈಲು ಸೇರಿದರೆ, ತೆಲಂಗಾಣದ ಸ್ವಾಮೀಜಿಯೊಬ್ಬರು ದೇವಸ್ಥಾನದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಗಿಡ ಬೆಳೆಸಿ ಜೈಲು ಸೇರಿದ ಪ್ರಸಂಗ ನಡೆದಿದೆ. ಇಂತಹ ಸ್ವಾಮೀಜಿ, ಜ್ಯೋತಿಷಿಗಳ ಬಗ್ಗೆ ಭಕ್ತರು ಜಾಗೃತರಾಗಬೇಕು.

ನಮ್ಮ ರಾಜ್ಯದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್, ಸಂಸಾರಸ್ಥ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಬೆಳೆಸಿ ಜೈಲು ಸೇರಿದ್ದಾರೆ. ಆದರೆ, ತೆಲಂಗಾಣದ ಸ್ವಾಮೀಜಿ ದೇವಸ್ಥಾನದ ಆವರಣದಲ್ಲಿದ್ದ ಹೂವಿನ ತೋಟದೊಳಗೆ ಗಾಂಜಾ ಗಿಡಗಳನ್ನು ಬೆಳೆಸಿ ಇದೀಗ ಕಂಬಿ ಹಿಂದೆ ಸೇರಿಕೊಂಡಿದ್ದಾರೆ.

ದೇವಸ್ಥಾನ ಎಂದರೆ ಭಕ್ತಿ, ಶ್ರದ್ಧೆ ಮತ್ತು ನೆಮ್ಮದಿಯ ತಾಣ. ಅಲ್ಲಿ ಬರುವ ಭಕ್ತರಿಗೆ ಒಳ್ಳೆಯ ಮಾರ್ಗವನ್ನು ತೋರಿಸಬೇಕಾದ ಪೂಜಾರಿಯೇ ಅಡ್ಡದಾರಿ ಹಿಡಿದರೆ ಏನಾಗಬಹುದು? ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೇವರ ಪೂಜೆ ಮಾಡಬೇಕಾದ ಕೈಗಳು ಮಾದಕ ದ್ರವ್ಯಗಳ ಮಾರಾಟಕ್ಕೆ ಇಳಿದಿದ್ದು, ದೇವಸ್ಥಾನದ ಆವರಣವನ್ನೇ ಗಾಂಜಾ ತೋಟವನ್ನಾಗಿ ಮಾಡಿಕೊಂಡಿದ್ದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಔಟಿ ನಾಗಯ್ಯ (48) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಗ್ರಾಮದ ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲದೆ, ಊರಿನಲ್ಲಿ ತನ್ನನ್ನು ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಂಡಿದ್ದನು. ಹೀಗಾಗಿ ಊರವರು ಈತನ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇಟ್ಟಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ನಾಗಯ್ಯ, ಯಾರಿಗೂ ಅನುಮಾನ ಬಾರದಂತೆ ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳುಗೆಡವಿ ಅಕ್ರಮ ದಂಧೆಗೆ ಇಳಿದಿದ್ದನು.

ಹೂವಿನ ಗಿಡಗಳ ಮರೆಯಲ್ಲಿ ಗಾಂಜಾ ಕೃಷಿ:

ದೇವಸ್ಥಾನಕ್ಕೆ ಅಲಂಕಾರ ಮಾಡಲು ಹೂವು ಬೇಕು ಎಂಬ ನೆಪದಲ್ಲಿ ನಾಗಯ್ಯ ದೇವಸ್ಥಾನದ ಆವರಣದಲ್ಲಿ ದೊಡ್ಡ ಮಟ್ಟದಲ್ಲಿ ಚೆಂಡು ಹೂವಿನ (Marigold) ಗಿಡಗಳನ್ನು ಬೆಳೆಸಿದ್ದನು. ಆದರೆ, ಆ ಹೂವಿನ ಗಿಡಗಳ ಮಧ್ಯೆ ವ್ಯವಸ್ಥಿತವಾಗಿ ಗಾಂಜಾ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದನು. ಹೊರಗಿನಿಂದ ನೋಡುವವರಿಗೆ ಇದು ಕೇವಲ ಹೂವಿನ ತೋಟದಂತೆ ಕಾಣುತ್ತಿತ್ತು. ಈ ಚಾಲಾಕಿತನದಿಂದಾಗಿ ದೀರ್ಘಕಾಲದವರೆಗೆ ಯಾರಿಗೂ ಈತನ ಕೃತ್ಯದ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.

ಖಚಿತ ಮಾಹಿತಿ ಮೇರೆಗೆ ದಾಳಿ:

ದೇವಸ್ಥಾನದ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಂಗಾರೆಡ್ಡಿ ಜಿಲ್ಲಾ ಅಬಕಾರಿ (Excise) ಹಾಗೂ ಟಾಸ್ಕ್ ಫೋರ್ಸ್ ಪೊಲೀಸರು ಶುಕ್ರವಾರ ಹಠಾತ್ ದಾಳಿ ನಡೆಸಿದರು. ಮೇಲ್ನೋಟಕ್ಕೆ ಹೂವಿನ ತೋಟದಂತೆ ಕಂಡರೂ, ಗಿಡಗಳ ಒಳಗೆ ಪರಿಶೀಲಿಸಿದಾಗ ಪೊಲೀಸರೇ ದಂಗಾಗುವಷ್ಟು ಪ್ರಮಾಣದ ಗಾಂಜಾ ಗಿಡಗಳು ಪತ್ತೆಯಾಗಿವೆ.

 

 

70 ಲಕ್ಷ ಮೌಲ್ಯದ ಮಾಲು ವಶಕ್ಕೆ:

ದಾಳಿಯ ವೇಳೆ ಪೊಲೀಸರು ಬರೋಬ್ಬರಿ 685 ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಮಾರಾಟಕ್ಕೆ ಸಿದ್ಧ ಮಾಡಿಟ್ಟಿದ್ದ 17.74 ಕೆ.ಜಿ ಒಣ ಗಾಂಜಾ, ಸುಮಾರು ಒಂದು ಕೆ.ಜಿಯಷ್ಟು ಗಾಂಜಾ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 30,000 ರೂಪಾಯಿ ನಗದು, ತೂಕದ ಯಂತ್ರ (Weighing Machine) ಮತ್ತು ಮೊಬೈಲ್ ಫೋನ್ ಅನ್ನೂ ಸೀಜ್ ಮಾಡಲಾಗಿದೆ. ವಶಪಡಿಸಿಕೊಳ್ಳಲಾದ ಒಟ್ಟು ಗಾಂಜಾದ ಮೌಲ್ಯ ಸುಮಾರು 70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಭಕ್ತರಲ್ಲಿ ಆಘಾತ:

ನಿತ್ಯ ಪೂಜೆ, ಪುನಸ್ಕಾರ ಎಂದು ಓಡಾಡಿಕೊಂಡಿದ್ದ ನಾಗಯ್ಯನ ಅಸಲಿ ಮುಖವಾಡ ಕಳಚಿಬಿದ್ದಿರುವುದು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ. ಆಧ್ಯಾತ್ಮಿಕ ಕೇಂದ್ರವನ್ನು ಮಾದಕ ದ್ರವ್ಯಗಳ ಅಡ್ಡೆಯನ್ನಾಗಿ ಮಾಡಿಕೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಈ ದಂಧೆಯಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ? ಇವನು ಬೆಳೆದ ಗಾಂಜಾವನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದನು? ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ನಾರಾಯಣಖೇಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನ ಲಡ್ಡುಗೆ 'ಟಾಯ್ಲೆಟ್ ಕ್ಲೀನಿಂಗ್ ರಾಸಾಯನಿಕ'ದ ತುಪ್ಪ ಬಳಕೆ; ಸಿಎಂ ಚಂದ್ರಬಾಬು ನಾಯ್ಡು
'ನಾನು ಹೀಗೆ ಹೇಳಿದ್ರೆ ಹಾಕ್ತೀರಾ, ಹಾಗಿದ್ರೆ ಮಾತ್ರ ಹೇಳ್ತೀನಿ' ಎಂದ ನಟ ಕಿಶೋರ್​ ಮೋದಿ ಬಗ್ಗೆ ಏನಂದ್ರು ಕೇಳಿ!