ಜೀವ ಪಣಕ್ಕಿಟ್ಟು ಶ್ವಾನವನ್ನು ರಕ್ಷಿಸಿದ ತೆಲಂಗಾಣದ ಹೋಮ್‌ಗಾರ್ಡ್

By Suvarna NewsFirst Published Jan 28, 2022, 11:52 AM IST
Highlights
  • ನೀರಿನ ಮಧ್ಯೆ ಪೊದೆಯಲ್ಲಿ ಸಿಲುಕಿದ್ದ ಶ್ವಾನದ ರಕ್ಷಣೆ
  • ತೆಲಂಗಾಣ ಹೋಮ್‌ಗಾರ್ಡ್‌ನಿಂದ ಮಾನವೀಯ ಕಾರ್ಯ
  • ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಘಟನೆ

ತೆಲಂಗಾಣ(ಜ.28): ತೆಲಂಗಾಣದ ಹೋಮ್‌ ಗಾರ್ಡ್ ಒಬ್ಬರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹರಿಯುತ್ತಿರುವ ಹಳ್ಳವೊಂದರ ಮಧ್ಯೆ ಪೊದೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಯಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹೋಮ್‌ ಗಾರ್ಡ್‌ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೊದಲ್ಲಿ, ಹೋಮ್‌ ಗಾರ್ಡ್‌ ಮುಜೀಬ್ ಉರ್ ರೆಹಮಾನ್ ತನ್ನ ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ನಾಯಿಯನ್ನು ಉಳಿಸಲು ತುಂಬಿ ಹರಿಯುವ ಹೊಳೆಗೆ ಇಳಿದಿದ್ದಾರೆ. ಹರಿಯುತ್ತಿರುವ ನೀರಿನಲ್ಲಿ ಅವರು ತಮ್ಮ ಬೆಂಬಲಕ್ಕಾಗಿ ಮಣ್ಣು ಅಗೆಯುವ ಜೆಸಿಬಿ ಯಂತ್ರವನ್ನು ಹಿಡಿದಿದ್ದು, ನಾಯಿಯನ್ನು ಸುರಕ್ಷಿತವಾಗಿ ತರಲು ಅದನ್ನು ಹಿಡಿದುಕೊಂಡು ಪೊದೆಯಿಂದ ನಾಯಿಯನ್ನು ಎಳೆಯುತ್ತಿರುವುದು ಕಂಡು ಬಂದಿದೆ. ಈ ಘಟನೆಯು ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. 

तेज़ लहरों के बीच फंसे कुत्ते को देखकर के होम गार्ड मुजीब ने तुरंत JCB बुलाई और खुद उसे बचाने के लिए लहरों में उतर गए. उनके जज्बे को दिल से सलाम.
मानवता की सेवा के लिए कोई भी जोखिम उठाने से पीछे नहीं हटती. pic.twitter.com/sJlBoOwvov

— Dipanshu Kabra (@ipskabra)

ಈ ಕ್ಲಿಪ್ ಅನ್ನು ಭಾರತೀಯ ಪೊಲೀಸ್‌ ಸೇವೆಯ (ಐಪಿಎಸ್) ಅಧಿಕಾರಿ ದೀಪಾಂಶು ಕಾಬ್ರಾ (Dipanshu Kabra) ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಲವಾಗಿ ಹರಿಯುತ್ತಿರುವ ನೀರಿನ ಮಧ್ಯೆ ಪೊದೆಯಲ್ಲಿ ನಾಯಿ ಸಿಕ್ಕಿಬಿದ್ದಿರುವುದನ್ನು ನೋಡಿ, ತೆಲಂಗಾಣ ಸಿಒಪಿಗಳ ಹೋಮ್ ಗಾರ್ಡ್ ಮುಜೀಬ್ ತಕ್ಷಣವೇ ಜೆಸಿಬಿಗೆ ಕರೆ ಮಾಡಿದರು ಮತ್ತು ನಾಯಿಯನ್ನು ರಕ್ಷಿಸಲು ಸ್ವತಃ ರಭಸವಾಗಿ ಹರಿಯುವ ನೀರಿಗೆ ಇಳಿದರು. ಅವರ ಈ ಮಾನವೀಯ ಕಾರ್ಯಕ್ಕೆ ಹೃತ್ಪೂರ್ವಕ ನಮನಗಳು. ಖಾಕಿ ಧರಿಸಿದವರು ಮಾನವೀಯತೆಯ ಸೇವೆಗಾಗಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಬರೆದು ಕಾಬ್ರಾ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 

ರಕ್ಷಣೆ ಮಾಡಿದ ನಂತರ ಈ ಶ್ವಾನವನ್ನು ಹತ್ತಿರದ ಹಳ್ಳಿಯಲ್ಲಿ ಬಿಡಲಾಯಿತು. ಪ್ರಾಣಿಯನ್ನು ರಕ್ಷಿಸಲು ತನ್ನ ಜೀವವನ್ನು ಪಣಕ್ಕಿಟ್ಟಿದ್ದಕ್ಕಾಗಿ ಅನೇಕರು ಈ ಹೋಮ್‌ಗಾರ್ಡ್‌ನನ್ನು ಕೊಂಡಾಡಿದರು, ಜೊತೆಗೆ ಅವರ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು.

ನೀ ಅನಾಥನಲ್ಲ ನಿನಗೆ ನಾನು ನನಗೆ ನೀನು.... ನಿರ್ಗತಿಕನಿಗೆ ಜೊತೆಯಾದ ಶ್ವಾನ

ಕೆಲ ದಿನಗಳ ಹಿಂದೆ ಅಮೆರಿಕಾದಲ್ಲಿ ಮೈನಸ್‌ ಡಿಗ್ರಿ ತಾಪಮಾನದಿಂದಾಗಿ ಭಾಗಶಃ ಗಟ್ಟಿಯಾಗಿದ್ದ ಸರೋವರ ಮಧ್ಯೆ ಸಿಲುಕಿದ್ದ ನಾಯಿಯೊಂದನ್ನು ಪೊಲೀಸ್‌ ಅಧಿಕಾರಿಯೊಬ್ಬರು ರಕ್ಷಣೆ ಮಾಡಿದ್ದರು. ನೀರಿನ ಮೇಲ್ಮೈಯಷ್ಟೇ ಗಟ್ಟಿಯಾಗಿದ್ದು, ನಾಯಿಯ ರಕ್ಷಣೆಯ ಸಲುವಾಗಿ ಪೊಲೀಸ್‌ ಅಧಿಕಾರಿ ತುಂಬಾ ತೆಳ್ಳನೆಯ ಮಂಜುಗಡ್ಡೆಯ ಮೇಲೆ ಕಾಲಿಟ್ಟು ನೀರಿನೊಳಗೆ ಇಳಿದು ಹೋಗಿ ನಾಯಿಯನ್ನು ರಕ್ಷಣೆ ಮಾಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಲೆವಿಸ್ಟನ್ (Lewiston) ಪೊಲೀಸ್ ಠಾಣೆಯ ಅಧಿಕಾರಿ ಜಾನ್ ಸ್ಮಿತ್ (Jon Smith) ಅವರು ಬಾಂಡ್ ಸರೋವರ (Bond Lake)ದ ಒಳಗೆ ಸಿಲುಕಿ ಹೊರಗೆ ಬರಲಾಗದೆ ಕಷ್ಟಪಡುತ್ತಿದ್ದ ನಾಯಿಯನ್ನು ನೋಡಿ ರಕ್ಷಣೆಗೆ ಮುಂದಾಗಿದ್ದರು. ಈ ನಾಯಿಯು ದಡದಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ನೀರಿನಲ್ಲಿ ಸಿಲುಕಿಕೊಂಡಿತ್ತು.

ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ

ಕಳೆದ ತಿಂಗಳು ಕೂಡ ಇಂತಹದೇ ಘಟನೆಯೊಂದು ನಡೆದಿತ್ತು. ಇಬ್ಬರು ಸ್ಪ್ಯಾನಿಷ್ ಪೊಲೀಸ್ ಅಧಿಕಾರಿಗಳು (Spanish police officers) ಮಂಜುಗಡ್ಡೆಯಾಗುತ್ತಿದ್ದ ನೀರಿನಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಲು ಹೆಪ್ಪುಗಟ್ಟಿದ ಸರೋವರದಲ್ಲಿ ಇಳಿದು ನಾಯಿಯ ರಕ್ಷಣೆ ಮಾಡಿದ್ದರು. ಪೂರ್ವ ಸ್ಪೇನ್‌ನ (Spain) ಅರಾಗೊನ್‌ (Aragon) ದಲ್ಲಿರುವ ಕ್ಯಾನ್‌ಫ್ರಾಂಕ್‌ನಲ್ಲಿರುವ ಜಲಾಶಯದಲ್ಲಿ ನಾಯಿ ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ಇದರ ರಕ್ಷಣೆಗೆ ಅಧಿಕಾರಿಯು ಮರದ ಕೋಲನ್ನು ಹಿಡಿದು ಮಂಜುಗಡ್ಡೆಯ ತುಂಡುಗಳ ಮೂಲಕ ಈಜುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ಕಾಣಬಹುದು.

click me!