
ಹೈದರಾಬಾದ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಬುಧವಾರ ಘೋಷಿಸಿದೆ.
ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyankha Gandhi) ‘ಅಂಬೇಡ್ಕರ್ ಅಭಯ ಹಸ್ತ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 12 ಲಕ್ಷ ರು.ವರೆಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.18ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೇ ಪ್ರತಿಯೊಂದು ಅಡವಿ ಗ್ರಾಮ ಪಂಚಾಯತ್‌ಗಳಿಗೆ 25 ಲಕ್ಷ ರು. ಆರ್ಥಿಕ ನೆರವು, 1 ವರ್ಷದಲ್ಲಿ 2 ಲಕ್ಷ ನೇಮಕಾತಿ, ನಿರುದ್ಯೋಗಿಗಳಿಗೆ 4 ಸಾವಿರ ರು. ಮಾಸಿಕ ಭತ್ಯೆ, ಹುತಾತ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಗಲ್ಫ್ (Galf) ದೇಶಗಳಲ್ಲಿ ಯುವಕರಿಗೆ ಕೆಲಸ ದೊರಕಿಸುವುದಕ್ಕಾಗಿ ಗಲ್ಫ್ ಸೆಂಟರ್ ಸ್ಥಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು 500 ರು.ಗೆ ಗ್ಯಾಸ್ ಸಿಲಿಂಡರ್, ರೈತರ 2 ಲಕ್ಷ ರು. ಸಾಲ ಮನ್ನಾ, ಮಹಿಳೆಯರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರು. ನೆರವು, ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 4 ಸಾವಿರ ರು. ನೆರವು ಮತ್ತು ರೈತರಿಗೆ ವಾರ್ಷಿಕ 15 ಸಾವಿರ ರು. ಆರ್ಥಿಕ ನೆರವು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು.
ಈ ವರ್ಷ 34 ಲಕ್ಷ ಮದುವೆಯಿಂದ 4 ಲಕ್ಷ ಕೋಟಿ ವಹಿವಾಟು ನಿರೀಕ್ಷೆ
ನವದೆಹಲಿ: ಉತ್ಥಾನ ದ್ವಾದಶಿಯಿಂದ ಪ್ರಾರಂಭವಾಗುವ ಮದುವೆ ಸೀಸನ್‌ನಲ್ಲಿ ಭಾರತದಲ್ಲಿ 4.25ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ (Traders Association) ಅಂದಾಜಿಸಿದೆ. ಭಾರತದಲ್ಲಿ ನ.23 ಹಾಗೂ ಡಿ.15ರ ನಡುವೆ ಸುಮಾರು 34 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಅದರಿಂದ ವಿವಿಧ ಆತಿಥ್ಯ ವಲಯದ ಉದ್ಯಮಗಳಿಗೆ ಭಾರೀ ಪ್ರಮಾಣದ ವಹಿವಾಟು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ದೆಹಲಿಯೊಂದರಲ್ಲೇ ಸುಮಾರು 3.5 ಲಕ್ಷ ವಿವಾಹಗಳು (Wedding) ಸೆಟ್ಟೇರುವ ನಿರೀಕ್ಷೆಯಿದ್ದು, ಅದರಿಂದ 1 ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ವಿವಾಹವನ್ನು ತಮ್ಮ ಶಕ್ತ್ಯಾನುಸಾರ 3ಲಕ್ಷ ರು. ಇಂದ 1 ಕೋಟಿ ರು.ವರೆಗೂ ಖರ್ಚು ಮಾಡುವವರಿದ್ದು, ಅದರಿಂದ ಆತಿಥ್ಯವಲಯವಲ್ಲದೆ ಕೆಲವು ಸೇವಾ ವಲಯದ ಉದ್ಯಮಗಳಿಗೂ ಭರ್ಜರಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಕಳೆದ ಹೋಳಿ ಸಮಯದಲ್ಲೂ ಕರಾರುವಕ್ಕಾಗಿ ಅಂದಾಜಿಸಿದ್ದ ಸಂಸ್ಥೆಯು, 3 ಲಕ್ಷ ಕೋಟಿ ರು. ವಹಿವಾಟು ನಡೆಯುವ ಮೂಲಕ ಕಳೆದ ಬಾರಿಗಿಂತ ಶೇ.25ರಷ್ಟು ವಹಿವಾಟಿನಲ್ಲಿ ಹೆಚ್ಚಳ ಆಗಲಿದೆ ಎಂದು ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ