
ಹೈದರಾಬಾದ್: ಸಾಮಾನ್ಯವಾಗಿ ಇಪ್ಪತ್ತು ಮೂವತ್ತು ರೂಪಾಯಿಯಲ್ಲಿ ಸಿಗುವ ವಸ್ತುಗಳನ್ನು ಐದು ಹತ್ತು ರೂಪಾಯಿ ನಾಣ್ಯಗಳನ್ನೇ ಕೊಟ್ಟು ಖರೀದಿಸಬಹುದು. ಅಬ್ಬಬ್ಬಾ ಅಂದ್ರೆ ನೂರು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಬಹುದು. ಅದೇ ಒಂದು ಲಕ್ಷ ರೂಪಾಯಿ ಬೆಲೆ ಬೈಕ್ ಖರೀದಿಸುವಾಗಲೂ ಅಷ್ಟು ನಾಣ್ಯಗಳನ್ನೇ ಕೊಟ್ಟು ಖರೀದಿಸಲು ಹೋದರೆ ಹೇಗಿದ್ದೀತು? ಶೋ ರೂಂನವರು ಅಷ್ಟು ಹಣವನ್ನು ಎಣಿಸಲು ಎಷ್ಟು ಪರಿಪಾಟಲು ಬಿಳಬಹುದು? ಅಂತಹದ್ದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೌದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ₹10ರ ನಾಣ್ಯಗಳನ್ನು ಕೂಡಿಟ್ಟು ಬರೋಬ್ಬರಿ ₹1.23 ಲಕ್ಷ ಮೌಲ್ಯದ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದ್ದಾರೆ. ಅಷ್ಟು ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಶೋ ರೂಮ್‌ನಲ್ಲಿ ನಾಣ್ಯಗಳ ರಾಶಿಯನ್ನ ಹಾಕಿ ಸ್ಕೂಟರ್ ಖರೀದಿಸಿರುವುದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಲಕ್ಸೆಟ್ಟಿಪೇಟೆ ನಿವಾಸಿಯಾಗಿರುವ ಬಿ. ರವಿ ಜೋಸೆಫ್ ಎಂಬುವವರು ಈ ರೀತಿ ನಾಣ್ಯಗಳನ್ನು ಸಂಗ್ರಹಿಸಿ ಸ್ಕೂಟರ್ ಖರೀದಿಸಿದ್ದಾರೆ. ದಿನನಿತ್ಯದ ವಸ್ತುಗಳನ್ನು ಖರೀದಿಸುವಾಗ ವಾಪಸ್ ಸಿಗುತ್ತಿದ್ದ ₹10ರ ನಾಣ್ಯಗಳನ್ನು ಅವರು ಪ್ರತ್ಯೇಕವಾಗಿ ತೆಗೆದಿಡುತ್ತಿದ್ದರು. ಕುಟುಂಬಕ್ಕೆ ಉಪಯುಕ್ತವಾದ ಯಾವುದಾದರೂ ವಸ್ತುವನ್ನು ಖರೀದಿಸಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಹೀಗೆ ಹಣ ಉಳಿಸುತ್ತಿದ್ದರು. ಆರಂಭದಲ್ಲಿ ರವಿ ಜೋಸೆಫ್ ಅವರ ಕುಟುಂಬಸ್ಥರು ಇಂತಹ ಆಲೋಚನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಬಳಿಕ ಅವರ ಉಳಿತಾಯ ಪಯತ್ನ ಬೆಂಬಲಿಸಿದರು ಎಂದು ರವಿ ತಿಳಿಸಿದ್ದಾರೆ.
ಅವರ ಹಳೆಯ ಸ್ಕೂಟರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಹೊಸ ಸ್ಕೂಟರ್ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಕಳೆದ ಮೂರು ವರ್ಷಗಳಿಂದ ನಾಣ್ಯಗಳ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಬಳಸಿ ಹೊಸ ವಾಹನ ಖರೀದಿಸಲು ಮುಂದಾದರು.
ಸುಮಾರು 15 ದಿನಗಳ ಹಿಂದೆ ರವಿ ಜೋಸೆಫ್ ಅವರು ಶೋರೂಮ್‌ಗೆ ಭೇಟಿ ನೀಡಿದ್ದರು. ಆಗ ₹10ರ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಬಹುದೇ ಎಂದು ವಿಚಾರಿಸಿದ್ದರು. ನಾಣ್ಯಗಳನ್ನು ಸ್ವೀಕರಿಸಲು ಶೋರೂಮ್ ಒಪ್ಪಿಗೆ ನೀಡಿತ್ತು ಎಂದು ಶೋರೂಮ್ ವ್ಯವಸ್ಥಾಪಕರು ತಿಳಿಸಿದ್ದಾರೆ.
Dreams come true with patience❤️
A 51-year-old pastor, B. Ravi Joseph, from Luxettipet, Telangana, bought a Honda Activa worth ₹1.23 lakh using ₹10 coins saved over three years. His inspiring journey proves that every small saving counts!
#Telangana #Inspiration #Savings https://t.co/AQSoZLva13
— Manjul Khattar 🇮🇳 (@manjul_k1) October 13, 2026
ಬಳಿಕ ರವಿ ಜೋಸೆಫ್ ಅವರು ₹1.23 ಲಕ್ಷ ಮೌಲ್ಯದ ₹10ರ ನಾಣ್ಯಗಳನ್ನು ಶೋರೂಮ್‌ಗೆ ತಂದು ಹಣ ಪಾವತಿಸಿ, ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಮನೆಗೆ ಕೊಂಡೊಯ್ದಿದ್ದಾರೆ. ಮೂರು ವರ್ಷಗಳ ಸತತ ಉಳಿತಾಯದ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಂಡಿರುವ ಅವರ ಪ್ರಯತ್ನ ಈಗ ಎಲ್ಲರ ಗಮನ ಸೆಳೆದಿದೆ. ದಿನ ಹತ್ತು ರೂಪಾಯಿ ಉಳಿಸುವುದರಿಂದ ಏನು ಖರೀದಿಸೋಕೆ ಸಾಧ್ಯ ಎಂಬ ಅಲಕ್ಷ್ಯ ಮಾಡುವವರಿಗೆ ಈ ಘಟನೆ ಒಂದು ಪಾಠವಾಗಬಹುದು. ಹನಿ ಹನಿ ಕೂಡಿ ಹಳ್ಳ ಎಂಬಂತೆ ಪ್ರತಿದಿನ ಉಳಿಸುವ ಹತ್ತು ರೂಪಾಯಿ ನಾಣ್ಯವೂ ಕೂಡ ಮುಂದೆ ನಿಮ್ಮ ಕನಸಿನ ಏನಾದರೊಂದು ವಸ್ತುವನ್ನ ಖರೀದಿಸಲು ಸಾಧ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ