
ನವದೆಹಲಿ (ಏ.29): ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸರ್ಕಾರಿ ಅಧಿಕಾರಿಗಳ ವಿರುದ್ಧದ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ರಿಲೀಫ್ ನೀಡಿದೆ. ನೇಮಕಾತಿ ಪ್ರಕ್ರಿಯೆಯು ಕಾನೂನುಬಾಹಿರ ಎನ್ನುವ ಕಾರಣ ನೀಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 24,000 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಳನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದ ನಂತರ ಸರ್ಕಾರವು ಉನ್ನತ ನ್ಯಾಯಾಲಯಕ್ಕೆ ಈ ಕುರಿತಾಗಿ ಅರ್ಜಿ ಸಲ್ಲಿಕೆ ಮಾಡಿತ್ತು. ಏಪ್ರಿಲ್ 26 ರಂದು, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಸಿಸಿ) ನಡೆಸಿದ್ದ, 2016ರ ಶಾಲಾ ಶಿಕ್ಷಕರ ಸಂಪೂರ್ಣ ನೇಮಕಾತಿಯನ್ನು ಹೈಕೋರ್ಟ್ ರದ್ದುಗೊಳಿಸಿತು. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಮತ್ತು ಮೂರು ತಿಂಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಪೀಠವು ಸಿಬಿಐಗೆ ಸೂಚನೆ ನೀಡಿತ್ತು. ಹೈಕೋರ್ಟ್ ಆದೇಶದ ಎರಡು ದಿನಗಳ ನಂತರ, ತೃಣಮೂಲ ಕಾಂಗ್ರೆಸ್ ಸರ್ಕಾರವು ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು.
ಮೌಖಿಕ ಸಲ್ಲಿಕೆಗಳನ್ನು ಆಧರಿಸಿ ಮತ್ತು ದಾಖಲೆಯಲ್ಲಿ ಯಾವುದೇ ಅಫಿಡವಿಟ್ ಅನುಪಸ್ಥಿತಿಯಲ್ಲಿ ಹೈಕೋರ್ಟ್, ಯಾವುದೇ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಸರ್ಕಾರಕ್ಕೆ ಸಾಕಷ್ಟು ಸಮಯವನ್ನು ನೀಡದೆ ನೇಮಕಾತಿಗಳನ್ನು ಮತ್ತು ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ನಿರಂಕುಶವಾಗಿ ರದ್ದುಗೊಳಿಸಿದೆ ಎಂದು ಮಮತಾ ಸರ್ಕಾರ ಆರೋಪಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹದಿನೈದು ದಿನಗಳೊಳಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಡಬ್ಲ್ಯುಬಿಎಸ್‌ಎಸ್‌ಸಿಗೆ ಹೈಕೋರ್ಟ್ ಸೂಚಿಸಿತ್ತು. ಇದನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಶ್ನಿಸಿತ್ತು. ನಡೆಸಲಾಗಿದ್ದ ನೇಮಕಾತಿ ಪ್ರವೇಶ ಪರೀಕ್ಷೆಯ ಸುಮಾರು 23 ಲಕ್ಷ OMR ಹಾಳೆಗಳ (ಪರೀಕ್ಷಾ ಪತ್ರಿಕೆ) ಮರುಮೌಲ್ಯಮಾಪನ ಮಾಡುವಂತೆಯೂ ಹೈಕೋರ್ಟ್ ಆದೇಶಿಸಿತ್ತು.
26 ಸಾವಿರ ಶಿಕ್ಷಕರ ನೇಮಕ ರದ್ದು: ಚುನಾವಣಾ ಸಮಯದಲ್ಲಿ ದೀದಿ ಸರ್ಕಾರಕ್ಕೆ ಹೈಕೋರ್ಟ್ ಬಿಗ್ ಶಾಕ್
ಸುಪ್ರೀಂ ಕೋರ್ಟ್ ಮೇ 6 ರಂದು ಇದರ ವಿಚಾರಣೆ ನಡೆಸಲಿದೆ. ಆಪಾದಿತ ಹಗರಣ ನಡೆದಾಗ ರಾಜ್ಯದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಡಬ್ಲ್ಯುಬಿಎಸ್‌ಎಸ್‌ಸಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹೆಚ್ಚಿನ ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.
11,894 ಶಿಕ್ಷಕರ ನೇಮಕ ಸುಪ್ರೀಂ ಅಂತಿಮ ತೀರ್ಪಿಗೆ ಬದ್ಧ: ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ