ಕರ್ನಾಟಕ ಸೇರಿ 4 ರಾಜ್ಯಕ್ಕೆ ತೌಕ್ಟೆ ಸೈಕ್ಲೋನ್‌: 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ!

By Suvarna News  |  First Published May 15, 2021, 7:41 AM IST

* ಕರ್ನಾಟಕ, 4 ರಾಜ್ಯಕ್ಕೆ ಇಂದು ತೌಕ್ಟೆಸೈಕ್ಲೋನ್‌

* ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

* ಗಂಟೆಗೆ 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ


ನವದೆಹಲಿ(ಮೇ.15): ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ ಇನ್ನಷ್ಟುಗಂಭೀರ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಸಾಮಾನ್ಯದಿಂದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ವೇಳೆ ಗಂಟೆಗೆ 150-175 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಕರಾವಳಿ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಹೇಳಿದೆ.

ಲಕ್ಷದ್ವೀಪ ಬಳಿ ಉಂಟಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮತ್ತಷ್ಟುತೀವ್ರಗೊಂಡಿದೆ. ಹೀಗಾಗಿ ತೌಕ್ಟೆಚಂಡಮಾರುತ ಶನಿವಾರದ ವೇಳೆಗೆ ಗಂಭೀರ ಚಂಡಮಾರುತದ ಸ್ವರೂಪ ಪಡೆದುಕೊಂಡು, ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಲಿದೆ. ಶನಿವಾರದಿಂದಲೇ ಲಕ್ಷದ್ವೀಪ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಸಾಮಾನ್ಯದಿಂದ ಭಾರೀ ಮಳೆ ಸುರಿಯಲಿದೆ. ಈ ಪೈಕಿ ಕರ್ನಾಟಕದ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡ ಘಟ್ಟಪ್ರದೇಶಗಳ ಕೆಲವೆಡೆ ಮೇ 15 ಮತ್ತು 16ರಂದು ಸಾಮಾನ್ಯ ಮಳೆ ಸುರಿಯಲಿದ್ದರೆ, ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Latest Videos

undefined

ಮೇ 17ರಂದು ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಜಿಲ್ಲೆಯ ಮೇಲೆ ಅಪ್ಪಳಿಸಲಿದೆ. ಹೀಗಾಗಿ ಮೇ 16ರಿಂದಲೇ ಅಲ್ಲಿ ಕೆಲ ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೌಕ್ಟೆಈ ವರ್ಷದ ಮೊದಲ ಚಂಡಮಾರುತವಾಗಿದೆ. ಈ ಹೆಸರು ನೀಡಿದ್ದು ಮ್ಯಾನ್ಮಾರ್‌ ದೇಶ. ತೌಕ್ಟೆಎಂದರೆ ಹಲ್ಲಿ ಎಂದರ್ಥ.

ಎನ್‌ಡಿಆರ್‌ಎಫ್‌ ನಿಯೋಜನೆ:

ಈ ನಡುವೆ ಚಂಡಮಾರುತದಿಂದ ಎದುರಾಗಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು 5 ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್‌ನ 53 ತುಕಡಿಗಳನ್ನು ನಿಯೋಜಿಸಲಾಗಿದೆ.

ಯಾವ್ಯಾವ ರಾಜ್ಯಕ್ಕೆ ಭೀತಿ?

ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಗುಜರಾತ್‌

click me!