
ಪಣಜಿ : 2013ರ ಲೈಂಗಿka ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ 'ತೆಹಲ್ಕಾ' ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಸೋಮವಾರ ಗೋವಾದ ಮಾಪುಸಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ್ದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
2013 ರ ನವೆಂಬರ್‌ನಲ್ಲಿ ಗೋವಾದಲ್ಲಿ ತೆಹಲ್ಕಾ ನಿಯತಕಾಲಿಕೆ ಆಯೋಜಿಸಿದ್ದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ಐಷಾರಾಮಿ ಹೋಟೆಲ್‌ನ ಲಿಫ್ಟ್‌ನಲ್ಲಿ ತರುಣ್ ತೇಜ್‌ಪಾಲ್ ಅವರು ತಮ್ಮ ಕಿರಿಯ ಸಹೋದ್ಯೋಗಿ ಮೇಲೆ ಲೈಂಗಿka ದೌರ್ಜನ್ಯ ಎಸಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಗೋವಾ ಸೆಷನ್ಸ್ ನ್ಯಾಯಾಲಯವು ಮೇ 2021 ರಲ್ಲಿ, ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳನ್ನು ಸಮಂಜಸವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿ ತೇಜ್‌ಪಾಲ್‌ರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಕ್ಲೀನ್‌ಚಿಟ್ ನೀಡಿತ್ತು.
ಸೆಷನ್ಸ್ ನ್ಯಾಯಾಲಯದ ದೋಷಮುಕ್ತಿ ಆದೇಶವನ್ನು ಪ್ರಶ್ನಿಸಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಮ್‌ಸಂಡೇಕರ್ ಅವರಿದ್ದ ಪೀಠವು, ಆಗಸ್ಟ್ 6 ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ತೇಜ್‌ಪಾಲ್ ಅಪರಾಧಿ ಎಂದು ಘೋಷಿಸಿತು. ಜೊತೆಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10,21,000 ರೂಪಾಯಿ ದಂಡ ವಿಧಿಸಿ. ದಂಡದ ಸಂಪೂರ್ಣ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಸೂಚನೆ ನೀಡಿತು.
ಹೈಕೋರ್ಟ್ ಆದೇಶದ ವಿರುದ್ಧ ತೇಜ್‌ಪಾಲ್ ತಮ್ಮ ವಕೀಲ ಆದಿತ್ಯ ಸಮದ್ದರ್ ಮೂಲಕ ಸುಪ್ರೀಂ ಮೆಟ್ಟಿಲೇರಿ, ಶರಣಾಗತಿಗೆ ವಿನಾಯಿತಿ ಕೋರಿದ್ದರು. ಆದರೆ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ಪೀಠವು ಈ ವಿನಾಯಿತಿ ಅರ್ಜಿಯನ್ನು ತಿರಸ್ಕರಿಸಿ, 2 ವಾರಗಳ ಒಳಗೆ ಶರಣಾಗಬೇಕೆಂದು ಖಡಕ್ ಸೂಚನೆ ನೀಡಿತು.
ಸುಪ್ರೀಂ ಕೋರ್ಟ್ ಆದೇಶದಮತೆ ತೇಜ್‌ಪಾಲ್ ಈಗ ಶರಣಾಗಿದ್ದು, ಜೈಲು ಶಿಕ್ಷೆ ಆರಂಭಿಸಿದ್ದಾರೆ. ಇವರ ಶಿಕ್ಷೆಯ ವಿರುದ್ಧದ ಮುಖ್ಯ ಮೇಲ್ಮನವಿ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 22 ರಂದು ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿದೆ. ಇನ್ನೊಂದೆಡೆ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ 10 ವರ್ಷಗಳ ಶಿಕ್ಷೆ ಅಸಮರ್ಪಕವಾಗಿದ್ದು, ತೇಜ್‌ಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಕೋರಿ ಗೋವಾ ಸರ್ಕಾರವು ಹೈಕೋರ್ಟ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಿದೆ. ಸದ್ಯ 13 ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣದ ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ