
ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಪ್ರತಿದಿನ 60 ರಿಂದ 80 ಸಾವಿರ ಮಂದಿ ಆಗಮಿಸುತ್ತಾರೆ. ತಿರುಮಲ ಅಂದರೆ ನಿತ್ಯ ಕಲ್ಯಾಣ, ಹಸಿರು ತೋರಣ ಎಂದಿರುತ್ತದೆ. ಶ್ರೀವಾರಿ ಸುಪ್ರಭಾತಕ್ಕೆ ಸೇವೆಯಿಂದ ಹಿಡಿದು ರಾತ್ರಿ ಏಕಾಂತ ಸೇವೆಯ ವರೆಗೂ ಹಲವು ಸೇವೆಗಳು ನಡೆಯುತ್ತದೆ. ಇತ್ತೀಚೆಗೆ ಪ್ರತಿದಿನ 65 ರಿಂದ 80 ಮಂದಿ ಭಕ್ತರಿಗೆ ದರ್ಶನ ಕಲ್ಪಿಸಲಾಗುತ್ತಿದೆ ಎಂದು ಟಿಟಿಡಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ರಜೆಯ ದಿನಗಳಲ್ಲಿ, ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುತ್ತದೆ.
ನಿತ್ಯ ಸುಮಾರು ಲಕ್ಷ ಮಂದಿ ಭಕ್ತರು ಆಗಮಿಸುವುದರಿಂದ ಇದಕ್ಕೆ ಅನುಗುಣವಾಗಿ ಶ್ರೀವಾರಿ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಟಿಟಿಡಿ ಹೇಳುತ್ತಿದೆ. ಹಾಗಾದರೆ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಎಷ್ಟು ರೀತಿಯ ಮಾರ್ಗಗಳು ಇದೆ? ಭಕ್ತರಿಗೆ ಸಮಸ್ಯೆ ಆಗುತ್ತಿರುವುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಸರ್ವದರ್ಶನ: ತಿರುಮಲಕ್ಕೆ ಆಗಮಿಸುವ ಭಕ್ತರಲ್ಲಿ ಬಹುತೇಕ ಮಂದಿ ಸರ್ವದರ್ಶನಕ್ಕೆ ಆಗಮಿಸುತ್ತಾರೆ. ಸರ್ವದರ್ಶನ ಅಂದರೆ ಎಲ್ಲರಿಗೂ ದರ್ಶನ ಎಂಬರ್ಥ. ಭಾರೀ ಪ್ರಮಾಣದಲ್ಲಿ ಬರುವ ಭಕ್ತರಿಗೆ ಸುಲಭವಾಗಿ ದರ್ಶನ ಕಲ್ಪಿಸಲು ಒಂದು ಸಮರ್ಥವಾದ ಪದ್ಧತಿಯಾಗಿದೆ ಎಂದು ಟಿಟಿಡಿ ಹೇಳುತ್ತಿದೆ. ಈ ಸರ್ವದರ್ಶನ ಟೋಕನ್‌ಗಳನ್ನು ತಿರುಮಲ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸಮೀಪದ ಶ್ರೀನಿವಾಸ, ವಿಷ್ಣುವಿಲಾಸ, ಅಲಿಪಿರಿ ಮಾರ್ಗದ ಬಳಿ ಇರುವ ಭೂದೇವಿ ಕಾಂಪ್ಲೆಕ್ಸ್‌ನಲ್ಲಿ 24 ಗಂಟೆಯ ಮುನ್ನ ಸ್ಲಾಟೆಡ್ ಸರ್ವದರ್ಶನ ಟೋಕನ್ ಹೆಸರಿನಲ್ಲಿ ನೀಡಲಾಗುತ್ತದೆ. ಸರ್ವದರ್ಶನ ಸಂಪೂರ್ಣ ಉಚಿತ, ಯಾವುದೇ ಹಣ ನೀಡುವ ಅಗತ್ಯವಿಲ್ಲ. ಸರ್ವದರ್ಶನ ಟೋಕನ್ ಮೇಲೆ ನೀಡಿರುವ ಸಮಯಕ್ಕೆ ಅನುಗುಣವಾಗಿ ಭಕ್ತರು ತಿರುಮಲದಲ್ಲಿ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಬಳಿ ಆಗಮಿಸಬೇಕು. ದೇವಾಲಯದ ಪಕ್ಕದಲ್ಲೇ ಇರುವ ಕಾಂಪ್ಲೆಕ್ಸ್‌ಗೆ ಭಕ್ತರು ಆಗಮಿಸಿದ ಬಳಿಕ ತಮಗೆ ನಿಗದ ಪಡಿಸಿದ ಸಮಯದ ವರೆಗ ಕಾಯಬೇಕಿದೆ. ಆದರೆ ಕೆಲವು ಸಂದರ್ಭದಲ್ಲಿ ಈ ಕಾಯುವ ಸಮಯ 24 ಗಂಟೆ ವರೆಗೂ ತೆಗೆದುಕೊಳ್ಳುತ್ತದೆ. ಸಾಮಾನ್ಯ ದಿನಗಳಲ್ಲಿ 18 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಸಮಯದಲ್ಲಿ 20 ಗಂಟೆ ವರೆಗೂ ಕಾಯಬೇಕಿದೆ.
ವಿಶೇಷ ದರ್ಶನ ವ್ಯವಸ್ಥೆಯನ್ನು ಶ್ರೀಘ್ರ ದರ್ಶನ ಎಂದು ಕರೆಯುತ್ತಾರೆ. ಸೆಪ್ಟೆಂಬರ್ 21, 2009ರಲ್ಲಿ ಈ ವ್ಯವಸ್ಥೆಯನ್ನು ಆರಂಭ ಮಾಡಿದ್ದರು. ಭಕ್ತರಿಗೆ ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯನ್ನು ರೂಪಿಸಿದೆ. ಆ ಬಳಿಕ ಇದನ್ನು ಆನ್‌ಲೈನ್ ಪದ್ದತಿ ತರಲಾಗಿತ್ತು. ಆಗಸ್ಟ್ 27, 2014ರಿಂದ ಈ ಟಿಕೆಟ್ ಗಳನ್ನು ಆನ್ ಲೈನ್‌ನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮಾಡೆಲ್‌ನಲ್ಲಿ ಟಿಟಿಡಿ ಭಕ್ತರಿಗೆ ನೀಡುತ್ತಿದೆ. ಈ ಟಿಕೆಟ್ ದರ 300 ರೂಪಾಯಿ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು, ಭಕ್ತರು ತಮ್ಮ ಫೋಟೋ ಗುರುತು ಇರುವ ಗುರುತಿನ ಚೀಟಿ ತೆಗೆದುಕೊಂಡು ದರ್ಶನಕ್ಕೆ ಆಗಮಿಸಬಹುದು. 12 ವರ್ಷದ ಮಕ್ಕಳಿಗೆ ಉಚಿತ ದರ್ಶನಕ್ಕಾಗಿ ಮಕ್ಕಳ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಒಮ್ಮೆ ಈ ಟಿಕೆಟ್ ಖರೀದಿ ಮಾಡಿದರೆ ಮುಂದೂಡಿಕೆ ಮಾಡುವುದು, ರಿಫಂಡ್ ಮಾಡುವುದು ಇರುವುದಿಲ್ಲ ಎಂದು ಟಿಟಿಡಿ ನಿಯಮಗಳು ಹೇಳುತ್ತಿವೆ.
ನಡೆದುಕೊಂಡು ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಬೇಗ ದರ್ಶನ ನೀಡಲು ದಿವ್ಯಾ ದರ್ಶನ ವಿಧಾನವನ್ನು ರೂಪಿಸಿದೆ. ವೆಂಕಟೇಶ್ವರ ಸ್ವಾಮಿ ಆಲಯಕ್ಕೆ ಆಗಮಿಸುವವರು, ವಾಹನಗಳು ಬರುವ ಮಾರ್ಗದಲ್ಲಿ ಹೊರತು ಪಡಿಸಿ ನಡೆದುಕೊಂಡು ಬಂದರೆ ಮಾತ್ರ ದಿವ್ಯಾ ದರ್ಶನ ಲಭ್ಯವಾಗಲಿದೆ.ಅಲಿಪಿರಿ ಮಾರ್ಗ, ಶ್ರೀನಿವಾಸಮಂಗಾಪುರದ ಶ್ರೀವಾರಿಮೆಟ್ಟು ಮಾರ್ಗ ಎರಡು ಮಾರ್ಗಗಳ ಮೂಲಕ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ದಿವ್ಯಾ ದರ್ಶನ ಟೋಕನ್‌ಗಳನ್ನು ಶ್ರೀವಾರಿ ಮೆಟ್ಟಲಿನ ಮೂಲಕ ಆಗಮಿಸುವ ಭಕ್ತರಿಗೆ ಮಾತ್ರ ನೀಡಲಾಗುತ್ತದೆ.
ಶ್ರೀವಾರಿ ಮೆಟ್ಟು ಶ್ರೀನಿವಾಸ ಮಂಗಾಪುರಂ ಸಮೀಪವಿದೆ. ತಿರುಮಲಕ್ಕೆ ನಡೆದುಕೊಂಡು ಹೋಗಲು ಅತ್ಯಂತ ಹತ್ತಿರದ ಮಾರ್ಗದವಾಗಿದೆ. ಆದರೆ ತಿರುಪತಿಯಿಂದ ಶ್ರೀವಾರಿ ಮೆಟ್ಟು ಮಾರ್ಗ ಸುಮಾರು 16 ಕಿಲೋಮೀಟರ್ ದೂರವಿದೆ. ತಿರುಪತಿ ಬಸ್‌ಸ್ಟಾಂಡ್ ನಿಂದ ಶ್ರೀವಾರಿ ಮೆಟ್ಟು ಮಾರ್ಗದ ವರೆಗೂ ಬಸ್ ಸೌಳಭ್ಯವಿದೆ. ಧರ್ಮರಥ ಹೆಸರಿನಲ್ಲಿ ಟಿಟಿಡಿ ಈ ಬಸ್‌ಗಳನ್ನು ನಡೆಸುತ್ತಿದೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯಿಂದ ಪ್ರತಿ 45 ನಿಮಿಷಕ್ಕೆ ಒಂದು ಬಸ್ ಇದ್ದು, ಒಟ್ಟು 18 ಟ್ರಿಪ್‌ಗಳಿದೆ. ಶ್ರೀವಾರಿ ಮೆಟ್ಟು ನಿಂದ ಸಂಜೆ 7 ಗಂಟೆ 15 ನಿಮಿಷದಿಂದ ಆರಂಭವಾಗುತ್ತದೆ. ಸಂಜೆ 6 ಗಂಟೆಯಿಂದ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಭಕ್ತರಿಗೆ ಅನುಮತಿ ಇಲ್ಲ. ಮತ್ತೆ ಬೆಳಗ್ಗೆ 6 ಗಂಟೆಗೆ ಈ ಮಾರ್ಗ ಮತ್ತೆ ತೆರೆಯುತ್ತದೆ. ಈ ಮಾರ್ಗದಲ್ಲಿ ಆಗಮಿಸುವ ಭಕ್ತರಿಗೆ ನಿತ್ಯ 4-5 ದಿವ್ಯಾ ದರ್ಶನ ಟಿಕೆಟ್ ಟೋಕನ್‌ಗಳನ್ನು ನೀಡಲಾಗುತ್ತದೆ.
ಪ್ರಮುಖರಿಗೆ, ಪ್ರೊಟೋಕಾಲ್ ಇರುವವರಿಗೆ ನೀಡುವ ದರ್ಶನವೇ ವಿಐಪಿ ದರ್ಶನ. ಇದರಲ್ಲಿ ಚುನಾಯಿತ ಸದಸ್ಯರು, ಉನ್ನತ ಅಧಿಕಾರಿಗಳು, ಶಿಫಾರಸ್ಸು ಪತ್ರ ಇರುವವರಿಗೆ ಈ ದರ್ಶನ ಸೌಲಭ್ಯ ಸಿಗುತ್ತದೆ. ಇನ್ನು, ಟಿಟಿಡಿ ಟ್ರಸ್ಟ್ ಗಳಿಗೆ ದೇಣಿಗೆ ನೀಡುವ ಭಕ್ತರಿಗೆ ಕೂಡ ವಿಐಪಿ ಬ್ರೇಕ್ ದರ್ಶನ, ಶ್ರೀಘ್ರ ದರ್ಶನ ಸೌಲಭ್ಯ ಸಿಗುತ್ತದೆ.
ಇದು ಒಂದು ದಾನ ಸೇವೆಯ ಸೌಲಭ್ಯ. ಭಕ್ತರು ಸ್ವಾಮಿಗೆ 10ಸಾವಿರ ರೂಪಾಯಿ ದೇಣಿಗೆ ನೀಡಿ, 500 ರೂಪಾಯಿ ನೀಡಿ ಬ್ರೇಕ್ ದರ್ಶನ ಟಿಕೆಟ್ ಖರೀದಿ ಮಾಡಬೇಕು. ಅಂದರೆ ಒಟ್ಟು 10,500 ರೂಪಾಯಿ ಆಗುತ್ತದೆ. ಈ ಟಿಕೆಟ್‌ಗಳು ನಿತ್ಯ ಆನ್ ಲೈನ್‌ನಲ್ಲಿ ಪ್ರತಿದಿನ ಲಭ್ಯವಾಗುತ್ತದೆ. ಮೊದಲು ಬೆಳಗಿನ ಸಮಯದಲ್ಲಿ ನೀಡುತ್ತಿದ್ದ ಈ ದರ್ಶನ ಸೇವೆಯನ್ನು ಈಗ ಸಂಜೆಯ ಅವಧಿಯಲ್ಲಿ ನೀಡಲಾಗುತ್ತಿದೆ. ಪ್ರತಿ ದಿನ ಸಂಜೆ 4 ಗಂಟೆಗೆ ಶ್ರೀವಾಣಿ ಟ್ರಸ್ಟ್ ಭಕ್ತರಿಗೆ ಬ್ರೇಕ್ ದರ್ಶನ ಸೌಲಭ್ಯ ಸಿಗುತ್ತದೆ.
ವಯಸ್ಸು ಆಗಿರುವವರಿಗೆ, ವಿಶೇಷ ಚೇತನರಿಗೆ ಪ್ರತ್ಯಕ ದರ್ಶನವನ್ನು ಟಿಟಿಡಿ ಕಲ್ಪಿಸುತ್ತದೆ. ಇದಕ್ಕೆ ಅಗತ್ಯವಿರು ಗುರುತಿನ ಚೀಟಿಯನ್ನು ತೆಗೆದುಕೊಂಡು ಅರ್ಹ ಭಕ್ತರು, ವಿಶೇಷ ಚೇತನರ ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ಗುರುತಿನ ಚೀಟಿಯೊಂದಿಗೆ ಭಕ್ತರು ಆಗಮಿಸಬೇಕು. ಈ ದರ್ಶನ ವೇಳೆ ದಂಪತಿಗಳಿಗೂ ಅವಕಾಶ ನೀಡಲಾಗುತ್ತದೆ. ಸೋಮವಾರರಿಂದ ಶನಿವಾರದ ವರಗೂ ಮಧ್ಯಾಹ್ನ 3 ಗಂಟೆ ಪ್ರತಿದಿನ ಸಾವಿರ ಮಂದಿಗೆ ಈ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ದರ್ಶನಕ್ಕೆ ಮೊದಲು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳಬೇಕು. ಪ್ರತಿ ದಿನ 750 ಮಂದಿಗೆ ಅನುಮತಿ ನೀಡಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.
ಒಂದು ವರ್ಷದ ಒಳಗಿನ ಮಕ್ಕಳು ಇರುವ ದಂಪತಿಗೆ ಅನುಕೂಲ ಆಗುವಂತೆ ವಿಶೇಷ ದರ್ಶನ ನೀಡಲಾಗುತ್ತದೆ. ತಿರುಮಲ ದೇವಾಲಯದ ದಕ್ಷಿಣ ಬೀದಿಯಲ್ಲಿರುವ ಸುಪಥಂ ಮಾರ್ಗದ ಮೂಲಕ ಇಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 12ರಿಂದ 6 ಗಂಟೆ ವರೆಗೂ ದರ್ಶನ ಭಾಗ್ಯ ಸಿಗಲಿದೆ. ಇದರಲ್ಲಿ ಕೇವಲ ಮಗುವಿನ ತಂದೆ-ತಾಯಿ ಹಾಗೂ ಅವರ 12 ವರ್ಷ ಒಳಗಿನ ಹಿರಿಯ ಮಕ್ಕಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ಸುಪಥಂ ಪ್ರದೇಶ ದ್ವಾರ ಬಳಿ ಯಾವುದೇ ಅನ್ ಲೈನ್ ಬುಕ್ಕಿಂಗ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ ಮಗುವಿನ ಜನನ ಪ್ರಮಾಣ ಪತ್ರ, ಆಸ್ಪತ್ರೆ ನೀಡಿದ ಡಿಸ್ಜಾರ್ಜ್ ಪತ್ರ, ಪೋಷಕರ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಈ ದರ್ಶನ ಸಂಪೂರ್ಣ ಉಚಿತವಾಗಿರುತ್ತದೆ. ಎಲ್ಲರೂ ಸೂಕ್ತ ಸಾಂಪ್ರದಾಯಿಕ ಬಟ್ಟೆ ಧರಿಸುವುದು ಕಡ್ಡಾಯವಾಗಿದೆ.
ತಿರುಮದಲ್ಲಿ ನಿತ್ಯವೂ ಶ್ರೀವಾರಿ ಅರ್ಜಿತ ಸೇವೆಗಳು ನಡೆಯುತ್ತದೆ. ಇದರಲ್ಲಿ ಸುಪ್ರಭಾತ, ಅರ್ಚನೆ, ತೋಮಾಲ, ಏಕಾಂತ ಸೇವೆ, ಕಲ್ಯಾಣೋತ್ಸವಂ, ಅರ್ಜಿತ ಬ್ರಹ್ಮೋತ್ಸವ, ಡೋಲೋತ್ಸವ, ವಸಂತೋತ್ಸವ, ಸಹಸ್ರದೀಪಾಲಂಕರಣ ಸೇವೆಗಳು ನಡೆಯುತ್ತದೆ. ಈ ಸೇವೆಗಳಿಗೆ ಟಿಕೆಟ್ ಖರೀದಿ ಮಾಡಿದ ಭಕ್ತರಿಗೆ ದರ್ಶನ ಸೇವೆ ಸಿಗುತ್ತದೆ. ಈ ಸೇವೆಯ ಟಿಕೆಟ್‌ಗಳನ್ನು ಟಿಟಿಡಿ ಪ್ರತಿ ತಿಂಗಳು ಆನ್ ಲೈನ್ ಸೇವೆಯಲ್ಲಿ ನೀಡುತ್ತದೆ.
ದೇಶದ ಮೂಲೆ ಮೂಲೆಯಿಂದ ತಿರುಮಲಕ್ಕೆ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಟಿಟಿಡಿ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತದೆ. ತಿರುಮಲ ಬೆಟ್ಟದ ಮೇಲೆ ಮದುವೆಯಾದ ದಂಪತಿಗೆ ಟಿಟಿಡಿ ಶ್ರೀವಾರಿ ದರ್ಶನಕ್ಕೆ ಅವಕಾಶ ನೀಡುತ್ತದೆ. ಹೊಸ ದಂಪತಿಯೊಂದಿಗೆ 6 ಮಂದಿಗೆ ದರ್ಶನಕ್ಕೆ ಅವಕಾಶವಿರುತ್ತದೆ.
ಶ್ರೀನಿವಾಸ ದಿವ್ಯಾನುಗ್ರಹ ಹೋಮಂ ಹೆಸರಿನಲ್ಲಿ ಟಿಟಿಡಿ ಶ್ರೀವಾರಿ ದರ್ಶನಕ್ಕೆ ವ್ಯವಸ್ಥೆ ರೂಪಿಸುತ್ತಿದೆ. ಇದಕ್ಕೆ ಆನ್ ಲೈನ್‌ನಲ್ಲಿ ಒಂದು ಸಾವಿರ ರೂಪಾಯಿ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡಬೇಕು. ಇದನ್ನು ತಿರುಪತಿಯ ಅಲಿಪಿರಿ ಪಾದದ ಬಳಿ ಇರುವ ಗೋಶಾಲೆಯಲ್ಲಿ ನೆರವೇರಿಸಲಾಗುತ್ತದೆ. ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡ ಬಳಿಕೇ ತಿರುಮಲಕ್ಕೆ ತೆರಳಬೇಕು. ಈ ಹೋಮದ ಟಿಕೆಟ್ ಖರೀದಿ ಮಾಡಿದ ಭಕ್ತರಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ 300 ರೂಪಾಯಿಯ ವಿಶೇಷ ಟಿಕೆಟ್ ಪ್ರವೇಶ ದ್ವಾರದ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಇದರ ಜೊತೆಗೆ, ಟಿಟಿಡಿ ದಾನಿಗಳಿಗೆ ವಿವಿಧ ಸವಲತ್ತುಗಳನ್ನು ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್, ಶ್ರೀ ಬಾಲಾಜಿ ಆರೋಗ್ಯ ವರಪ್ರಸಾದಿನಿ ಯೋಜನೆ, BIRRD ಟ್ರಸ್ಟ್, ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್, ಪ್ರಾಣದಾನ ಟ್ರಸ್ಟ್, ಗೋಸಂರಕ್ಷಣಾ ಟ್ರಸ್ಟ್, ವಿದ್ಯಾದಾನಂ ಟ್ರಸ್ಟ್, ಶ್ರೀವಿಐಎಂಎಸ್ ಟ್ರಸ್ಟ್, ವೇದ ಪರಿರಕ್ಷಣಾಲಯ, ಶ್ರೀ ವೆಂಕಟೇಶ್ವರಲು ಮುಂತಾದ ಟ್ರಸ್ಟ್‌ಗಳು ಮತ್ತು ಯೋಜನೆಗಳಿಗೆ ಕೊಡುಗೆ ನೀಡುವವರಿಗೆ ದರ್ಶನ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ. ಟ್ರಸ್ಟ್ (ಶ್ರೀವಾಣಿ). ದರ್ಶನ ಅರ್ಹತೆಯು ಒಟ್ಟು ಒಂದು ಲಕ್ಷ ರೂಪಾಯಿಗಳ ದೇಣಿಗೆಯೊಂದಿಗೆ ಪ್ರಾರಂಭವಾಗುತ್ತದೆ.
ಇದರೊಂದಿಗೆ ಭಾರತದ ಸೇನೆಯಲ್ಲಿ ಕೆಲಸ ಮಾಡಿದ ಸೈನಿಕರಿಗೆ ನೇರವಾಗಿ 300 ರೂಪಾಯಿ ಟಿಕೆಟ್ ನೀಡುತ್ತದೆ. ಅನಿವಾಸಿ ಭಾರತೀಯರಿಗೂ (NRIs) ವಿಶೇಷ ಪ್ರವೇಶ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತದಿಂದ ಒಂದು ತಿಂಗಳ ಒಳಗಾಗಿ ವಾಪಸಾಗುವ ಪ್ರಯಾಣವನ್ನು ನಿಗದಿಪಡಿಸಿಕೊಂಡಿರುವವರು, ಸಂಬಂಧಿತ ದಿನಾಂಕ ಮತ್ತು ವಲಸೆ ಮುದ್ರೆಯನ್ನು ಹೊಂದಿರುವ ತಮ್ಮ ಪಾಸ್‌ಪೋರ್ಟ್ ಅನ್ನು ಹಾಜರುಪಡಿಸಬೇಕು. ಅವರಿಗೆ 300 ರೂ.ಗಳ ವಿಶೇಷ ಪ್ರವೇಶ ದರ್ಶನದ ಸೌಲಭ್ಯವನ್ನೂ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ