
ಚೆನ್ನೈ (ಮಾ.15): ಪ್ರಾಚೀನ ತಮಿಳು ಸಂಸ್ಕೃತಿಯು ತಮಿಳುನಾಡು ಮಾತ್ರವಲ್ಲ, ನೆರೆಯ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಒಡಿಶಾಗೂ ವ್ಯಾಪಿಸಿತ್ತು ಎಂದಿರುವ ತಮಿಳುನಾಡು ಸರ್ಕಾರ, ತನ್ನ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಈ ರಾಜ್ಯಗಳಲ್ಲೂ ತನ್ನ ಸಂಸ್ಕೃತಿಯನ್ನು ಅನ್ವೇಷಿಸುವ ಪ್ರಯತ್ನ ನಡೆಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದೆ. ಶುಕ್ರವಾರ ಬಜೆಟ್ ಮಂಡಿಸಿದ ಹಣಕಾಸು ಸಚಿವ ತಂಗಂ ತೇನಾರಸು, ‘ಪ್ರಾಚೀನ ತಮಿಳರ ಸಾಂಸ್ಕೃತಿಕ ಗುರುತುಗಳನ್ನು ಹುಡುಕುವ ಪ್ರಯಾಣವು ನೆರೆಯ ರಾಜ್ಯಗಳಾದ ಪಾಲೂರು (ಒಡಿಶಾ), ವೆಂಗಿ (ಆಂಧ್ರಪ್ರದೇಶ) ಮತ್ತು ಮಸ್ಕಿ (ಕರ್ನಾಟಕದ ರಾಯಚೂರು ಜಿಲ್ಲೆಯ ಪಟ್ಟಣ) ಪ್ರದೇಶಗಳಿಗೂ ವಿಸ್ತರಿಸಲಿದೆ’ ಎಂದರು.
‘ತಮಿಳುನಾಡಿನ ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಮತ್ತು ದಾಖಲಿಸಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ, 2025-26ರ ಹಣಕಾಸು ವರ್ಷದಲ್ಲಿ ಹಲವಾರು ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಪುರಾತತ್ವ ಉತ್ಖನನಗಳನ್ನು ನಡೆಸಲಾಗುವುದು. ಉತ್ಖನನವನ್ನು ಕೀಜಾಡಿ (ಶಿವಗಂಗಾ ಜಿಲ್ಲೆ), ಪಟ್ಟಣಮರುದೂರು (ತೂತ್ತುಕುಡಿ ಜಿಲ್ಲೆ), ಕರಿವಾಲಂವಂತನಲ್ಲೂರು (ತೆಂಕಶಿ ಜಿಲ್ಲೆ), ನಾಗಪಟ್ಟಿಣಂ (ನಾಗಪಟ್ಟಿಣಂ ಜಿಲ್ಲೆ), ಮಣಿಕ್ಕೊಲ್ಲೈ (ಕಡಲೂರು ಜಿಲ್ಲೆ), ಆದಿಚನೂರು (ಕಲ್ಲಕುರಿಚಿ ಜಿಲ್ಲೆ), ವೆಳ್ಳಾಲೂರು (ಕೊಯಮತ್ತೂರು ಜಿಲ್ಲೆ) ಹಾಗೂ ತೆಲಂಗಾನೂರು (ಸೇಲಂ ಜಿಲ್ಲೆ) ಗ್ರಾಮಗಳಲ್ಲಿ ನಡೆಸಲಾಗುವುದು’ ಎಂದರು.
‘ಹೆಚ್ಚುವರಿಯಾಗಿ, ಸಾಂಸ್ಕೃತಿಕ ಸಂಶೋಧನಾ ಪ್ರಯತ್ನವನ್ನು ತಮಿಳುನಾಡಿನ ಹೊರಗಿನ ಸ್ಥಳಗಳಾದ ಪಾಲೂರು (ಒಡಿಶಾ), ವೆಂಗಿ (ಆಂಧ್ರಪ್ರದೇಶ) ಮತ್ತು ಮಸ್ಕಿ (ಕರ್ನಾಟಕ) ಗಳಿಗೆ ವಿಸ್ತರಿಸಲಾಗುವುದು. ರಾಜ್ಯ ಗಡಿಗಳನ್ನು ಮೀರಿ ತಮಿಳು ಪರಂಪರೆ ಇರುವುದು ತಮಿಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತದೆ’ ಎಂದರು.
ಬೆಂಗಳೂರಿಗೆ ಸಡ್ಡು: ಹೊಸೂರಲ್ಲಿ ತಮಿಳುನಾಡು ಹೊಸ ಐಟಿ ಪಾರ್ಕ್
ಮಸ್ಕಿಯ ವೈಶಿಷ್ಟ್ಯ ಮಸ್ಕಿಯು ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನ ಹಾಗೂ ಇತರ ಐತಿಹಾಸಿಕ ಕುರುಹುಗಳು ಐತಿಹಾಸಿಕ ಮಹತ್ವ ತಂದಿವೆ.ಅಂದಿನ ಮಾಸಂಗಿಪುರವೇ ಇಂದಿನ ಮಸ್ಕಿ. ದೇವನಾಂಪ್ರಿಯ ಅಶೋಕನ ಶಿಲಾಶಾಸವನ್ನು 1915ರಲ್ಲಿ ಪಾಶ್ಚಾತ್ಯ ಸಂಶೋಧಕ ಸಿ. ಬೇಡನ್ ಎಂಬುವರು ಗುರುತಿಸಿದ್ದರು. ಇದನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಪ್ರಾಚೀನ ಅಸ್ಥಿಪಂಜರಗಳು, ವೀರಗಲ್ಲುಗಳೂ ಇಲ್ಲಿವೆ. 2ನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಮಲ್ಲಿಕಾರ್ಜುನ ದೇವಸ್ಥಾನ ಕೂಡ ತನ್ನದೇ ಇತಿಹಾಸ ಹೊಂದಿದೆ.
ತಮಿಳುನಾಡು ರೂಪಾಯಿ ಚಿಹ್ನೆ ಬದಲಾವಣೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಂಡನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ