
ತಮಿಳುನಾಡು (ನವೆಂಬರ್ 20): ಚೆನ್ನೈನಲ್ಲಿ ಇವತ್ತು ನಡೆದ ಕೊಳತ್ತೂರು ಶಾಸಕ ವಿ.ಎಸ್.ಬಾಬು ಅವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾಗಿಯಾದರು. ಈ ವೇಳೆ ಪ್ರಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸಿಎಂ ವಿಜಯ್ ಸಾಗಿದರು. ಇನ್ನು ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಚಪ್ಪಲಿ ಧರಿಸದೇ 2.3 ಕಿ.ಮೀ. ಬರಿಗಾಲಿನಲ್ಲಿ ನಡೆದು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.
ವಿ.ಎಸ್. ಬಾಬು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಕೊಳತ್ತೂರು (Kolathur) ಕ್ಷೇತ್ರದಲ್ಲಿ ಸೋಲಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಸಿಎಂ ವಿಜಯ್ ಪಕ್ಷದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದಿಂದ ಸ್ಪರ್ಧಿಸಿದ್ದರು. ಶಾಸಕ ಬಾಬು ದೀರ್ಘಕಾಲದ ಉಸಿರಾಟದ ತೊಂದರೆ ಹಾಗೂ ಹೃದಯಸ್ತಂಭನದಿಂದ ಗುರುವಾರ ನಿಧನರಾದರು.
ಇವತ್ತು ಸಿಎಂ ವಿಜಯ್ ಅವರು ವಿ.ಎಸ್.ಬಾಬು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿಗಳು ಬಾಬು ಅವರ ಪಾದಗಳನ್ನು ಮುಟ್ಟಿ ಅಂತಿಮ ನಮನ ಸಲ್ಲಿಸಿದರು. ನಂತರ ಅಂತ್ಯಕ್ರಿಯೆಯ ಮೆರವಣಿಗೆ ವೇಳೆ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಮನೆಯಿಂದ ಮೆರವಣಿಗೆಯಲ್ಲಿ ಸಾಗುವ ವಾಹನದವರೆಗೆ ಪಾರ್ಥಿವ ಶರೀರಕ್ಕೆ ಹೆಗಲು ಕಟ್ಟರು. ಈ ವೇಳೆ ತಮ್ಮ ಪಾದರಕ್ಷೆಗಳನ್ನ ತೆಗೆಯುವ ಮೂಲಕ ಭಾವನಾತ್ಮಕವಾಗಿ ಗಮನ ಸೆಳೆದರು. ನಂತರ ಬರೀ ಗಾಲಲ್ಲೇ 2.3 ಕಿಲೋ ಮೀಟರ್ ದೂರ ನಡೆದರು.
ರಾಜ್ಯ ಸಚಿವರುಗಳು, ಟಿವಿಕೆ ಶಾಸಕರು, ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ವಿಜಯ್ ಅವರುಗಳು ಸಾಥ್ ನೀಡಿದರು. ಮೆರವಣಿಗೆಯ ನಂತರ ಕುಟುಂಬದ ಸದಸ್ಯರು ಮತ್ತು ಹಿರಿಯ ನಾಯಕರ ಸಮ್ಮುಖದಲ್ಲಿ ಸ್ಮಶಾನದಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.
ಬೆಳಗ್ಗೆ ಪೆರಂಬೂರಿನ ಕ್ರೀಡಾ ಮೈದಾನದಲ್ಲಿ ಬಾಬು ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಅಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಬಂದು ಗೌರವ ಸಲ್ಲಿಸಿದರು. ದಿವಂಗತ ಶಾಸಕರ ಗೌರವಾರ್ಥವಾಗಿ ಆಡಳಿತಾರೂಢ ಟಿವಿಕೆ ತಮಿಳುನಾಡಿನಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ಪಕ್ಷದ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದೆ.
ಸೆಪ್ಟೆಂಬರ್ 9 ರಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶಾಸಕ ಬಾಬು ಅವರನ್ನು ಚೆನ್ನೈನ ಅಮಿಂಜಿಕರೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಜ್ಞರ ತಂಡ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಉಸಿರಾಟದ ನೆರವಿನೊಂದಿಗೆ ಚಿಕಿತ್ಸೆ ನೀಡುತ್ತಿತ್ತು. ಅತ್ಯುತ್ತಮ ವೈದ್ಯಕೀಯ ಆರೈಕೆ ಮತ್ತು ನಮ್ಮ ವೈದ್ಯಕೀಯ ತಂಡದ ತೀವ್ರ ಪ್ರಯತ್ನಗಳ ಹೊರತಾಗಿಯೂ, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಇತ್ತು. ತರುವಾಯ ಅವರಿಗೆ ಹೃದಯಸ್ತಂಭನ ಸಂಭವಿಸಿ ನವೆಂಬರ್ 19, 2026ರಂದು ಮಧ್ಯಾಹ್ನ 2:24ಕ್ಕೆ ನಿಧನರಾದರು ಎಂದು ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆ ತಿಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ