
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ Air India ಕೂಡ ಒಂದು! ಟಾಟಾ ಗ್ರೂಪ್ ಒಡೆತನದ ಈ ದೈತ್ಯ ಸಂಸ್ಥೆ ನಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. 2025-26ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹22,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಏರುತ್ತಿರುವ ಎಟಿಎಫ್ ಬೆಲೆಗಳು ಕಂಪನಿಯ ದುಃಸ್ಥಿತಿಗೆ ಪ್ರಮುಖ ಅಂಶವಾಗಿದೆ. ಜೊತೆಗೆ ಪಾಕಿಸ್ತಾನವನ್ನು ಸಹ ದೂಷಿಸಲಾಗುತ್ತಿದೆ. ಅಂದರೆ ಒಂದೂವರೆ ವರ್ಷದ ಹಿಂದೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ.. ಪಾಕಿಸ್ತಾನ ತನ್ನ ವಾಯು ಪ್ರದೇಶದ ಬಳಕೆಗೆ ನಿರ್ಬಂಧ ಹೇರಿದೆ. ಇದು ವಿಮಾನಯಾನ ವೆಚ್ಚವನ್ನು ಹೆಚ್ಚಿಸಿದೆ ಮತ್ತು ದೀರ್ಘ-ಪ್ರಯಾಣದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.
ಭಾರೀ ನಷ್ಟ ಬೆನ್ನಲ್ಲೇ ಟಾಟಾ ಗ್ರೂಪ್ ಎಚ್ಚೆತ್ತುಕೊಂಡಿದೆ. ಏರ್ ಇಂಡಿಯಾದ ಕಾರ್ಯಾಚರಣೆಗಳು ಮತ್ತು ವೆಚ್ಚಗಳ ಬಗ್ಗೆ ಪರಿಶೀಲನೆ ಪ್ರಾರಂಭಿಸಿದೆ. ಈ ಸಂಬಂಧ ನವೆಂಬರ್ 20 ರಂದು ಏರ್ ಇಂಡಿಯಾದ ಮಂಡಳಿಯ ಸಭೆ ನಡೆಸಿದೆ. ವೆಚ್ಚಗಳನ್ನು ಕಡಿಮೆ ಮಾಡುವುದು, ಕಾರ್ಯಾಚರಣೆಗಳನ್ನು ಸುಧಾರಿಸುವುದು ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನೊಂದಿಗೆ ಸಮನ್ವಯತೆ ಹೆಚ್ಚಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ.
ಏರ್ ಇಂಡಿಯಾಗೆ ಹೆಚ್ಚುತ್ತಿರುವ ಇಂಧನ ಬೆಲೆಗಳೇ ದೊಡ್ಡ ಸಮಸ್ಯೆಯಾಗಿದೆ. ಇದು ವಿಮಾನಗಳ ವೆಚ್ಚವನ್ನು ಹೆಚ್ಚಿಸಿದೆ. ಪಾಕಿಸ್ತಾನವು ಭಾರತೀಯ ವಿಮಾನಗಳು ತನ್ನ ವಾಯು ಪ್ರದೇಶವನ್ನು ಬಳಸುವುದರ ಮೇಲೆ ನಿರ್ಬಂಧ ವಿಧಿಸಿದೆ. ಪರಿಣಾಮ ಏರ್ ಇಂಡಿಯಾದ ಅನೇಕ ಅಂತರರಾಷ್ಟ್ರೀಯ ವಿಮಾನಗಳು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಹಾರಾಟದ ಸಮಯ ಮತ್ತು ಇಂಧನ ವೆಚ್ಚ ಎರಡನ್ನೂ ಹೆಚ್ಚಿಸುತ್ತಿದೆ.
ಸಂಸ್ಥೆಯ ನಷ್ಟ ಕಡಿಮೆ ಮಾಡಲು ಕಂಪನಿಯು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ನಡುವೆ ಉತ್ತಮ ಸಮನ್ವಯತೆ ಪರಿಗಣಿಸುತ್ತಿದೆ. ಎರಡೂ ಕಂಪನಿಗಳ ಕೆಲವು ಕಾರ್ಯಾಚರಣೆಗಳನ್ನ ಸಂಯೋಜಿಸಿ ವೆಚ್ಚ ಕಡಿಮೆ ಮಾಡಬಹುದು ಎಂಬುದು ಕಂಪನಿಯ ಲೆಕ್ಕಾಚಾರ.
ಏರ್ ಇಂಡಿಯಾದ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಟೆವೊಲ್ಡೆ ಗೆಬ್ರೆಮರಿಯಮ್ ಅಕ್ಟೋಬರ್ 1 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವುದರ ಮೇಲೆ ಅವರು ಒತ್ತು ನೀಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಈ ಸಂಬಂಧ ಒಂದು ತಂಡವನ್ನು ರಚಿಸಿದ್ದು, ಹೇಗೆಲ್ಲ ವೆಚ್ಚಗಳನ್ನ ಕಡಿಮೆ ಮಾಡಬಹುದು ಎಂಬವುದರ ಮೇಲೆಯೇ ಈ ತಂಡ ಕೆಲಸ ಮಾಡಲಿದೆ.
ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ನೋಯೆಲ್ ಟಾಟಾ ಮತ್ತು ಇತರ ಮಂಡಳಿಯ ಸದಸ್ಯರು ನಿನ್ನೆ ಗುರುಗ್ರಾಮ್ನಲ್ಲಿರುವ ಏರ್ ಇಂಡಿಯಾದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಕಂಪನಿಯ ಕಾರ್ಯಾಚರಣೆಗಳು, ತರಬೇತಿ ಅಕಾಡೆಮಿ ಮತ್ತು ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ