* ಅಣೆಕಟ್ಟು ಬಗ್ಗೆ ಪ್ರಾಧಿಕಾರದಲ್ಲಿ ಚರ್ಚೆಗೆ ಅವಕಾಶ ಬೇಡ
* ಮೇಕೆದಾಟು ವಿರುದ್ಧ ಮೋದಿಗೆ ತಮಿಳ್ನಾಡು ಸಿಎಂ ಸ್ಟಾಲಿನ್ ಪತ್ರ
* ಮೇಕೆದಾಟು ಯೋಜನೆಯ ಕುರಿತಂತೆ ತಮಿಳುನಾಡಿದ ಹಲವು ಅರ್ಜಿಗಳು ವಿಚಾರಣೆಯಲ್ಲಿವೆ
ಚೆನ್ನೈ(ಜೂ.14): ಜೂ.17ರಂದು ಆಯೋಜನೆಯಾಗಿರುವ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಚರ್ಚಿಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯಚಟುವಟಿಕೆಯ ವ್ಯಾಪ್ತಿಯು ಸುಪ್ರಿಂಕೋರ್ಚ್ ನಿರ್ದೇಶನಗಳನ್ನು ಪಾಲಿಸುವ ಮಿತಿಯನ್ನು ಮಾತ್ರ ಹೊಂದಿದೆ. ಬೇರೆ ವಿಷಯಗಳನ್ನು ಪ್ರಾಧಿಕಾರ ಪರಿಗಣಿಸುವಂತಿಲ್ಲ. ಮೇಕೆದಾಟು ಯೋಜನೆಯ ಕುರಿತಂತೆ ತಮಿಳುನಾಡಿದ ಹಲವು ಅರ್ಜಿಗಳು ವಿಚಾರಣೆಯಲ್ಲಿರುವುದರಿಂದ, ಇದು ಇನ್ನೂ ಸಹ ನ್ಯಾಯಾಲಯದಲ್ಲಿ ಇನ್ನೂ ತೀರ್ಮಾನವಾಗದ ವಿಷಯವಾಗಿದೆ. ಹಾಗಾಗಿ ಈ ವಿಷಯವನ್ನು ಚರ್ಚಿಸದಂತೆ ಪ್ರಾಧಿಕಾರಕ್ಕೆ ಸಲಹೆ ನೀಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಮೋದಿ ಅವರು ಸೂಚನೆ ನೀಡಬೇಕು ಎಂದು ಸ್ಟಾಲಿನ್ ಅವರು ಮನವಿ ಮಾಡಿದ್ದಾರೆ. ಇದೇ ವಿಷಯವಾಗಿ ಈಗಾಗಲೇ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಚ್‌ನಲ್ಲೂ ಅರ್ಜಿ ಸಲ್ಲಿಸಿದೆ.
ಮೇಕೆದಾಟು ಯೋಜನೆ ಕುರಿತಾದ ಸಂಪೂರ್ಣ ಯೋಜನಾ ವರದಿಯ ಕುರಿತಾಗಿ ಚರ್ಚೆ ನಡೆಸಲು ಜೂ.17ರಂದು 16ನೇ ಸಭೆಯನ್ನು ಪ್ರಾಧಿಕಾರ ಕರೆದಿದೆ.
‘ಮೇಕೆದಾಟು ಯೋಜನೆ ವಿಚಾರದಲ್ಲಿ ನ್ಯಾಯಾಧೀಕರಣ ತೀರ್ಪೇ ಅಂತಿಮ’
ಮೇಕೆದಾಟು ಯೋಜನೆ ವಿರುದ್ಧ ಸುಪ್ರೀಂ ಕೋರ್ಚ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆ ಸಂಬಂಧ ಕಾವೇರಿ ನದಿ ನ್ಯಾಯಾಧಿಕರಣದ ತೀರ್ಪೇ ಅಂತಿಮ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಚ್ ನಿರ್ದೇಶನದ ಮೇರೆಗೆ ಪ್ರಾಧಿಕಾರ ರಚನೆ ಆಗಿರುವುದರಿಂದ ತಮಿಳುನಾಡು ಸರ್ಕಾರ ಮಧ್ಯಪ್ರವೇಶ ಮಾಡಲಾಗದು. ಈ ವಿಚಾರದಲ್ಲಿ ಏನೇ ನಿರ್ಧಾರವಿದ್ದರೂ ಪ್ರಾಧಿಕಾರವೇ ಮಾಡುತ್ತದೆ ಎಂದರು. ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಅವರು ಮೇಕೆದಾಟು ಯೋಜನೆಯ ಚರ್ಚೆಯನ್ನು ಪ್ರಾಧಿಕಾರದಲ್ಲಿ ಪ್ರಸ್ತಾಪಿಸಲು ಅವಕಾಶವಿಲ್ಲ ಎಂದು ಹೇಳಿರುವುದು ಸರಿಯಲ್ಲ. ಈ ಯೋಜನೆಗೆ ವಿರೋಧ ಮಾಡಲು ಆಗುವುದಿಲ್ಲ. ನಮ್ಮ ವ್ಯಾಪ್ತಿಗೆ ಮೇಕೆದಾಟು ಬರುವ ಕಾರಣ ತಮಿಳುನಾಡು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ, ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಬಗ್ಗೆ ಚರ್ಚಿಸಲು ಅನುಮತಿ ನೀಡಬಾರದು ಎಂದು ಕೋರಿ ತಮಿಳುನಾಡು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದೆ.
ಜೂ.17ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಕುರಿತ ತನ್ನ ವಿಸ್ತೃತ ಯೋಜನಾ ವರದಿಯನ್ನು ಚರ್ಚೆಗಾಗಿ ಪರಿಣಗಿಸಬೇಕೆಂದು ಕರ್ನಾಟಕ ಮನವಿ ಮಾಡಿತ್ತು. ಇದನ್ನು ಮಾನ್ಯ ಮಾಡಿದ್ದ ಮಂಡಳಿ ವಿಷಯವನ್ನು ಚರ್ಚಾ ಪಟ್ಟಿಯಲ್ಲಿ ಸೇರಿಸಿತ್ತು. ಇದಕ್ಕೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.