
ಬೆಂಗಳೂರು(ಜ.26): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಮಂಗಳವಾರ ರಾಜಧಾನಿ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಟ್ರ್ಯಾಕ್ಟರ್ ಹಾಗೂ ವಾಹನಗಳಲ್ಲಿ ರೈತರು ರಾರಯಲಿಯಲ್ಲಿ ಭಾಗವಹಿಸಲು ಮುಂದಾಗಿದ್ದಾರೆ.
ಈ ಮಧ್ಯೆ ರಾರಯಲಿ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿರುವ ಜೊತೆಗೆ ಟ್ರ್ಯಾಕ್ಟರ್ ಹಾಗೂ ವಾಹನಗಳು ಜಿಲ್ಲಾ ಗಡಿ ದಾಟದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಪ್ರವೇಶಿಸುವ ಗಡಿ ಭಾಗಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ತಡೆಗಟ್ಟಲು ಬೆಂಗಳೂರು ಗ್ರಾಮಾಂತರ ಪೊಲೀಸರು ಸಜ್ಜಾಗಿದ್ದಾರೆ.
ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳ ಮುಖಂಡರು, ಪೊಲೀಸರು ರೈತರ ಹೋರಾಟ ನಿರ್ಬಂಧಿಸಲು ಮುಂದಾದರೆ ಪರಿಸ್ಥಿತಿ ಕೈ ಮೀರುತ್ತದೆ. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ಜವಾಬ್ದಾರಿಯಾಗಲಿದೆ. ಟ್ರ್ಯಾಕ್ಟರ್ ತರಲು ಅವಕಾಶ ನೀಡದಿದ್ದರೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಯೋಚಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸೋಮವಾರ ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳನ್ನು ಒಳಗೊಂಡ ‘ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ’ ಸಂಚಾಲಕ ಚಾಮರಸ ಮಾಲಿ ಪಾಟೀಲ್ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು, ಶಾಂತಿಯುತವಾಗಿ ಟ್ರ್ಯಾಕ್ಟರ್ ಪರೇಡ್ ಮಾಡಲಾಗುವುದು. ಗಣರಾಜ್ಯೋತ್ಸವ ಆಚರಣೆಗೆ ಯಾವುದೇ ರೀತಿ ಧಕ್ಕೆ ಆಗದಂತೆ ರಾರಯಲಿ ನಡೆಸಲಾಗುವುದು. ರಾರಯಲಿ ನಡೆಸಿ ಮಧ್ಯಾಹ್ನದ ಹೊತ್ತಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ರೈತ ಸಮಾವೇಶ ನಡೆಸಲಾಗುವುದು ಎಂದರು.
20 ಸಾವಿರ ರೈತರು ಭಾಗಿ:
ಚಾಮರಸ ಮಾಲಿ ಪಾಟೀಲ್ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಟ್ರ್ಯಾಕ್ಟರ್ ಹಾಗೂ ವಾಹನಗಳಲ್ಲಿ ಸುಮಾರು 20 ಸಾವಿರ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ರೈತರು ಸೇರಿದಂತೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ ಹಾಗೂ ನಗರದ ಸುತ್ತಮುತ್ತಲ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಬರುವ ರೈತರು ನಗರದ ಹೊರವಲಯವಾದ ತುಮಕೂರು ರಸ್ತೆಯ ನೈಸ್ ರೋಡ್ ಜಂಕ್ಷನ್, ಮೈಸೂರು ರಸ್ತೆಯ ಬಿಡದಿ ಇಂಡಸ್ಟ್ರಿಯಲ್ ಜಂಕ್ಷನ್, ಹೊಸಕೋಟೆ ಟೋಲ್ ಜಂಕ್ಷನ್, ಚಿಕ್ಕಬಳ್ಳಾಪುರ ರಸ್ತೆಯ ದೇವನಹಳ್ಳಿ ನಂದಿ ಕ್ರಾಸ್ ಬಳಿ ಬೆಳಗ್ಗೆ 9 ಗಂಟೆಗೆ ಜಮಾವಣೆಗೊಂಡು ಬಳಿಕ ಮಧ್ಯಾಹ್ನ 12.30ರ ಹೊತ್ತಿಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ರೈತ ಮುಖಂಡರು, ವಿಷಯ ತಜ್ಞರು ರೈತ ವಿರೋಧಿ ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ರೈತರ ಟ್ರ್ಯಾಕ್ಟರ್ ಪರೇಡ್ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ಯಾವುದೇ ಹಿಂಸೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ಮಾಹಿತಿ ನೀಡಿದ್ದರೂ ಪೊಲೀಸರು ರಾಜ್ಯದ ಹಲವೆಡೆ ಟ್ರ್ಯಾಕ್ಟರ್ ತಡೆಯುವುದು, ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಹಾಕಲು ನಿರಾಕರಿಸುವ ಮೂಲಕ ಸರ್ಕಾರ ನಾಗರಿಕ ಹೋರಾಟ ದಮನಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು. ಮುಖಂಡರಾದ ಜಿ.ಸಿ. ಬಯ್ಯಾರೆಡ್ಡಿ, ನಿತ್ಯಾನಂದಸ್ವಾಮಿ, ವೀರಸಂಗಯ್ಯ ಮತ್ತಿತರರು ಇದ್ದರು.
ಪೊಲೀಸರ ಅನುಮತಿ ಬೇಕಿಲ್ಲ- ಕುರುಬೂರು:
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಮಂಗಳವಾರದ ಗಣರಾಜ್ಯೋತ್ಸವ ಆಚರಣೆಗೆ ನಮ್ಮಿಂದ ಯಾವುದೇ ಧಕ್ಕೆಯಿಲ್ಲ. ನಾವೆಲ್ಲರೂ ಶಾಂತ ರೀತಿಯಿಂದ ಟ್ರ್ಯಾಕ್ಟರ್, ಬೈಕ್, ಖಾಸಗಿ ವಾಹನಗಳಲ್ಲಿ ಬಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಫ್ರೀಡಂ ಪಾರ್ಕ್ನಲ್ಲಿ ಸೇರಲಿದ್ದೇವೆ. ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ನಾವು ಇಲ್ಲಿಯೂ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದು ಇದಕ್ಕೆ ಪೊಲೀಸರ ಅನುಮತಿ ಬೇಕಿಲ್ಲ ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೃಷಿಯ ಗಂಧ ಗೊತ್ತಿಲ್ಲ. ಸಿನಿಮಾ ಡೈಲಾಗ್ ಹೊಡೆದರೆ ಅದಕ್ಕೆ ನಾವು ಸೊಪ್ಪು ಹಾಕುವುದಿಲ್ಲ. ಅವರು ಸಿನಿಮಾ ಡೈಲಾಗ್ ಹೇಳಿಕೊಂಡು ಮಾಧ್ಯಮದವರ ಮುಂದೆ ನಾಟಕ ಮಾಡುತ್ತಾರೆ. ಬಿ.ಸಿ. ಪಾಟೀಲ್ ಸಿನಿಮಾ ಮಂತ್ರಿ ಎಂದು ಟೀಕಿಸಿದರು. ರೈತ ಮುಖಂಡರಾದ ತುಂಬೆನಹಳ್ಳಿ ಶಿವಕುಮಾರ್, ಜಿ.ಜಿ. ಹಳ್ಳಿ ಬಿ. ನಾರಾಯಣಸ್ವಾಮಿ, ಗೋಪಾಲ, ಭೀಮಯ್ಯ ಉಪಸ್ಥಿತರಿದ್ದರು.
ದೆಹಲಿಯಲ್ಲಿ ರೈತರ ಶಾಂತಿಯುತ ಟ್ರ್ಯಾಕ್ಟರ್ ಪರೇಡ್‌ಗೆ ಅಲ್ಲಿನ ಸರ್ಕಾರ ಹಾಗೂ ಪೊಲೀಸರು ಅನುಮತಿ ನೀಡಿದ್ದಾರೆ. ನಾವು ಸಹ ಅದೇ ಮಾದರಿಯಲ್ಲಿ ಶಾಂತಿಯುತ ಹೋರಾಟಕ್ಕೆ ಅನುಮತಿ ಕೇಳಿದ್ದೇವೆ. ಹೋರಾಟಕ್ಕೆ ಅಡ್ಡಿಪಡಿಸಿದರೆ ರಸ್ತೆಗಳಲ್ಲೇ ಧರಣಿ ಕೂರಲಾಗುತ್ತದೆ
- ಚಾಮರಸ ಮಾಲಿಪಾಟೀಲ್, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಸಂಚಾಲಕ
ರಾಜಕಾರಣಿಗಳ ಬೆಂಬಲವನ್ನು ನಾವು ಕೇಳಿಲ್ಲ. ಅವರು ಪ್ರತ್ಯೇಕವಾಗಿ ಹೋರಾಟ ಮಾಡಲಿ. ರಾಜಕಾರಣಿಗಳೆಲ್ಲರೂ ಒಂದೆ. ಮಂಗಳವಾರ ಅವರಿಗೆ ನಮ್ಮ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ.
- ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
ಟ್ರ್ಯಾಕ್ಟರ್‌ಗಳಿಗೆ ರಾಷ್ಟ್ರಧ್ವಜ
ಗಣರಾಜ್ಯೋತ್ಸವವನ್ನು ಜನರ ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ. ನಮ್ಮ ಎಲ್ಲ ವಾಹನಗಳಿಗೆ ರಾಷ್ಟ್ರಧ್ವಜ, ಹಸಿರು ಬಾವುಟ ಕಟ್ಟಿಬೆಂಗಳೂರಿನ ಹೊರವಲಯದ ನೈಸ್ ರೋಡ್ ಜಂಕ್ಷನ್‌ನಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಮೆರವಣಿಗೆ ನಡೆಸುತ್ತೇವೆ. ಮಾಣೆಕ್ ಷಾ ಮೈದಾನದಲ್ಲಿ ರಾಜ್ಯಪಾಲರು ಧ್ವಜಾರೋಹಣ ಮಾಡಿದ ಬಳಿಕ ನಮ್ಮ ಪರೇಡ್ ಪ್ರಾರಂಭವಾಗಲಿದೆ.
- ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ
ರೈತರ ದುರ್ಬಳಕೆ
ರೈತರಿಗೆ ಅನುಕೂಲವಾಗುವಂಥ ಯಾವುದೇ ಹೋರಾಟವನ್ನು ಜೆಡಿಎಸ್ ಬೆಂಬಲಿಸುತ್ತದೆ. ಆದರೆ, ಟ್ರಾಕ್ಟರ್ ರಾರಯಲಿ ಮೂಲಕ ಕೆಲವರು ರಾಜಕೀಯ ಲಾಭಕ್ಕೆ ರೈತರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಕೇಂದ್ರದ ನೀತಿಗಳಿಂದಾಗಿ ರೈತರಿಗೆ ಉಳುಮೆ ಮಾಡಲು ಟ್ರಾಕ್ಟರ್‌ಗೆ ಡೀಸೆಲ್ ಹಾಕಿಸಲೇ ದುಡ್ಡಿಲ್ಲ. ಇನ್ನು ಬೆಂಗಳೂರಿಗೆ ದೂರದಿಂದ ಟ್ರಾಕ್ಟರ್ ಒಯ್ಯಲು ದುಡ್ಡೆಲ್ಲಿಂದ?
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಜೈಲ್ ಭರೋ ಮಾಡ್ತೀವಿ
ಕಾಂಗ್ರೆಸ್ ಪ್ರತಿಭಟನೆ ವೇಳೆಯೂ ತಡೆದಿದ್ದರು. ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರಾಕ್ಟರ್ ಸಮೇತ ಬರಲಿದ್ದಾರೆ. ಒಮ್ಮೆ ಟ್ರಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗ್ತೀವಿ. ಕೇಸ್ ಹಾಕಿದರೆ, ಜೈಲ್ ಭರೋ ಚಳವಳಿ ಮಾಡ್ತೀವಿ.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ