ವರ್ಷದೊಳಗೆ ನನ್ನ ವಿಚಾರಣೆ ಮುಗಿಯುತ್ತಾ ಎಂದು ಕೇಳಿದ ರಾಣಾ? ವಕೀಲರ ಪಡೆಯಲು ಷರತ್ತು

26/11 ಮುಂಬೈ ದಾಳಿಯ ಸಂಚುಕೋರ ತಹಾವುರ್ ರಾಣಾ ವಿಚಾರಣೆಯ ವೇಳೆ, ಲಷ್ಕರ್ ಉಗ್ರರು ಹಾಗೂ ಐಎಸ್‌ಐ ನಂಟಿನ ವ್ಯಕ್ತಿಗಳನ್ನು ಭೇಟಿಯಾಗುವಾಗ ಸೇನಾ ಸಮವಸ್ತ್ರ ಧರಿಸುತ್ತಿದ್ದೆ ಎಂದು ಹೇಳಿದ್ದಾನೆ.


ದೆಹಲಿ: 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಯಲ್ಲಿರುವ ಪ್ರಕರಣದ ಪ್ರಮುಖ ಸಂಚುಕೋರ ತಹಾವುರ್‌ ಹುಸೇನ್ ರಾಣಾ, ‘ನಾನು ಪಾಕಿಸ್ತಾನಿ ಸೇನೆಯ ವೈದ್ಯಕೀಯ ದಳವನ್ನು ತೊರೆದ ನಂತರವೂ, ಲಷ್ಕರ್‌-ಎ-ತೊಯ್ಬಾ ಉಗ್ರರು ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿನ ವ್ಯಕ್ತಿಗಳನ್ನು ಭೇಟಿ ಆಗುವಾಗ ಸೇನಾ ಸಮವಸ್ತ್ರ ಧರಿಸುತ್ತಿದ್ದೆ’ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಗೊತ್ತಾಗಿದೆ. ದಿಲ್ಲಿ ಎನ್‌ಐಎ ಕಚೇರಿಯಲ್ಲಿ ರಾಣಾ ವಿಚಾರಣೆ 2ನೇ ದಿನವೂ ಮುಂದುವರಿದಿದೆ. ಆತನನ್ನು ಎನ್ಐಎ ಡಿಐಜಿ ಜಯಾ ರಾಯ್‌ ಹಾಗೂ ಐಜಿ ಆಶಿಷ್‌ ಬಾತ್ರಾ ನೇತೃತ್ವದ 12 ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.

ರಾಣಾ ಹೇಳಿದ್ದೇನು?:‘
ನಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಿಚಾವತ್ನಿ ಎಂಬ ಹಳ್ಳಿಯವನಾಗಿದ್ದು, ನನ್ನ ತಂದೆ ಶಾಲಾ ಪ್ರಾಂಶುಪಾಲರಾಗಿದ್ದರು. ವೈದ್ಯಕೀಯ ಪದವಿ ಪಡೆದಿದ್ದ ನಾನು ಪಾಕ್‌ ಸೇನೆಯಲ್ಲಿ ವೈದ್ಯನಾಗಿದ್ದೆ’ ಎಂದು ಬಾಲ್ಯ ಹಾಗೂ ವೃತ್ತಿಜೀವನದ ಬಗ್ಗೆ ರಾಣಾ ತಿಳಿಸಿದ್ದಾನೆ.‘ನಾನು 1997 ರಲ್ಲಿ ವೈದ್ಯೆಯಾಗಿದ್ದ ಪತ್ನಿ ಸಮ್ರಾಜ್ ರಾಣಾ ಅಖ್ತರ್ ಜತೆ ಕೆನಡಾಕ್ಕೆ ತೆರಳಿದೆ. ಅಲ್ಲಿ ನಾನು ವಲಸೆ ಸಲಹಾ ಕಂಪನಿ ಪ್ರಾರಂಭಿಸಿದರು ಮತ್ತು ನಂತರ ಹಲಾಲ್ ಮಾಂಸ ವ್ಯವಹಾರದಲ್ಲಿ ತೊಡಗಿದೆ. ಆದಾಗ್ಯೂ, ಸಲಹಾ ಸಂಸ್ಥೆಯು ಭಯೋತ್ಪಾದಕ ಚಟುವಟಿಕೆಗಳಿಗೆ ನೆಲೆಯಾಯಿತು.

Latest Videos

 ಅದರಲ್ಲಿ ಡೇವಿಡ್‌ ಹೆಡ್ಲಿ ಕೂಡ ಶಾಮೀಲಾದ’ ಎಂದಿದ್ದಾನೆ.‘ವೈದ್ಯ ಸೇವೆಯಿಂದ ಹೊರಬಂದ ನಂತರವೂ ನನ್ನ ಮಿಲಿಟರಿ ಸಮವಸ್ತ್ರದಲ್ಲಿ ಭಯೋತ್ಪಾದಕ ಶಿಬಿರಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸೇರಿದಂತೆ ಭಯೋತ್ಪಾದನೆಗೆ ಸಂಬಂಧಿಸಿದ ಗುಂಪುಗಳೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದೆ’ ಎಂದು ಆತ ಹೇಳಿದ್ದಾನೆ ಮೂಲಗಳು ಎನ್‌ಡಿಟೀವಿಗೆ ತಿಳಿಸಿವೆ.ಅಲ್ಲದೆ, ‘ಸೇನಾ ದಿರಿಸಿನಲ್ಲೇ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್ ಅವರನ್ನು ಭೇಟಿಯಾದ್ದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾದ ಎನ್‌ಐಎ ಮೂಲಗಳು ತಿಳಿಸಿವೆ. ಮೇಜರ್‌ ಇಕ್ಬಾಲ್‌ 26/11 ದಾಳಿ ನಡೆಸಿದ್ದ ಡೇವಿಡ್‌ ಹೆಡ್ಲಿಗೆ ಸಹಾಯ ಮಾಡಿದ್ದ ಎಂದು ಅಮೆರಿಕ ಕೋರ್ಟಲ್ಲಿ ದೋಷಾರೋಪ ದಾಖಲಾಗಿತ್ತು.

ಮೀರ್‌ ಜತೆಗೂ ನಂಟು:
ಜಾಗತಿಕ ಭಯೋತ್ಪಾದಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಪರಾರಿಯಾದವರಲ್ಲಿ ಒಬ್ಬನಾಗಿರುವ ಸಾಜಿದ್ ಮಿರ್ ಜೊತೆ ರಾಣಾ ನಿಯಮಿತವಾಗಿ ಸಂಪರ್ಕದಲ್ಲಿದ್ದ ಎಂದು ತನಿಖೆಗಳು ಬಹಿರಂಗಪಡಿಸಿವೆ. ಸಾಜಿದ್‌ ಮೀರ್‌ ಮುಂಬೈನಲ್ಲಿ 6 ಜನರ ಸಾವಿಗೆ ಕಾರಣನಾದ ಛಾಬಾದ್‌ ಹೌಸ್‌ ಉಗ್ರ ದಾಳಿಯ ಆರೋಪಿಯಾಗಿದ್ದಾನೆ.

26/11 ದಾಳಿ ಬಗ್ಗೆ ತಿಳಿದಿದ್ದ ದುಬೈ ವ್ಯಕ್ತಿ ಯಾರು: ರಾಣಾ ತನಿಖೆಯಿಂದ ಬಯಲು?
ಉಗ್ರ ತಹಾವುರ್‌ ರಾಣಾ ಅಮೆರಿಕದಿಂದ ಗಡೀಪಾರಾಗಿ ಭಾರತಕ್ಕೆ ಬರುತ್ತಿದ್ದಂತೆ ಅವನು ಮತ್ತು 26/11ರಂದು ಮುಂಬೈನಲ್ಲಿ ನಡೆದ ಭೀಕರ ಹತ್ಯಾಕಾಂಡದ ಕುರಿತ ಒಂದೊಂದೇ ಪ್ರಮುಖ ಮಾಹಿತಿಗಳು ಬೆಳಗಿಗೆ ಬರುತ್ತಿವೆ.ರಾಣಾ ಗಡೀಪಾರಿನ ವೇಳೆ ಅಮೆರಿಕ ಭಾರತದೊಂದಿಗೆ ಹಂಚಿಕೊಂಡ ದಾಖಲೆಗಳಲ್ಲಿ, ಮುಂಬೈ ದಾಳಿಗೂ ಮುನ್ನ ಆ ಬಗ್ಗೆ ದುಬೈನ ವ್ಯಕ್ತಿಯೊಬ್ಬನಿಗೆ ತಿಳಿದಿತ್ತು ಹಾಗೂ ಆತನನ್ನು ರಾಣಾ ಭೇಟಿಯಾಗಿದ್ದ ಎನ್ನಲಾಗಿದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎನ್‌ಐಎ ತಂಡ ಇದೀಗ ಆತನ ಪತ್ತೆಗೆ ತನಿಖೆ ಆರಂಭಿಸಿದೆ. ರಾಣಾನ ತನಿಖೆಯಿಂದ ಆತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದೀತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಐಎ ಮೂಲಗಳ ಪ್ರಕಾರ, 2008ರ ದಾಳಿಗೂ ಮುನ್ನ ಭಾರತಕ್ಕೆ ಹೋಗದಂತೆ ರಾಣಾಗೆ ಎಚ್ಚರಿಸಿದ್ದ ಡೇವಿಡ್‌ ಹೆಡ್ಲಿ, ಆತನಿಗೆ ದುಬೈನಲ್ಲಿದ್ದ ಈ ವ್ಯಕ್ತಿಯನ್ನು ಭೇಟಿಯಾಗಲು ವ್ಯವಸ್ಥೆ ಮಾಡಿದ್ದ. ಆ ವ್ಯಕ್ತಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ, ಸೇನೆಯ ಗುಪ್ತಚರ ಸಂಸ್ಥೆ, ಸೇನೆಯ ಹಿರಿಯ ನಾಯಕ ಅಥವಾ ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಉಗ್ರ ಗುಂಪಿನ ನಾಯಕನೊಂದಿಗೆ ನಂಟಿತ್ತೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಅಮೆರಿಕದಲ್ಲಿ ರಾಣಾನ ವಿಚಾರಣೆ ನಡೆದಾಗ ಆತ ದುಬೈನಲ್ಲಿದ್ದ ವ್ಯಕ್ತಿಯ ಬಗ್ಗೆ ಉಲ್ಲೇಖಿಸಿರಬಹುದು ಎಂದೂ ಎನ್‌ಐಎ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವಕೀಲರ ಪಡೆಯಲು ರಾಣಾ ಷರತ್ತು
26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹಾವುರ್‌ ರಾಣಾ, ‘ನನ್ನ ಹೆಸರು ಬಳಸಿಕೊಂಡು ಖ್ಯಾತಿ ಗಳಿಸುವಂತೆ ಕಾಣುವ ಯಾವುದೇ ವಕೀಲರನ್ನು ನನ್ನ ಪರ ವಾದಕ್ಕೆ ನೇಮಿಸಬೇಡಿ’ ಎಂದು ದೆಹಲಿ ಕೋರ್ಟ್‌ಗೆ ವಿನಂತಿಸಿದ್ದಾರೆ.

ರಾಣಾನನ್ನು ಅಮೆರಿಕವು ಗಡೀಪಾರು ಮಾಡಿದ ನಂತರ ದಿಲ್ಲಿಗೆ ಏ.10ರಂದು ಆಗಮಿಸಿದ್ದ. ಬಳಿಕ ಆತನನ್ನು ಪಟಿಯಾಲಾ ಹೌಸ್‌ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ಅಲ್ಲಿ ತನ್ನ ವಿನಂತಿ ಸಲ್ಲಿಸಿರುವ ರಾಣಾ, ತನ್ನ ಮೂಲಕ ಹೆಸರು ಮತ್ತು ಖ್ಯಾತಿಯನ್ನು ಗಳಿಸುವಂತೆ ಕಾಣುವ ಯಾವುದೇ ವಕೀಲರು ತನ್ನ ಪರ ವಾದಿಸಬಾರದು ಎಂದು ಕೋರಿದ್ದಾನೆ. ಆರೋಪಿಯ ಕೋರಿಕೆ ಸ್ವೀಕರಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: 26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

ರಾಣಾ ಪರ ಯಾರು ವಾದಿಸುತ್ತಾರೆ ಎಂಬುದು ಈವರೆಗೂ ತಿಳಿದಿಲ್ಲ. ಒಂದು ವೇಳೆ ಆತ ಉಗ್ರ ಎಂಬ ಕಾರಣಕ್ಕೆ ಯಾರೂ ವಾದಿಸಲು ಮುಂದಾಗದೇ ಇದ್ದರೆ, ನ್ಯಾಯಾಲಯವೇ ನಿಯಮಾನುಸಾರ ಆತನ ಪರ ವಾದಕ್ಕೆ ವಕೀಲರನ್ನು ಒದಗಿಸಲಿದೆ.

ವರ್ಷದೊಳಗೆ ನನ್ನ ವಿಚಾರಣೆ ಮುಗಿಯುತ್ತಾ?: ರಾಣಾ ಪ್ರಶ್ನೆ
ನವದೆಹಲಿ: ಗುರುವಾರ ರಾತ್ರಿ 26/11 ಮುಂಬೈ ದಾಳಿ ಸಂಚುಕೋರ ತಹಾವುರ್ ರಾಣಾನನ್ನು ದಿಲ್ಲಿ ಕೋರ್ಟಿಗೆ ಹಾಜರುಪಡಿಸಿದಾಗ ಆತನಲ್ಲಿ ದುಗುಡ ಮನೆಮಾಡಿತ್ತು. ಆತ ತನ್ನ ವಿಚಾರಣೆ 1 ವರ್ಷದಲ್ಲಿ ಮುಗಿಯುತ್ತದೆಯೇ ಎಂದು ಕೇಳಿದ ಎಂದು ಗೊತ್ತಾಗಿದೆ.ಆದರೆ ಇದಕ್ಕೆ ನಕಾರಾತ್ಮಕವಾಗಿ ಉತ್ತರಿಸಿದ ವಕೀಲರು ‘ಇಲ್ಲ’ ಎಂದು ಹೇಳಿದರು. ಆರೋಪಪಟ್ಟಿ ದಾಖಲಿಸಲು ಒಂದು ವರ್ಷ ತೆಗೆದುಕೊಳ್ಳಬಹುದು ಮತ್ತು ಇಡೀ ವಿಚಾರಣೆ ವೇಗವಾಗಿ ನಡೆದರೂ 5ರಿಂದ 10 ವರ್ಷ ತೆಗೆದುಕೊಳ್ಳಬಹುದು’ ಎಂದು ಆತನಿಗೆ ಹೇಳಿದರು ಎಂದು ಮೂಲಗಳು ಹೇಳಿವೆ.

ರಾಣಾ ವಿರುದ್ಧ ಆರೋಪ ಸಾಬೀತು ಸುಲಭವಲ್ಲ:ಈ ನಡುವೆ, ರಾಣಾ ಕೋರ್ಟ್ ವಿಚಾರಣೆ ಅಷ್ಟು ಸುಲಭವಲ್ಲ. ಉಗ್ರ ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪ್ರಕರಣಗಳಲ್ಲಿ ಆತನ ಕೃತ್ಯ ನೋಡಿದ ಪ್ರತ್ಯಕ್ಷದರ್ಶಿಗಳು ಇದ್ದರು. ಆದರೆ ರಾಣಾ ಪರೋಕ್ಷವಾಗಿ ಅಮೆರಿಕದಲ್ಲೇ ಕೂತು ಕೆಲಸ ನಡೆಸಿರುವ ಕಾರಣ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಧಗಧಗ: 3 ಬಲಿ, ತನಿಖೆಗೆ ಬಿಜೆಪಿ ಪಟ್ಟು

click me!