ಹುರಿಯತ್ ಮುಖಂಡ, ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ!

By Suvarna NewsFirst Published Sep 2, 2021, 9:02 AM IST
Highlights

* ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ

* ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೀಲಾನಿ

* ಮೂವತ್ತು ವರ್ಷಗಳಿಂದ ಕಾಶ್ಮೀರ ಪ್ರತ್ಯೇಕಿಸಲು ಯತ್ನಿಸಿದ್ದ ಹುರುಯತ್ ನಾಯಕ

ಶ್ರೀನಗರ(ಸೆ.02): ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದ್ದ ತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕ ಸೈಯದ್ ಅಲಿ ಶಾ ಗಿಲಾನಿ ನಿಧನರಾಗಿದ್ದಾರೆ. ಮೂವತ್ತು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ  ಸೈಯದ್ ಗಿಲಾನಿ  ಹೋರಾಟ ನಡೆಸಿದ್ದು, ಕಳೆದ ವರ್ಷವಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಿಲಾನಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. 92 ವರ್ಷ ವಯಸ್ಸಿನ ಗಿಲಾನಿಗೆ ಇಬ್ಬರು ಗಂಡು ಮಕ್ಕಳು ಸೇರಿ ಆರು ಮಕ್ಕಳನ್ನು ಅಗಲಿದ್ದಾರೆ. ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಶಾಸಕರಾಗಿದ್ದ ಗಿಲಾನಿ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಹುರಿಯತ್‌ ಮತ್ತೊಂದು ಹೋಳು, ಸಂಘಟನೆಗೆ ಗಿಲಾನಿ ಗುಡ್‌ಬೈ!

ಗಿಲಾನಿ ನಿಧನಕ್ಕೆ ಸಂತಾಪ ಸೂಚಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಪಕ್ಷದ ನಾಯಕಿ ಮೆಹಬೂಬ ಮುಫ್ತಿ 'ಗಿಲಾನಿಯವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅನೇಕ ವಿಚಾರಗಳಲ್ಲಿ ಅವರೊಂದಿಗೆ ಸಹಮತ ಇಲ್ಲದೇ ಹೋದರೂ ಅವರ ಅಚಲ ನಿಲುವು ಹಾಗೂ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಅವರಿಗೆ ಅಲ್ಲಾಹು ಜನ್ನತ್ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪ ಇದೆ' ಎಂದಿದ್ದಾರೆ.

ಎನ್‌ಐಎ ಕಣ್ಣು

ನೂರಾರು ಕೋಟಿ ರು ಒಡೆಯ ಗಿಲಾನಿ ಹಾಗೂ ಮಕ್ಕಳಾದ ನಾಸೀಮ್, ನಯೀಮ್, ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್ಐಎ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಕ್ರಮ ಆಸ್ತಿ ಗಳಿಕೆ, ಪಾಕಿಸ್ತಾನದಿಂದ ಹಣ ಪಡೆದು, ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತಾದ ತನಿಖೆ ಜಾರಿಯಲ್ಲಿದೆ.

ಕಾಶ್ಮೀರ ಜನರ ನಿರ್ಧಾರೆವೇ ಅಂತಿಮ

ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾರಮುಲ್ಲಾದ ಸೋಪೋರ್ ಪಟ್ಟಣದಲ್ಲಿ ಜನಿಸಿದ ಸಯದ್ ಗಿಲಾನಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದವರಲ್ಲಿ ಗಿಲಾನಿ ಪ್ರಮುಖರು. ಕಾಶ್ಮೀರದ ಪ್ರತ್ಯೇಕತಾವಾದಿಗಳ ಪೈಕಿ ಅತಿ ಉಗ್ರ ಹಾಗೂ ಪಾಕಿಸ್ತಾನದ ಪರ ನಿಲುವು ಹೊಂದಿದ್ದ ನಾಯಕರಲ್ಲಿ ಗಿಲಾನಿ ಕೂಡಾ ಒಬ್ಬರು ಎಂಬುವುದು ಉಲ್ಲೇಖನೀಯ..

ಗಿಲಾನಿ ಪಾಕ್ ಪ್ರೇಮಿಯಾದರೂ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಸ್ವಂತ ನಿರ್ಧಾರ ತೆಗೆದುಕೊಳ್ಳುವುದನ್ನು ವಿರೋಧಿಸಿದ್ದರು. ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಕ್ಕೆ ಪಾಕಿಸ್ತಾನ ಬೆಂಬಲ ಬಹಳ ಮುಖ್ಯವಾದರೂ, ಕಾಶ್ಮೀರದ ಜನರೇ ಇದನ್ನು ನಿರ್ಧರಿಸಕು ಎಂಬುವುದನ್ನು ಪ್ರತಿಪಾದಿಸಿದ್ದರು. 

click me!