* ಪಾಲ್ಘಾರ್ ಮೀನುಗಾರರ ಬಲೆಗೆ ಚಿನ್ನದ ಮೀನು
* 157 ಘೋಲ್ ಫಿಶ್‌ಗಳ ಲಾಟ್ 1.33 ರು.ಗೆ ಮಾರಾಟ
* ಅಪಾರ ಔಷಧೀಯ ಗುಣ ಇರುವ ಕಾರಣ ಭಾರೀ ಬೇಡಿಕೆ
ಪಾಲ್ಘಾರ್(ಸೆ.02): ಮಳೆಗಾಲ ಹಾಗೂ ಲಾಕ್‌ಡೌನ್ ಇದ್ದ ಕಾರಣ ತಿಂಗಳುಗಳ ಬಿಡುವಿನ ಬಳಿಕ ಸಮುದ್ರಕ್ಕೆ ಇಳಿದಿದ್ದ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಮೀನುಗಾರರು ಮೀನುಗಾರಿಕೆ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ. ಏಕೆಂದರೆ, ಅವರ ಬಲೆಗೆ ಸಿಕ್ಕಿದ್ದು ದೇಶದಲ್ಲೇ ಭಾರೀ ಬೇಡಿಕೆ ಹಾಗೂ ಅತ್ಯಂತ ದುಬಾರಿ ಮೀನು ಎನಿಸಿಕೊಂಡ ಎನಿಸಿಕೊಂಡ ಘೋಲ್ ಫಿಶ್‌ಗಳು!
‘ಸಮುದ್ರದ ಚಿನ್ನ’ ಎಂದೇ ಕರೆಸಿಕೊಳ್ಳುವ 157 ಘೋಲ್ ಪಿಶ್‌ಗಳ ಒಂದು ಲಾಟ್ ಬರೋಬ್ಬರಿ ಬರೋಬ್ಬರಿ 1.33 ಕೋಟಿ ರು.ಗಳಿಗೆ ಮಾರಾಟವಾಗಿದೆ.
ಅದೃಷ್ಟದ ಬೇಟೆ:
ಪಾಲ್ಘಾರ್‌ನ ಮೀನುಗಾರ ಚಂದ್ರಕಾಂತ್ ತಾರೆ ಎನ್ನುವವರು 8 ಮಂದಿ ಸಂಗಡಿಗರ ಜೊತೆ ದೇವಿ ಬೋಟ್‌ನಲ್ಲಿ ಆ.15ರಂದು ಮೀನುಗಾರಿಕೆಗೆಂದು ಅರಬ್ಬೀ ಸಮುದ್ರಕ್ಕೆ ತೆರಳಿದ್ದರು. ಆ.28ರರಂದು ವಾಧ್ವನ್ ಬಂದರಿನಿಂದ 20ರಿಂದ 25 ನಾಟಿಕಲ್ ದೂರದ ಕಡಲ ಪ್ರದೇಶದಲ್ಲಿ ಹರ್ಬಾ ಮೀನುಗಾರಿಕೆ ನಡೆಸುತ್ತಿದ್ದ ವೇಳೆ 157 ಘೋಲ್ ಪಿಶ್‌ಗಳು ಬಲೆಗೆ ಬಿದ್ದಿವೆ. ಚಂದ್ರಕಾಂತ್ ಮತ್ತು ಅವರ ತಂಡ ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುವಷ್ಟರಲ್ಲಿ ಘೋಲ್ ಫಿಶ್ ಖರೀದಿಗೆ ವ್ಯಾಪಾರಿಗಳ ದಂಡೇ ನೆರೆದಿತ್ತು. ಪಾಲ್ಘಾರ್‌ನ ಮುರ್ಬೆ ಎಂಬಲ್ಲಿ ನಡೆಸಲಾದ ಹರಾಜಿನ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವ್ಯಾಪಾರಿಗಳು ಘೋಲ್ ಫಿಶ್‌ಗಳ ಸಂಪೂರ್ಣ ಲಾಟ್ ಅನ್ನು 1.33 ಕೋಟಿ ರು.ಗಳಿಗೆ ಖರೀದಿಸಿದ್ದಾರೆ.
ದುಬಾರಿ ಬೆಲೆ ಏಕೆ?
ಘೋಲ್ ಪಿಶ್‌ಗಳು ಅತಿ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿದೆ. ಈ ಮೀನಿನ ಪ್ರತಿಯೊಂದು ಭಾಗವೂ ವಿವಿಧ ರೀತಿಯ ಔಷಧ ತಯಾರಿಕೆಗೆ ಬಳಕೆ ಆಗುತ್ತದೆ. ಸೌಂದರ್ಯ ವರ್ಧಕಗಳು, ಶಸ್ತ್ರಚಿಕಿತ್ಸೆಯ ವೇಳೆ ಸ್ಟಿಚ್‌ಗೆ ಬಳಸುವ ದಾರದ ತಯಾರಿಕೆ ಹೀಗೆ ನಾನಾ ಕಾರಣಕ್ಕೆ ಬಳಕೆ ಆಗುತ್ತದೆ. ಹೀಗಾಗಿ ಈ ಮೀನಿಗೆ ಹಾಂಕಾಂಗ್, ಮಲೇಷಿಯಾ, ಥೈಲಾಂಡ್, ಇಂಡೋನೇಷ್ಯಾ, ಜಪಾನ್‌ನಂತಹ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಸಿಂಗಾಪುರದಲ್ಲಿ ವೈನ್‌ಗಳ ತಯಾರಿಕೆಗೂ ಇದನ್ನು ಬಳಸಲಾಗುತ್ತದೆ. ಮಾಲಿನ್ಯದ ಕಾರಣದಿಂದಾಗಿ ಘೋಲ್ ಫಿಶ್‌ಗಳು ಸಿಗುವುದು ಕೂಡ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ.