ಕೇಂದ್ರದ ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್‌ ತಡೆ: ಸಮಿತಿ ರಚನೆ!

By Suvarna NewsFirst Published Jan 12, 2021, 2:39 PM IST
Highlights

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಡೆ| ಮುಂದಿನ ಆದೇಶದವರೆಗೂ ಕಾಯ್ದೆ ಜಾರಿಗೆ ಬ್ರೇಕ್| ಕೃಷಿ ಕಾಯ್ದೆಗಳ ಕುರಿತಂತೆ ಮಾತುಕತೆ ನಡೆಸಲು ಸಮಿತಿ ರಚನೆ

ನವದೆಹಲಿ(ಜ.12): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ. ಜೊತೆಗತೆ ಕೃಷಿ ಕಾಯ್ದೆಗಳ ಕುರಿತಂತೆ ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ಮತ್ತು ಪ್ರತಿಭಟನಾಕಾರ ರೈತರನ್ನು ದೆಹಲಿಯ ಗಡಿಯಿಂದ ತೆರವು ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಂತಹುದ್ದೊಂದು ತೀರ್ಪು ನೀಡಿದೆ. ವಾದ ವಿಪ್ರತಿ ವಾದ ಆಲಿಸಿದ ಸುಪ್ರೀಂ ಕೃಷಿ ಕಾಯ್ದೆಗಳನ್ನು ತನ್ನ ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ತಿಳಿಸಿದೆ. ಅಲ್ಲದೇ ಮಾತುಕತೆಗಾಗಿ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿದೆ.

Supreme Court stays the implementation of three farms laws until further orders pic.twitter.com/v3DdC4FEtQ

— ANI (@ANI)

ಇದೇ ವೇಳೆ, ರೈತರ ಆಕ್ರೋಶವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿಗೂ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಜೊತೆಗೆ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿದೆ. ಆದ್ರೆ, ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇದು ಜೀವನ್ಮರಣ ಸಮಸ್ಯೆ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಪ್ರತಿಭಟನೆಯಿಂದ ಆಗಬಹುದಾಗ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿ ಕುರಿತಾಗಿ ಕಳವಳ ವ್ಯಕ್ತಪಡಿಸಿದೆ. ಈ ಸಮಸ್ಯೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹಾದಿಯ ಹುಡುಕಾಟ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌, ಇದರ ಭಾಗವಾಗಿ ತನ್ನ ಅಧಿಕಾರವನ್ನು ಚಲಾಯಿಸಿದ್ದು, ಶಾಸಕಾಂಗದ ನಿರ್ಣಯವನ್ನು ಅಮಾನತ್ತಿನಲ್ಲಿ ಇಟ್ಟಿರೋದಾಗಿ ಸ್ಪಷ್ಟಪಡಿಸಿದೆ

ಮುಖ್ಯನ್ಯಾಯಮೂರ್ತಿ ಹೇಳಿದ್ದೇನು?

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬೋಬ್ಡೆ, 'ಕಾನೂನು ಸಿಂಧುತ್ವದ ಬಗ್ಗೆ ಮತ್ತು ಪ್ರತಿಭಟನೆಯಿಂದಾಗಿ ಜನಜೀವನಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಒಂದೋ ಕಾಯ್ದೆಯನ್ನು ಅಮಾನತುಗೊಳಿಸಬಹುದು. ಅಥವಾ ಸಮಿತಿಯನ್ನು ರಚಿಸಬಹುದು. ಈ ಅಧಿಕಾರ ನಮಗಿದೆ,' ಎಂದು ಹೇಳಿದ್ದಾರೆ

click me!