
ನವದೆಹಲಿ: ಕಂಡಿದ್ದೆಲ್ಲವನ್ನೂ ತನಿಖೆ ಮಾಡಲು ಜಾರಿ ನಿರ್ದೇಶನಾಲಯವು ‘ಸೂಪರ್ ಕಾಪ್’ ಅಲ್ಲ ಎಂದು ಇ.ಡಿ. ವಿರುದ್ಧ ಮದ್ರಾಸ್ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಇಬ್ಬರು ಹಿರಿಯ ವಕೀಲರಿಗೆ ಇ.ಡಿ. ನೋಟಿಸ್ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಜಾರಿ ನಿರ್ದೇಶನಾಲಯ ತನ್ನ ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದೆ. ಈ ಬಗ್ಗೆ ನಾವು ಕೆಲವೊಂದು ನಿಯಮಾವಳಿ ರೂಪಿಸಲಿದ್ದೇವೆ ಎಂದು ಹೇಳಿದೆ.
ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರು ವ್ಯಕ್ತಿಯೊಬ್ಬರಿಗೆ ಕಾನೂನು ಸಲಹೆ ನೀಡಿದ್ದನ್ನು ಪ್ರಶ್ನಿಸಿ ಇ.ಡಿ ಸಮನ್ಸ್ ಜಾರಿಗೊಳಿಸಿತ್ತು.
ಈ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಬಿ.ಆರ್.ಗವಾಯಿ ಹಾಗೂ ನ್ಯಾ.ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ, ‘ವಕೀಲರು ಕಾನೂನು ಸಲಹೆ ನೀಡಿದ್ದಕ್ಕಾಗಿ ಇ.ಡಿ ನೋಟಿಸ್ ನೀಡಲು ಸಾಧ್ಯವಿಲ್ಲ. ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂವಹನವು, ಒಂದು ವೇಳೆ ಅದು ತಪ್ಪಾಗಿದ್ದರು ಸಹ ವಿಶೇಷ ಸಂವಹನವೇ ಆಗಿದೆ. ಅವರ ವಿರುದ್ಧ ಇ.ಡಿ ನೋಟಿಸ್ ನೀಡಲಾಗದು. ಇ.ಡಿ ಎಲ್ಲ ಮಿತಿಗಳನ್ನು ಮೀರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ವಾಗ್ದಂಡನೆ ಪ್ರಶ್ನಿಸಿ ಸುಪ್ರೀಂಗೆ ನ್ಯಾ। ವರ್ಮಾ ಮೊರೆ
ಮನೆಯಲ್ಲಿ ಕಂತೆ ಕಂತೆ ನೋಟು ಸಿಕ್ಕ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿ ವಾಗ್ದಂಡನೆಗೆ ಶಿಫಾರಸು ಮಾಡಿರುವ ಸುಪ್ರೀಂ ಕೋರ್ಟ್‌ನ ಆಂತರಿಕ ವಿಚಾರಣಾ ಸಮಿತಿಯ ವರದಿಯನ್ನು ಅಮಾನ್ಯಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ। ಯಶವಂತ್ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನೋಟು ಸಿಕ್ಕ ಪ್ರಕರಣದಲ್ಲಿ ಆಂತರಿಕ ಸಮಿತಿ ನೀಡಿದ ವರದಿ ಆಧಾರದಲ್ಲಿ ತಮ್ಮ ವಿರುದ್ಧ ವಾಗ್ದಂಡನೆ ವಿಧಿಸುವ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ ಹಾಗೂ ರಾಷ್ಟ್ರಪತಿಗಳನ್ನು ಕೋರಿದ್ದ ಹಿಂದಿನ ಸುಪ್ರೀಂ ಕೋರ್ಟ್ ನ್ಯಾ। ಸಂಜೀವ್ ಖನ್ನಾ ಅವರ ಮೇ 8ರಂ ಶಿಫಾರಸ್ಸನ್ನು ವಜಾಗೊಳಿಸುವಂತೆಯೂ ವರ್ಮಾ ಮನವಿ ಮಾಡಿದ್ದಾರೆ.
ಜು.21ರಂದು ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನ್ಯಾ.ವರ್ಮಾ ಅವರ ವಿರುದ್ಧ ವಾಗ್ದಂಡನೆ ಮೂಲಕ ವಜಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಹಜ ನ್ಯಾಯಪಾಲನೆಯಾಗಿಲ್ಲ:
ಆಂತರಿಕ ಸಮಿತಿಯು ಪೂರ್ವಕಲ್ಪಿತ ವಿಚಾರಗಳನ್ನು ಆಧರಿಸಿ ನನ್ನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ನೈಸರ್ಗಿಕ ನ್ಯಾಯ ಕಡೆಗಣಿಸಿ ತ್ವರಿತವಾಗಿ ಆಂತರಿಕ ತನಿಖೆ ನಡೆಸಲಾಗಿದೆ ಎಂದು ಜ.ವರ್ಮಾ ಆರೋಪಿಸಿದ್ದಾರೆ. ಈ ಅರ್ಜಿಯ ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಕಳೆದ ಮಾರ್ಚ್‌ನಲ್ಲಿ ನ್ಯಾ.ವರ್ಮಾ ಅವರ ದೆಹಲಿಯ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕದಳದವರಿಗೆ ಆ ಸಂದರ್ಭದಲ್ಲಿ ಸುಟ್ಟ ಸ್ಥಿತಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು. ಈ ಕುರಿತ ವಿಡಿಯೋ ವೈರಲ್ ಆಗಿ ಅದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ