ಶಾಸಕ, ಸಂಸದರ ಮಾತಿಗೆ ಹೆಚ್ಚುವರಿ ನಿರ್ಬಂಧ ಅಸಾಧ್ಯ: ಸುಪ್ರೀಂಕೋರ್ಟ್‌

Published : Jan 04, 2023, 06:22 AM IST
ಶಾಸಕ, ಸಂಸದರ ಮಾತಿಗೆ ಹೆಚ್ಚುವರಿ ನಿರ್ಬಂಧ ಅಸಾಧ್ಯ: ಸುಪ್ರೀಂಕೋರ್ಟ್‌

ಸಾರಾಂಶ

ಸಚಿವ, ಶಾಸಕ ಹಾಗೂ ಸಂಸದರು ಕೂಡಾ ದೇಶದ ಎಲ್ಲ ನಾಗರಿಕರಿಗೆ ನೀಡಲಾಗಿರುವಷ್ಟೇ ವಾಕ್‌ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್‌, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ಹೇರಲಾಗದು ಎಂದು ಹೇಳಿದೆ. 

ನವದೆಹಲಿ (ಜ.04): ಸಚಿವ, ಶಾಸಕ ಹಾಗೂ ಸಂಸದರು ಕೂಡಾ ದೇಶದ ಎಲ್ಲ ನಾಗರಿಕರಿಗೆ ನೀಡಲಾಗಿರುವಷ್ಟೇ ವಾಕ್‌ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್‌, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ಹೇರಲಾಗದು ಎಂದು ಹೇಳಿದೆ. ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಂವಿಧಾನದ ವಿವಿಧ ವಿಧಿಯಡಿ ಈಗಾಗಲೇ ಸಾಕಷ್ಟು ಕ್ರಮಗಳಿವೆ ಎಂದು ನ್ಯಾ.ಎಸ್‌.ನಜೀರ್‌ ಅವರ್ನೊಳಗೊಂಡ 5 ಸದಸ್ಯರ ಸಾಂವಿಧಾನಿಕ ಪೀಠ 4-1ರ ಬಹುಮತದ ತೀರ್ಪು ನೀಡಿದೆ.

ಆದರೆ ಸಚಿವ, ಶಾಸಕ ಹಾಗೂ ಸಂಸದರು ನೀಡುವ ಹೇಳಿಕೆಯನ್ನು ಸರ್ಕಾರದ ಹೇಳಿಕೆ ಎಂದು ಎಂದು ಪರಿಗಣಿಸಬೇಕು ಎಂಬ ವಿಷಯದಲ್ಲಿ ಪಂಚಸದಸ್ಯರ ಪೀಠದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ನಾಲ್ವರು ನ್ಯಾಯಾಧೀಶರು, ಇಂಥ ಹೇಳಿಕೆಯನ್ನು ಸರ್ಕಾರದ್ದು ಎಂದು ಪರಿಗಣಿಸಲಾಗದು ಎಂದು ಹೇಳಿದರೆ, ನ್ಯಾ.ನಾಗರತ್ನ ಅವರು ಇಂಥ ಹೇಳಿಕೆಗಳನ್ನೂ ಸರ್ಕಾರದ ಹೇಳಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಸುಪ್ರೀಂ ನೋಟ್‌ ಬ್ಯಾನ್‌ ತೀರ್ಪು: ಬಿಜೆಪಿ, ಕಾಂಗ್ರೆಸ್ಸಿಗರ ಜಟಾಪಟಿ

ಅರ್ಜಿದಾರರ ಕೋರಿಕೆ ಏನಿತ್ತು?: ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮನಬಂದಂತೆ ಮಾತನಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಮಾತ್ರ ಮಾತನಾಡುವಂತೆ ಸೂಚಿಸಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ನ್ಯಾಯಮೂರ್ತಿಗಳಾದ ಎಸ್‌.ಎ. ನಜೀರ್‌, ಬಿ.ಆರ್‌.ಗವಾಯಿ, ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯಂ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಮಂಗಳವಾರ ತೀರ್ಪು ಪ್ರಕಟಿಸಿತು.

ಕೋರ್ಟ್‌ ಹೇಳಿದ್ದೇನು?: ಸಂವಿಧಾನದ ಪರಿಚ್ಛೇದ 19(2)ರಡಿ ಇರುವಂತಹದ್ದನ್ನು ಹೊರತುಪಡಿಸಿ ಸಾರ್ವಜನಿಕ ಸೇವಕರ ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗದು. ಸಚಿವರೊಬ್ಬರು ನೀಡಿದ ಹೇಳಿಕೆ ಸರ್ಕಾರದ ಯಾವುದೇ ವ್ಯವಹಾರಗಳ ಜತೆ ನಂಟು ಹೊಂದಿದ್ದರೂ ಅಥವಾ ಸರ್ಕಾರವನ್ನು ರಕ್ಷಿಸುವುದೇ ಆಗಿದ್ದರೂ ಸಾಮೂಹಿಕ ಹೊಣೆಗಾರಿಕೆ ತತ್ವದ ಸಂದರ್ಭದಲ್ಲೂ ಅದನ್ನು ಸರ್ಕಾರದ ಹೇಳಿಕೆ ಎಂದು ಪರಿಗಣಿಸಲು ಆಗದು ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿದರು.

ಆದರೆ ನ್ಯಾ.ಬಿ.ವಿ.ನಾಗರತ್ನ ಅವರು ಭಿನ್ನ ತೀರ್ಪು ನೀಡಿ, ವಾಕ್‌ ಸ್ವಾತಂತ್ರ್ಯದ ಮೇಲೆ ಹೆಚ್ಚು ನಿರ್ಬಧಗಳನ್ನು ಹೇರಲಾಗದು ಎಂಬ ಬಗ್ಗೆ ಸಹಮತವಿದೆ. ಆದರೆ, ಸಚಿವರು ನೀಡುವ ಹೇಳಿಕೆಯನ್ನು ಸರ್ಕಾರದ್ದೇ ಎಂದು ಹೊರಿಸಬೇಕು. ದ್ವೇಷಪೂರಿತ ಭಾಷಣಗಳು ಮೂಲಭೂತ ಮೌಲ್ಯಗಳ ಮೇಲೆಯೇ ದಾಳಿ ಮಾಡುತ್ತವೆ. ಸಮಾಜದಲ್ಲಿ ಅಸಮಾನತೆ ಸೃಷ್ಟಿಸುತ್ತವೆ. ಭಾರತದಂತಹ ದೇಶದಲ್ಲಿ ವೈವಿಧ್ಯತೆಯ ಹಿನ್ನೆಲೆ ಹೊಂದಿರುವ ಜನರನ್ನು ಗುರಿಯಾಗಿಸುತ್ತವೆ ಎಂದು ಹೇಳಿದರು.

ಏನಿದು ಪ್ರಕರಣ?: 2016ರ ಜುಲೈನಲ್ಲಿ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಉತ್ತರಪ್ರದೇಶದ ಬುಲಂದ್‌ಶಹರ್‌ ಬಳಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ಸಂದರ್ಭದಲ್ಲಿ ಉತ್ತರಪ್ರದೇಶದ ಸಚಿವರಾಗಿದ್ದ ಆಜಂ ಖಾನ್‌ ಅವರು ಸಾಮೂಹಿಕ ಅತ್ಯಾಚಾರ ರಾಜಕೀಯ ಸಂಚು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು, ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಾನೂನು ಸಮರ ಆರಂಭಿಸಿದ್ದರು. ರಾಜಕಾರಣಿಗಳು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದನ್ನೂ ತಡೆಯಬೇಕು ಎಂದು ಮನವಿ ಮಾಡಿದ್ದರು.

ಜನಪ್ರತಿನಿಧಿಗಳು ಬೇಕಾಬಿಟ್ಟಿ ಮಾತನಾಡುವುದಕ್ಕೆ ನಿರ್ಬಂಧ : ಇಂದು ಸುಪ್ರೀಂ ತೀರ್ಪು

4 ಜಡ್ಜ್‌ ಹೇಳಿದ್ದೇನು?
- ಸಚಿವರು, ಸಂಸದರು, ಶಾಸಕರು ದೇಶದ ಎಲ್ಲ ನಾಗರಿಕರಿಗೆ ಸಮನಾಗಿ ಸಂವಿಧಾನದ 19(1)(ಎ) ಅಡಿ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯದ ಹಕ್ಕು ಹೊಂದಿದ್ದಾರೆ

- ಸಂವಿಧಾನದ ಪರಿಚ್ಛೇದ 19(2)ರಡಿ ಇರುವಂತಹದ್ದನ್ನು ಹೊರತುಪಡಿಸಿ ಅವರ ವಾಕ್‌, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧ ವಿಧಿಸಲಾಗದು

- ಸದನದ ಹೊರಗೆ ಜನಪ್ರತಿನಿಧಿಗಳು ನೀಡಿದ ಹೇಳಿಕೆಯನ್ನು ಸರ್ಕಾರದ ಹೇಳಿಕೆಯೆಂದು ಪರಿಗಣಿಸಲಾಗದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!