ಕೇಸು ರದ್ದು ಕೋರಿದ್ದ ನಟಿ ಜಾಕ್ವೆಲಿನ್‌ ಅರ್ಜಿ ವಜಾ

Kannadaprabha News   | Kannada Prabha
Published : Sep 23, 2025, 05:59 AM IST
Jacqueline fernandez

ಸಾರಾಂಶ

ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಗೊಳಿಸದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಹಿನ್ನೆಡೆಯಾಗಿದೆ. ಸುಪ್ರೀಂ ಕೋರ್ಟ್‌ ಕೂಡ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ನವದೆಹಲಿ: ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಗೊಳಿಸದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಹಿನ್ನೆಡೆಯಾಗಿದೆ. ಸುಪ್ರೀಂ ಕೋರ್ಟ್‌ ಕೂಡ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಬಹುಕೋಟಿ ವಂಚಕನಾದ ಸುಕೇಶ್‌ ಚಂದ್ರಶೇಖರ್‌ ಜಾಕ್ವೆಲಿನ್‌ ಸ್ನೇಹ ಸಂಪಾದಿಸಿ ಬೆಲೆಬಾಳುವ ಉಡುಗೊರೆ ನೀಡಿದ್ದ. ಈ ಸಂಬಂಧ ಜಾಕ್ವೆಲಿನ್‌ ವಿರುದ್ಧ 200 ಕೋಟಿ ರು. ಹಣ ವರ್ಗಾವಣೆ ಪ್ರಕರಣವನ್ನು ಇ.ಡಿ. ದಾಖಲಿಸಿತ್ತು.

ಇದರ ರದ್ದು ಕೋರಿ ಜಾಕ್ವೆಲಿನ್‌ ಮೊದಲು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹಾಕಿದ್ದರು. ಆದರೆ ಅರ್ಜಿ ವಿಚಾರಣೆಗೆ ನಿರಾಕರಿಸದ ಸುಪ್ರೀಂ ಕೋರ್ಟು, ವಾಪಸು ಪಡೆಯಲು ತಾಕೀತು ಮಾಡಿತು.

ಬೆಟ್ಟಿಂಗ್‌ ಆ್ಯಪ್‌ ಕೇಸ್‌: ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಇ.ಡಿ.ವಿಚಾರಣೆ

ನವದೆಹಲಿ: 1xBet ಬೆಟ್ಟಿಂಗ್ ಆ್ಯಪ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ್ಯಪ್‌ ಪರ ಪ್ರಚಾರ ನಡೆಸಿದ್ದ ಕನ್ನಡಿಗ, ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಸೋಮವಾರ ಇ.ಡಿ. ವಿಚಾರಣೆಗೆ ಹಾಜರಾದರು. ಈ ವೇಳೆ ಉತ್ತಪ್ಪರಿಗೆ ಬೆಟ್ಟಿಂಗ್‌ ಆ್ಯಪ್‌ ನಂಟು ಸೇರಿ ಹಲವು ಪ್ರಶ್ನೆಗಳನ್ನು ಕೇಳಲಾಯಿತು ಎಂದು ಮೂಲಗಳು ಹೇಳಿವೆ.

ಇವರ ಜತೆಗೆ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ನಟ ಸೋನು ಸೂದ್‌ಗೂ ನೋಟಿಸ್‌ ನೀಡಿದ್ದು, ಅವರು ಕ್ರಮವಾಗಿ ಮಂಗಳವಾರ ಮತ್ತು ಬುಧವಾರ ವಿಚಾರಣೆ ಎದುರಿಸುವ ಸಾಧ್ಯತೆಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್‌, ನಟಿ ಮಿಮಿ ಚಕ್ರವರ್ತಿ, ಊರ್ವಶಿ ರೌಟೇಲಾ ಸೇರಿ ಹಲವರ ವಿಚಾರಣೆ ಆಗಿದೆ.

ವೆಬ್‌ ಸಿರೀಸ್‌ನಲ್ಲಿ ರಣಬೀರ್‌ ಇ ಸಿಗರೇಟ್‌ ಸೇವನೆ: ಆಯೋಗ ಕಿಡಿ

ಮುಂಬೈ: ನೆಟ್‌ಫ್ಲಿಕ್ಸ್‌ ವೆಬ್‌ ಸಿರೀಸ್‌ ‘ಬ್ಯಾ***ಡ್ಸ್ ಆಫ್‌ ಬಾಲಿವುಡ್‌’ನಲ್ಲಿ ನಟ ರಣಬೀರ್‌ ಕಪೂರ್‌ ಇ-ಸಿಗರೇಟ್‌ ಸೇವಿಸಿದ್ದಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಿಡಿಕಾರಿದೆ. ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಮುಂಬೈ ಪೊಲೀಸರನ್ನು ಪ್ರಶ್ನಿಸಿದೆ.‘ರಣಬೀರ್‌ ಕಪೂರ್‌ ವೆಬ್‌ ಸಿರೀಸ್‌ನಲ್ಲಿ ನಿಷೇಧಿತ ಇ- ಸಿಗರೇಟ್‌ ಸೇವನೆ ಮಾಡಿದ್ದಾರೆ. ದೇಶ್ಯದಲ್ಲಿ ಅದರಲ್ಲಿ ಯಾವುದೇ ಆರೋಗ್ಯದ ಎಚ್ಚರಿಕೆ ನೀಡದೆ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ’ ಎಂದು ದೂರು ದಾಖಲಾಗಿತ್ತು. ಇದರ ತನಿಖೆಯ ಭಾಗವಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಒದಗಿಸುವಂತೆ ಮಾನವ ಹಕ್ಕುಗಳ ಆಯೋಗ ನಿರ್ದೇಶಿಸಿದೆ.

7 ಎಪಿಸೋಡ್‌ನ ಈ ಹಿಂದಿ ವೆಬ್‌ ಸಿರೀಸ್‌ನಲ್ಲಿ ನಟ ರಣಬೀರ್‌ ಕಪೂರ್‌ ಸೇರಿದಂತೆ ಹಲವು ತಾರೆಯರು ನಟಿಸಿದ್ದು, ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ನಿರ್ದೇಶಿಸಿದ್ದಾರೆ.

ಛತ್ತೀಸ್‌ಗಢ: ₹80 ಲಕ್ಷ ಇನಾಂ ಹೊಂದಿದ್ದ 2 ಟಾಪ್‌ ನಕ್ಸಲರ ಹತ್ಯೆ

ನಾರಾಯಣಪುರ (ಛತ್ತೀಸ್‌ಗಢ): ಭದ್ರತಾ ಪಡೆ ಇಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ತಲಾ 40 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ನಕ್ಸಲ್‌ ನಾಯಕರನ್ನು ಹತ್ಯೆ ಮಾಡಲಾಗಿದೆ.ರಾಜು ದಾದಾ ಅಲಿಯಾಸ್ ಕಟ್ಟಾ ರಾಮಚಂದ್ರ ರೆಡ್ಡಿ (63) ಮತ್ತು ಕೋಸಾ ದಾದಾ ಅಲಿಯಾಸ್ ಕದರಿ ಸತ್ಯನಾರಾಯಣ ರೆಡ್ಡಿ (67) ಹತ ನಕ್ಸಲ್‌ ನಾಯಕರು. ಇವರು ಕೇಂದ್ರೀಯ ಮಾವೋವಾದಿ ಸಮಿತಿ ಸದಸ್ಯರಾಗಿದ್ದರು. ಇವರ ಹತ್ಯೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಭದ್ರತಾ ಪಡೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಇಲ್ಲಿಯ ಅಭುಜಮಾದ್‌ ಕಾಡಿನಲ್ಲಿ ಭದ್ರತಾ ಪಡೆ ಸೋಮವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾದರು. ಅವರಿಂದ ಒಂದು ಎಕೆ-47 ರೈಫಲ್, ಇತರ ಶಸ್ತ್ರಾಸ್ತ್ರ, ಅಪಾರ ಪ್ರಮಾಣದ ಸ್ಫೋಟಕ ವಸ್ತು, ಮಾವೋವಾದಿ ಸಾಹಿತ್ಯ, ಪ್ರಚಾರ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ.ಈ ವರ್ಷ ಛತ್ತೀಸ್‌ಗಢದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 249 ನಕ್ಸಲರು ಹತರಾಗಿದ್ದಾರೆ.

ಅಮೆರಿಕ ವಿದೇಶಾಂಗ ಸಚಿವ ರುಬಿಯೊ ಜತೆ ಜೈಶಂಕರ್‌ ಚರ್ಚೆ

ನ್ಯೂಯಾರ್ಕ್‌: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರನ್ನು ಸೋಮವಾರ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಚರ್ಚೆ ನಡೆಸಿದರು.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 80ನೇ ಉನ್ನತ ಮಟ್ಟದ ಅಧಿವೇಶನದಲ್ಲಿ ಉಭಯ ನಾಯಕರು ಭೇಟಿಯಾದರು. ಇದು ರಷ್ಯಾ ತೈಲ ಆಮದು ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ ಬಳಿಕ ನಡೆದ ಮೊದಲ ಭೇಟಿ. ಯುಎನ್‌ಜಿಎ ಅಧಿವೇಶನದಲ್ಲಿ ಜೈಶಂಕರ್‌ ಅವರು ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆ.27ರಂದು ಯುಎನ್‌ಜಿಎ ವೇದಿಕೆಯಲ್ಲಿ ಭಾರತ ರಾಷ್ಟ್ರೀಯ ಹೇಳಿಕೆಯನ್ನು ನೀಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ