ಇಂದು CRPF ಭದ್ರತೆಯಲ್ಲಿ ತಿರುಪ್ಪರನ್‌ಕುಂದ್ರ ದೀಪೋತ್ಸವ, ಕೋರ್ಟ್‌ಗೆ ಬರಲು ತ.ನಾಡು ಸಿಎಸ್‌ಗೆ ಸುಪ್ರೀಂ ಬುಲಾವ್

Kannadaprabha News   | Kannada Prabha
Published : Nov 28, 2026, 08:19 AM ISTUpdated : Nov 28, 2026, 08:27 AM IST
Tirupparankundram deepam row

ಸಾರಾಂಶ

ಮದುರೈ ಜಿಲ್ಲೆಯ ತಿರುಪ್ಪರನ್‌ಕುಂದ್ರಂ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚುವ ಆದೇಶ ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ದೇಗುಲದ ಆಡಳಿತವನ್ನು ನಿವೃತ್ತ ನ್ಯಾಯಾಧೀಶರಿಗೆ ಮತ್ತು ಭದ್ರತೆಯನ್ನು ಸಿಆರ್‌ಪಿಎಫ್‌ಗೆ ವಹಿಸಿ ಮಹತ್ವದ ಆದೇಶ .

ನವದೆಹಲಿ (ನ.28): ಮದುರೈ ಜಿಲ್ಲೆಯ ತಿರುಪ್ಪರನ್‌ಕುಂದ್ರಂನ ದೇಗುಲದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚುವಂತೆ ತಾನು ನೀಡಿದ್ದ ಆದೇಶ ಉಲ್ಲಂಘಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಸರ್ಕಾರವನ್ನು ಸುಪ್ರೀಂಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳ‍ಗಾಗಿ ಕೋರ್ಟ್‌ ಆದೇಶ ಪಾಲಿಸಲು ಹಿಂದೇಟು ಹಾಕಿರುವಂತಿದೆ. ತಮಿಳುನಾಡಿನಲ್ಲಿ ಆಡಳಿತಾತ್ಮಕ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿರುವ ನ್ಯಾಯಾಲಯ ಶನಿವಾರ ಮತ್ತೆ ವಿವಾದಿತ ದೀಪಸ್ತಂಭದಲ್ಲೇ ದೀಪ ಬೆಳಗುವಂತೆ ಸರ್ಕಾರಕ್ಕೆ ಖಡಕ್‌ ನಿರ್ದೇಶನ ನೀಡಿದೆ.

ಅಲ್ಲದೆ ತನ್ನ ಆದೇಶವನ್ನು ಉಲ್ಲಂಘಿಸಿದ ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮಂಡಳಿಯನ್ನು ಅಮಾನತು ಮಾಡಿ, ದೇಗುಲದ ಉಸ್ತುವಾರಿಯನ್ನು ಇಬ್ಬರು ನಿವೃತ್ತ ನ್ಯಾಯಾಧೀಶರಿಗೆ ವಹಿಸಿದೆ. ಜೊತೆಗೆ ದೇಗುಲ ಹಾಗೂ ಇಡೀ ಬೆಟ್ಟದ ಭದ್ರತೆಯನ್ನು ಹೊಣೆಯನ್ನು ಸಿಆರ್‌ಪಿಎಫ್‌ಗೆ ವಹಿಸಿ ಅಪರೂಪದ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್‌ನ ಈ ಆದೇಶ ವಿಜಯ್‌ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟು ಮಾಡಿದ್ದರೆ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಆದೇಶವನ್ನು ಸ್ವಾಗತಿಸಿವೆ.

ಅರ್ಜಿ ವಿಚಾರಣೆ:

ದೀಪ ಬೆಳಗುವ ವಿಷಯದಲ್ಲಿ ಸುಪ್ರೀಂ ಆದೇಶ ಉಲ್ಲಂಘನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿ ಮತ್ತು ಮದುರೈ ಜಿಲ್ಲಾಧಿಕಾರಿ ಅವರು ವಿವಾದಿತ ದೀಪಸ್ತಂಭದ ಬದಲು ಉಚ್ಚಿಪಿಳ್ಳೈಯಾರ್‌ ಮಂಟಪದಲ್ಲಿ ದೀಪ ಬೆಳಗಿದ ವಿಚಾರಕ್ಕೆ ಸಂಬಂಧಿಸಿ ವಸ್ತುಸ್ಥಿತಿ ವರದಿ ಸಲ್ಲಿಸಿದ್ದರು. ಇವುಗಳ ವಿಚಾರಣೆಯನ್ನು ನ್ಯಾ. ಅರವಿಂದ್‌ ಕುಮಾರ್‌ ಮತ್ತು ನ್ಯಾ.ವಿಪುಲ್‌ ಎಂ.ಪಾಂಚೋಲಿ ಅವರಿದ್ದ ಪೀಠ ಶುಕ್ರವಾರ ನಡೆಸಿತು.

ನೋಟಿಸ್‌:

ವಿಚಾರಣೆ ವೇಳೆ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ ಪೀಠ, ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವ ಆರೋಪದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಮದುರೈ ಜಿಲ್ಲಾಧಿಕಾರಿ ಮತ್ತು ಇತರರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ವೇಳೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಹಾಗೂ ತನ್ನ ಆದೇಶ ಪಾಲನೆ ವಿಚಾರವಾಗಿ ಅಧಿಕಾರಿಗಳ ಜತೆಗೆ ನಡೆಸಿರುವ ಸಂವಹನದ ಪೂರ್ಣ ವಿವರ ಸಲ್ಲಿಸಬೇಕು ಎಂದು ಆದೇಶಿಸಿದೆ.

ಸಿರ್‌ಪಿಎಫ್‌ಗೆ ಭದ್ರತೆ ಹೊಣೆ:

ಇದೇ ವೇಳೆ ದೇವಸ್ಥಾನ ಮತ್ತು ತಿರುಪ್ಪರನ್‌ಕುಂದ್ರಂ ಬೆಟ್ಟದ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ (ಸಿರ್‌ಪಿಎಫ್‌) ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದೆ. ಜೊತೆಗೆ ಶನಿವಾರದ ದೀಪೋತ್ಸವದ ವೇಳೆ ಎಲ್ಲಾ ಭಕ್ತರಿಗೂ ದೀಪ ಹಚ್ಚಲು ಅವಕಾಶ ನೀಡಬೇಕು. ಆದರೆ ಬೆಟ್ಟದ ಮೇಲಿನ ದರ್ಗಾಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲಿಗೆ ಬರುವವರಿಗೂ ರಕ್ಷಣೆ ಕೊಡಬೇಕು ಎಂದು ಸಿಆರ್‌ಪಿಎಫ್‌ಗೆ ಸೂಚಿಸಿದೆ.

ರಾಜಕೀಯ ಪ್ರಭಾವ:

‘ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳ‍ಗಾಗಿ ಕೋರ್ಟ್‌ ಆದೇಶ ಪಾಲಿಸಲು ಹಿಂದೇಟು ಹಾಕಿರುವಂತಿದೆ. ತಮಿಳುನಾಡಿನಲ್ಲಿ ಆಡಳಿತಾತ್ಮಕ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಿದೆ. ನಾವು ನೀಡಿದ ಆದೇಶದ ಪಾಲನೆ ಆಗದಿದ್ದಾಗ ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶವು ಸಂಧಾನಕ್ಕೆ ನೀಡುವ ಆಹ್ವಾನ ಅಲ್ಲ, ಬದಲಾಗಿ ಆ ಆದೇಶಕ್ಕೆ ರಾಜ್ಯ, ಅಧಿಕಾರಿಗಳು ಮತ್ತು ಪ್ರತಿ ಧಾರ್ಮಿಕ ಸಂಸ್ಥೆಗಳು ಬದ್ಧರಾಗಿರಬೇಕು. ಆದೇಶ ಉದ್ದೇಶಪೂರ್ವಕವಾಗಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪೀಠ ಖಡಕ್‌ ಎಚ್ಚರಿಕೆ ನೀಡಿದೆ.

ಏನಿದು ವಿವಾದ?:

  • ಮದುರೈನಿಂದ 7 ಕಿ.ಮೀ. ದೂರದಲ್ಲಿ ತಿರುಪ್ಪರನ್‌ಕುಂದ್ರಂ ಬೆಟ್ಟವಿದೆ. ಅಲ್ಲಿ ಕಾರ್ತಿಕ ದೀಪ ಬೆಳಗಲಾಗುತ್ತೆ.
  • ಇದಕ್ಕಾಗಿ ದೀಪಸ್ತಂಭವೂ ಇದೆ. ಸ್ತಂಭದ ಬಳಿಯೇ ದರ್ಗಾ ಇರುವ ಕಾರಣ ದೀಪ ಬೆಳಗಲು ನಕಾರ, ವಿವಾದ.
  • 2025ರಲ್ಲಿ ಭಕ್ತರೊಬ್ಬರಿಂದ ಕಾನೂನು ಸಮರ. 1 ಬಾರಿ ದೀಪ ಬೆಳಗಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್‌.
  • ದೀಪಸ್ತಂಭದ ಬದಲು ಬೇರೆ ಮಂಟಪವೊಂದರಲ್ಲಿ ದೀಪ ಬೆಳಗಲು ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ದೇಗುಲ.
  • ಈ ಬಗ್ಗೆ ತೀವ್ರ ಆಕ್ರೋಶ. ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿದ ಕಾರಣ ನ್ಯಾಯಾಂಗ ನಿಂದನೆ ವಿಚಾರಣೆ.
  • ತಮಿಳುನಾಡು ಕ್ರಮಕ್ಕೆ ಸುಪ್ರೀಂಕೋರ್ಟ್‌ ತೀವ್ರ ತರಾಟೆ. ಶನಿವಾರ ದೀಪ ಬೆಳಗಲು ಭಕ್ತರಿಗೆ ಅವಕಾಶ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೋಕಸಭೆ, ವಿಧಾನಸಭೆ ಸೀಟು 50% ಹೆಚ್ಚಿಸಿ ಮಹಿಳಾ ಮೀಸಲು: ಕರ್ನಾಟಕದಲ್ಲಿ ವಿಧಾನಸಭೆ 336, ಲೋಕಸಭೆ ಸ್ಥಾನ 42ಕ್ಕೆ ಏರಿಕೆ!
ಮಂಗನ ಕೈಯಲ್ಲಿ ಸಿಕ್ಕ ಹೂಮಾಲೆ, ಸ್ಟ್ಯಾಂಡ್-ಅಪ್ ಕಾಮಿಡಿಯನ್: ಕಾರ್ತಿಕ ದೀಪಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಸಿಎಂ ವಿಜಯ್‌ ಮೇಲೆ ಕಿಡಿಕಾರಿದ MK Stalin