ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಿಲ್ಲ..! ಸುಪ್ರೀಂ ಸಾಂತ್ವನ

By Kannadaprabha NewsFirst Published May 29, 2020, 10:15 AM IST
Highlights

ಕೊರೋನಾ ವೈರಸ್‌ ಕಾರಣ ವಿಧಿಸಲಾಗಿದ್ದ ಲಾಕ್‌ಡೌನ್‌ ಕಾರಣ ಸಂಕಷ್ಟದಲ್ಲಿದ್ದ ವಲಸಿಗ ಕಾರ್ಮಿಕರು ತವರಿಗೆ ಮರಳುವಾಗ ಅವರಿಗೆ ಪ್ರಯಾಣ ಶುಲ್ಕ ವಿಧಿಸಿಕೂಡದು. ಅದು ಬಸ್‌ ಪ್ರಯಾಣವೇ ಆಗಿರಲಿ ಅಥವಾ ರೈಲು ಪ್ರಯಾಣವೇ ಆಗಿರಲಿ ಸರ್ಕಾರಗಳೇ ಪ್ರಯಾಣ ವೆಚ್ಚ ಭರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಮಹತ್ವದ ಆದೇಶ ನೀಡಿದೆ.

ನವದೆಹಲಿ(ಮೇ 29): ಕೊರೋನಾ ವೈರಸ್‌ ಕಾರಣ ವಿಧಿಸಲಾಗಿದ್ದ ಲಾಕ್‌ಡೌನ್‌ ಕಾರಣ ಸಂಕಷ್ಟದಲ್ಲಿದ್ದ ವಲಸಿಗ ಕಾರ್ಮಿಕರು ತವರಿಗೆ ಮರಳುವಾಗ ಅವರಿಗೆ ಪ್ರಯಾಣ ಶುಲ್ಕ ವಿಧಿಸಿಕೂಡದು. ಅದು ಬಸ್‌ ಪ್ರಯಾಣವೇ ಆಗಿರಲಿ ಅಥವಾ ರೈಲು ಪ್ರಯಾಣವೇ ಆಗಿರಲಿ ಸರ್ಕಾರಗಳೇ ಪ್ರಯಾಣ ವೆಚ್ಚ ಭರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಅವರಿಗೆ ಪ್ರಯಾಣದ ವೇಳೆ ಸರ್ಕಾರಗಳೇ ಅನ್ನಾಹಾರ, ನೀರು ಒದಗಿಸಬೇಕು ಎಂದು ಸೂಚಿಸಿದೆ.

ವಲಸಿಗ ಕಾರ್ಮಿಕರ ಬವಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ ಅಶೋಕ್‌ ಭೂಷಣ್‌, ನ್ಯಾ ಎಸ್‌.ಕೆ. ಕೌಲ್‌ ಹಾಗೂ ನ್ಯಾ ಎಂ.ಆರ್‌. ಶಾ ಅವರನ್ನು ಒಳಗೊಂಡ ಪೀಠ ಈ ಮಧ್ಯಂತರ ಆದೇಶ ಹೊರಡಿಸಿತು.

ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿಕೊಟ್ಟ ರೈತ!

‘ತವರಿಗೆ ತೆರಳಲು ಹಾತೊರೆಯುತ್ತಿರುವ ವಲಸಿಗರ ಯಾತನೆಯ ಬಗ್ಗೆ ನಮಗೆ ಕಳವಳವಾಗಿದೆ. ಸಂಬಂಧಿಸಿದ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ನೋಂದಣಿ, ಸಾರಿಗೆ, ಊಟೋಪಚಾರ ವ್ಯವಸ್ಥೆಯಲ್ಲಿ ಅನೇಕ ಪ್ರಮಾದಗಳು ಸಂಭವಿಸಿವೆ. ನೋಂದಣಿ ಆದ ನಂತರವೂ ವಲಸಿಗರು ಪ್ರಯಾಣಕ್ಕೆ ಅನೇಕ ದಿನ ಕಾಯುವಂತಾಗಿದೆ’ ಎಂದು ಕೋರ್ಟ್‌ ಸೂಚ್ಯವಾಗಿ ಹೇಳಿತು.

ಒಂದು ವೇಳೆ ಸಾರಿಗೆ ವ್ಯವಸ್ಥೆ ಇಲ್ಲದೇ ವಲಸಿಗರು ರಸ್ತೆಯಲ್ಲೇ ಊರಿಗೆ ನಡೆದು ಹೋಗುತ್ತಿರುವುದು ಕಂಡುಬಂದರೆ ಕೂಡಲೇ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಊಟ ಹಾಗೂ ಇತರ ಅಗತ್ಯ ಸೌಲಭ್ಯ ನೀಡಬೇಕು ಎಂದು ನಿರ್ದೇಶಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ನಡೆದು ಸಾಗುತ್ತಿರುವ ವಲಸಿಗರಿಗೆ ಸಾರಿಗೆ ಸೌಲಭ್ಯ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ’ ಎಂದರು.

ವಲಸಿಗರ ತವರಲ್ಲಿ ಸೋಂಕು ಸ್ಫೋಟ: ಲಾಕ್‌ಡೌನ್ ತೆರವಿನ ಬಳಿಕ ಹೆಚ್ಚಿದ ಪ್ರಕರಣ!

ವಲಸಿಗರಿಗೆ ಭಾರಿ ಪ್ರಮಾಣದ ಪ್ರಯಾಣ ದರ ವಿಧಿಸಿವುದು, ಊಟೋಪಚಾರಕ್ಕೆ ದುಡ್ಡು ಪಡೆಯುವುದು, ಪ್ರಯಾಣದಲ್ಲಿ ಅವ್ಯವಸ್ಥೆ, ಸಾರಿಗೆ ಸೌಲಭ್ಯ ಇಲ್ಲದೇ ವಲಸಿಗರು ಊರಿಗೆ ಸಾವಿರಾರು ಕಿ.ಮೀ. ದೂರ ನಡೆದು ಹೋಗುವುದು- ಇತ್ಯಾದಿ ವಿಚಾರಗಳು ವಿವಾದಕ್ಕೆ ಗುರಿಯಾಗಿದ್ದವು. ಈಗ ಸುಪ್ರೀಂ ಕೋರ್ಟ್‌ನ ಈ ಆದೇಶವು ವಲಸಿಗರ ಯಾತನೆಯನ್ನು ಸಂಪೂರ್ಣವಾಗಿ ದೂರ ಮಾಡಿದಂತಾಗಿದೆ.

ಕೋರ್ಟ್‌ ಆದೇಶ:

- ರೈಲು ಮೂಲಕ ಆಗಲಿ ಅಥವಾ ಬಸ್‌ ಮೂಲಕ ಆಗಲಿ- ವಲಸಿಗರಿಂದ ಟಿಕೆಟ್‌ ವೆಚ್ಚವನ್ನು ವಸೂಲಿ ಮಾಡಕೂಡದು.

- ಆಯಾ ರಾಜ್ಯ ಸರ್ಕಾರಗಳೇ ಪ್ರಯಾಣ ವೆಚ್ಚವನ್ನು ಭರಿಸಬೇಕು

- ವಲಸಿಗರು ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿನ ರಾಜ್ಯ ಸರ್ಕಾರವು ರೈಲು ನಿಲ್ದಾಣದಲ್ಲಿ ಊಟೋಪಚಾರ, ನೀರಿನ ವ್ಯವಸ್ಥೆ ಮಾಡಬೇಕು

- ವಲಸಿಗರು ರೈಲು ಪ್ರಯಾಣ ಮಾಡುತ್ತಿರುವಾಗ ರೈಲಿನಲ್ಲಿ ರೈಲ್ವೆ ಇಲಾಖೆಯು ನೀರು, ಊಟೋಪಚಾರ ವ್ಯವಸ್ಥೆ ಕಲ್ಪಿಸಬೇಕು

- ಬಸ್‌ನಲ್ಲಿ ವಲಸಿಗರು ತೆರಳುವಾಗ ಸಂಬಂಧಿಸಿದ ಸರ್ಕಾರಗಳೇ ಊಟೋಪಚಾರ ವ್ಯವಸ್ಥೆ ಮಾಡಬೇಕು

- ವಲಸಿಗರಿಗೆ ಬಸ್‌ ವ್ಯವಸ್ಥೆ ಮಾಡಲಾಗುತ್ತೋ ಅಥವಾ ರೈಲು ವ್ಯವಸ್ಥೆಯೋ ಸರ್ಕಾರಗಳು ಮೊದಲೇ ಮಾಹಿತಿ ನೀಡಬೇಕು

- ಈ ಎಲ್ಲ ಮಾಹಿತಿಗಳನ್ನು ಸರ್ಕಾರಗಳು ಸಾರ್ವಜನಿಕವಾಗಿ ಪ್ರಕಟಿಸಬೇಕು

- ವಲಸಿಗರು ನಡೆದು ಸಾಗುತ್ತಿರುವುದು ಕಂಡು ಬಂದರೆ ಅವರಿಗೆ ವಸತಿ, ಊಟೋಪಚಾರ ಸೌಲಭ್ಯ ನೀಡಬೇಕು

click me!