ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದೆ ಆರೋಪದಲ್ಲಿ ಬಂಧಿತನಾಗಿರುವ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ಸಹಸಂಸ್ಥಾಪಕ ಮೊಹಮದ್ ಜುಬೇರ್‌ಗೆ ಸುಪ್ರೀಂ ಕೋರ್ಟ್ ಐದು ದಿನಗಳ ಜಾಮೀನು ನೀಡಿದೆ. ಈ ಅವಧಿಯಲ್ಲಿ ಟ್ವಿಟರ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡುವಂತಿಲ್ಲ ಎನ್ನುವ ಷರತ್ತನ್ನೂ ಹಾಕಿದೆ.
ನವದೆಹಲಿ (ಜುಲೈ 8): ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ (Sitapur) ಫ್ಯಾಕ್ಟ್ ಚೆಕ್ ವೆಬ್‌ಸೈಟ್‌ನ ಸಹಸಂಸ್ಥಾಪಕ (Mohammed Zubair,) ವಿರುದ್ಧವಾಗಿ ಹಾಕಲಾದ ಎಫ್‌ಐಆರ್‌ನಲ್ಲಿ (FIR) ಸುಪ್ರೀಂ ಕೋರ್ಟ್ (Supreme Court ) ಶುಕ್ರವಾರ ಐದು ದಿನಗಳ ಜಾಮೀನು ಮಂಜೂರು ಮಾಡಿದೆ. ಕೇವಲ ಸೀತಾಪುರ ಕೇಸ್‌ನಲ್ಲಿ ಮಾತ್ರವೇ ಅವರಿಗೆ ಜಾಮೀನು ಮಂಜೂರಾಗಿದೆ ಎನ್ನುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಟ್ವೀಟ್ ಮಾಡಿದ ಆರೋಪದ ಮೇಲೆ ಮೊಹಮದ್ ಜುಬೇರ್ ವಿರುದ್ಧ ಕೇಸ್ ದಾಖಲಿಸಿದ್ದ ಉತ್ತರ ಪ್ರದೇಶದ ಸೀತಾಪುರ ಪೊಲೀಸರು, ಈ ಕುರಿತಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರಿದ್ದ ರಜಾಕಾಲದ ಪೀಠವು ಜುಬೇರ್‌ಗೆ ಐದು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು ಮತ್ತು ಸಾಮಾನ್ಯ ಪೀಠದ ಮುಂದೆ ಪ್ರಕರಣವನ್ನು ಹೆಚ್ಚಿನ ವಿಚಾರಣೆಗೆ ಮುಂದೂಡಿತು.
ಸೀತಾಪುರದ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಲಾಗಿದ್ದು, ಅದರೊಂದಿಗೆ ಜಾಮೀನು ತಿರಸ್ಕಾರಕ್ಕೆ ಕಾರಣವೇನು ಎನ್ನುವ ಆದೇಶದ ಪ್ರತಿಯನ್ನೂ ನೀಡಲಾಗಿತ್ತು. ಇದೆಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ, ಜೆಎಂಎಫ್‌ಸಿ ನ್ಯಾಯಾಲಯ ವಿಧಿಸಿರುವ ಷರತ್ತುಗಳ ಮೇಲೆ ಅರ್ಜಿದಾರರಿಗೆ 5 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಕೋರ್ಟ್ ಆದೇಶಿಸಿದೆ.
ಸೀತಾಪುರ ನ್ಯಾಯಾಲಯದ ಷರತ್ತುಗಳಲ್ಲಿ ಅರ್ಜಿದಾರರು ಟ್ವೀಟ್ ಮಾಡಬಾರದು ಮತ್ತು ಅವರು ಮೊದಲ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವ್ಯಾಪ್ತಿಯನ್ನು ಬಿಡಬಾರದು ಎಂಬ ಷರತ್ತನ್ನು ಒಳಗೊಂಡಿರಬೇಕು ಎಂದು ಪೀಠ ಹೇಳಿದೆ. ಯುಪಿ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ರದ್ದುಗೊಳಿಸುವಂತೆ ಕೋರಿ ಜುಬೇರ್ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಬೆಂಗಳೂರು ಅಥವಾ ಬೇರೆಲ್ಲಿಯೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜುಬೈರ್ ಹಾಳು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜುಬೇರ್ ಸಲ್ಲಿಸಿರುವ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಯುಪಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: Mohammed Zubair ಬಂಧನಕ್ಕೆ ಕ್ಯಾತೆ ಎತ್ತಿದ ಜರ್ಮನಿಗೆ ಚಾಟಿ ಬೀಸಿದ ಭಾರತ
ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಸೀತಾಪುರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೇರ್ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಟ್ವೀಟ್ ಒಂದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪತ್ರಕರ್ತನನ್ನು ಜೂನ್ 27 ರಂದು ದೆಹಲಿ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಆಲ್ಟ್ ನ್ಯೂಸ್‌ನ ಜುಬೇರ್‌ಗೆ ಪಾಕ್, ಸಿರಿಯಾ, ಗಲ್ಫ್ ರಾಷ್ಟ್ರಗಳ ದೇಣಿಗೆ!
ಜೂನ್ 1 ರಂದು ಹಿಂದೂ ಶೇರ್ ಸೇನಾ ಸೀತಾಪುರ್ ಜಿಲ್ಲಾಧ್ಯಕ್ಷ ಭಗವಾನ್ ಶರಣ್ ನೀಡಿದ ದೂರಿನ ಮೇರೆಗೆ ಯುಪಿಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುರುವಾರ ಸೀತಾಪುರದ ನ್ಯಾಯಾಲಯವು ಜುಲೈ 14 ರವರೆಗೆ ಯುಪಿ ಪೊಲೀಸರಿಗೆ ಜುಬೈರ್‌ನನ್ನು ಕಸ್ಟಡಿಗೆ ನೀಡಿದ ನಂತರ ಸುಪ್ರೀಂ ಕೋರ್ಟ್ ಆದೇಶ ಬಂದಿದೆ.
ಮಾಹಿತಿ ಇಲ್ಲದೆ ಮಾತನಾಡಬೇಡಿ, ಜರ್ಮನಿಗೆ ಎಚ್ಚರಿಸಿದ್ದ ಭಾರತ: ಮೊಹಮದ್ ಜುಬೇರ್ ವಿಚಾರದಲ್ಲಿ ಇತ್ತೀಚೆಗೆ ಮಾತನಾಡಿದ್ದ ಜರ್ಮನಿಗೆ ತಕ್ಕ ಉತ್ತರ ನೀಡಿದ್ದ ಭಾರತ, ಮಾಹಿತಿ ಇಲ್ಲದ, ಯಾವುದೇ ರೀತಿಯಲ್ಲೂ ಸಹಾಯವಾಗದ, ಸಂಪೂರ್ಣವಾಗಿ ತಪ್ಪಿಸಬಹುದಾದ ಇಂಥ ಕಾಮೆಂಟ್‌ಗಳನ್ನು ಮಾಡಬೇಕು ಎಂದು ಹೇಳಿತ್ತು. ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಜಗತ್ತಿನ ಇತರ ದೇಶಗಳಂತೆ ಭಾರತಕ್ಕೂ ಅನ್ವಯವಾಗುತ್ತದೆ ಎಂದು ಜುಬೇರ್ ಅವರ ಬಂಧನದ ವಿಚಾರವಾಗಿ ಜರ್ಮನಿಯ ವಿದೇಶಾಂಗ ಇಲಾಖೆ ಹೇಳಿಕೆ ನೀಡಿತ್ತು.