Farm Law ಕೇಂದ್ರದ ಕೃಷಿ ಕಾಯ್ದೆ ರೈತ ಪರ, ಸುಪ್ರೀಂಗೆ ತಜ್ಞರ ಸಮಿತಿ ಅಧ್ಯಯನ ವರದಿ!

By Kannadaprabha NewsFirst Published Mar 22, 2022, 5:14 AM IST
Highlights
  • ಕೃಷಿ ಕಾಯ್ದೆ ರದ್ದು ಪ್ರಸ್ತಾಪಕ್ಕೂ ಸಮಿತಿ ವಿರೋಧ
  • ಸುಪ್ರೀಂಕೋರ್ಟ್‌ ರಚಿಸಿದ್ದ ಮೂವರು ತಜ್ಞರ ಸಮಿತಿ ವರದಿ
  • ಕೃಷಿ ಕಾಯ್ದೆ ಹಿಂಪಡೆದ ಕಾರಣ ವರದಿ ಅಪ್ರಸ್ತುತ

ನವದೆಹಲಿ(ಮಾ.22): ಕೇಂದ್ರ ಸರ್ಕಾರ ಅಂಗೀಕರಿಸಿದ್ದ ಕೃಷಿ ಕಾಯ್ದೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸ್ವತಃ ಸುಪ್ರೀಂಕೋರ್ಟ್‌ ರಚಿಸಿದ್ದ ಮೂವರು ತಜ್ಞರ ಸಮಿತಿಯು, ಕೃಷಿ ಕಾಯ್ದೆಗಳು ರೈತ ಪರವಾಗಿದೆ. ಯಾವುದೇ ಕಾರಣಕ್ಕೂ ಅವುಗಳನ್ನು ರದ್ದು ಮಾಡಬಾರದು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ಗೆ ಸಲಹೆ ನೀಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ತಜ್ಞರ ಸಮಿತಿಯ ಸದಸ್ಯರ ಪೈಕಿ ಒಬ್ಬರಾದ ಅನಿಲ್‌ ಘನವತ್‌, 2021 ಮಾ.19ರಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ವರದಿಯನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳಿವೆ.

‘ಸರ್ಕಾರ ರೂಪಿಸಿದ ಕಾಯ್ದೆ ರೈತ ಪರವಾಗಿವೆ. ಅದನ್ನು ರದ್ದುಪಡಿಸಿದರೆ ಅದು ಕಾಯ್ದೆ ಪರವಾಗಿರುವ ಬಹುಪಾಲು ರೈತರ ಹಿತಾಸಕ್ತಿಗೆ ವಿರುದ್ಧವಾಗಲಿದೆ. ಹೀಗಾಗಿ ಕಾಯ್ದೆ ರದ್ದು ಬದಲು ಕಾಯ್ದೆಯಲ್ಲಿ ಕೆಲ ಬದಲಾವಣೆ ಮಾಡಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯ ಅಧಿಕಾರ ರಾಜ್ಯಗಳಿಗೆ ನೀಡಬೇಕು. ಬೆಳೆಗಳ ಮುಕ್ತ ಖರೀದಿ ನೀತಿ ಸ್ಥಗಿತಗೊಳಿಸಿ, ಬೆಳೆಗಾರ ಹಾಗೂ ಖರೀದಿ ಮಾಡುವವರ ನಡುವೆ ಒಪ್ಪಂದಕ್ಕೆ ಅವಕಾಶ ಮಾಡಿಕೊಡಬೇಕು. ಗೋಧಿ, ಅಕ್ಕಿಯಂತಹ ಬೆಳೆಗಳ ಮೇಲೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌) ಅಗತ್ಯಗಳಿಗೆ ಅನುಗುಣವಾಗಿ ಸಂಗ್ರಹಣೆಯ ಮೇಲೆ ಮಿತಿ ಹೇರಬೇಕು. ಬೆಳೆಗಳ ಮುಕ್ತ ಸಂಗ್ರಹ ನೀತಿ ಸ್ಥಗಿತಗೊಳಿಸಬೇಕು’ ಎಂದು ಶಿಫಾರಸು ಮಾಡಲಾಗಿತ್ತು ಎಂದು ಘನವತ್‌ ತಿಳಿಸಿದರು.

ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ, ಕೇಂದ್ರ ಬಿಜೆಪಿ ವಿರುದ್ಧ ಮತ್ತೆ ಪ್ರತಿಭಟನೆಗಳಿದ SKM ರೈತ ಸಂಘಟನೆ!

‘ಈ ಕಾಯ್ದೆಗೆ 3.3 ಕೋಟಿ ರೈತರನ್ನು ಒಳಗೊಂಡ 61 ರೈತ ಸಂಘಟನೆಗಳು ಕೃಷಿ ಕಾಯ್ದೆಗೆ ಬೆಂಬಲ ಸೂಚಿಸಿದ್ದವು. 51 ಲಕ್ಷ ರೈತ ಪ್ರತಿನಿಧಿಗಳನ್ನು ಹೊಂದಿರುವ 4 ರೈತ ಸಂಘಟನೆಗಳು ಕೃಷಿ ಕಾಯ್ದೆ ವಿರೋಧಿಸಿದ್ದವು. 3.6 ಲಕ್ಷ ರೈತರನ್ನು ಒಳಗೊಂಡ 7 ಸಂಘಟನೆಗಳು ಕೃಷಿ ಕಾಯ್ದೆಯನ್ನು ಕೆಲವು ಬದಲಾವಣೆ ಮಾಡಿ ಜಾರಿಗೆ ತರುವಂತೆ ಹೇಳಿದ್ದವು. ಆದರೆ ಪ್ರಸ್ತುತ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲಾಗಿದೆ. ಹೀಗಾಗಿ ವರದಿ ತನ್ನ ಪ್ರಸ್ತುತತೆ ಕಳೆದುಕೊಂಡಿದೆ ಎಂದರು.

ರಾಜ್ಯದಲ್ಲೂ 3 ಕೃಷಿ ಕಾಯ್ದೆ ರದ್ದತಿಗೆ ರೈತರ ಹಕ್ಕೊತ್ತಾಯ
ರಸಗೊಬ್ಬರ, ಅರಿಶಿಣ, ಕೀಟನಾಶಕ, ಹನಿ ನೀರಾವರಿ ಉಪಕರಣ ಸೇರಿದಂತೆ ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿರದ್ದುಗೊಳಿಸಬೇಕು. ಅತಿವೃಷ್ಟಿ-ಅನಾವೃಷ್ಟಿಉಂಟಾದಾಗ ನೀಡುವ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದ ಮಾನದಂಡ ಬದಲಾಯಿಸಬೇಕು. ಕೃಷಿಗೆ ಮಾರಕವಾಗಿರುವ ಮೂರು ಕಾಯ್ದೆ ರದ್ದುಪಡಿಸಬೇಕು ಎಂಬುದು ಸೇರಿ ಹಲವು ಹಕ್ಕೊತ್ತಾಯಗಳನ್ನು ರಾಷ್ಟ್ರೀಯ ರೈತ ಮುಖಂಡರ ದುಂಡು ಮೇಜಿನ ಪರಿಷತ್‌ ಮಂಡಿಸಿದೆ. ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ನಡೆದ ಪರಿಷತ್‌ ಸಭೆಯಲ್ಲಿ ಹಲವು ರಾಜ್ಯಗಳಿಂದ ಆಗಮಿಸಿದ್ದ ರೈತ ಮುಖಂಡರು, ಪ್ರಸಕ್ತ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲು, ಪರಿಹಾರೋಪಾಯ ಮತ್ತಿತರ ಅಂಶಗಳ ಬಗ್ಗೆ ಗಹನವಾಗಿ ಚರ್ಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

Punjab Elections: ಚುನಾವಣಾ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ಕೊಟ್ಟ ರೈತರು!

3 ಕೃಷಿ ಕಾಯ್ದೆ ರದ್ದು ಮಾಡುವ ಮಸೂದೆಗೆ ರಾಷ್ಟ್ರಪತಿ ಅಂಕಿತ
3 ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ‘ಕೃಷಿ ಕಾಯ್ದೆ ರದ್ದತಿ ಮಸೂದೆ 2021’ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬುಧವಾರ ಸಹಿ ಹಾಕಿದ್ದಾರೆ. ಈ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನ ಮಂಡಿಸಿ ಸಂಸತ್ತಿನ 2 ಸದನಗಳಿಂದ ಅಂಗೀಕಾರ ಪಡೆಯಲಾಗಿತ್ತು. ವಿರೋಧ ಪಕ್ಷಗಳು ಚರ್ಚೆ ನಡೆಸುವಂತೆ ಆಗ್ರಹಪಡಿಸಿದರೂ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾದ ನಂತರ ಕೇವಲ ನಾಲ್ಕು ನಿಮಿಷದಲ್ಲಿ ಅಂಗೀಕಾರ ಪಡೆದಿತ್ತು. ರಾಜ್ಯಸಭೆಯಲ್ಲಿ ಕೆಲವು ಸಮಯದ ಚರ್ಚೆಯ ನಂತರ ಅಂಗೀಕಾರ ನೀಡಲಾಯಿತು. ಈ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಸುಮಾರು 1 ವರ್ಷಗಳ ಕಾಲ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ದರು.

click me!