
ನವದೆಹಲಿ(ಆ.18): ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ನಿರ್ದೋಷಿ ಎಂದು ದೆಹಲಿ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿಯ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶಶಿ ತರೂರ್‌ರನ್ನು ಆರೋಪಮುಕ್ತಗೊಳಿಸಿದೆ. ಸತತ ಐದನೇ ಬಾರಿ ತೀರ್ಪು ಮುಂದೂಡಿದ್ದ ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಪ್ರಕಟಿಸಿದೆ. ಈ ಮೂಲಕ ಕಳೆದ ಏಳೂವರೆ ವರ್ಷಗಳ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ.
ಏನಿದು ಪ್ರಕರಣ:
ಕಾಂಗ್ರೆಸ್ ಸಂಸದ ಶಶಿ ತರೂರ್ ವಿವಾಹವಾಗಿದ್ದ ಸುನಂದಾ ಪುಷ್ಕರ್ 2014ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್‌ನ ಕೋಣೆಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಶಶಿ ತರೂರ್ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದುದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿತ್ತು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಇನ್ನು ವಿಷದಿಂದ ಹಾಗೂ ಅಲ್‌ಪ್ರಾಕ್ಸ್ ಸೇವನೆಯಿಂದಾಗಿ ಸುನಂದಾ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದಿಸಿದ್ದರು. ಆದರೆ ಈ ಔಷಧ ಸುನಂದಾ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ವಿಧಿ ವಿಜ್ಞಾನ ವರದಿಗಳು ತಿಳಿಸಿವೆ ಎದು ಹಿರಿಯ ವಕೀಲ ವಿಕಾಸ್ ಪಹ್ವಾ ತಿಳಿಸಿದ್ದರು. ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್‌ಗೆ 2018ರ ಜುಲೈ 5 ರಂದು ಜಾಮೀನು ಮಂಜೂರಾಗಿದೆ. ಅಲ್ಲದೇ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಶಶಿ ತರೂರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇನ್ನು ತಮ್ಮನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ಕೊಟ್ಟ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, ನ್ಯಾಯಾಲಯದ ತೀರ್ಪಿಗೆ ಅತ್ಯಂತ ಗೌರವದಿಂದ ತಲೆ ಬಾಗುತ್ತೇನೆ. ಕಳೆದ ಏಳೂವರೆ ವರ್ಷಗಳ ಕಾಲ ಅತ್ಯಂತ ಹಿಂಸೆ ಅನುಭವಿಸಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ