ಮಧ್ಯರಾತ್ರಿ ಮೋದಿ ಸೆಲ್ಫಿ ವಿಡಿಯೋ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಇಂದು ಕೇಂದ್ರದ ಬ್ರಹ್ಮಾಸ್ತ್ರ!

Kannadaprabha News   | Kannada Prabha
Published : Jul 24, 2026, 07:25 AM IST
Strictest action coming PM Modi releases midnight video message amid NEET paper leak CJP protest

ಸಾರಾಂಶ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಶೀಘ್ರಗತಿ ನ್ಯಾಯಾಲಯ ಸ್ಥಾಪನೆ ಹಾಗೂ ಹೊಸ ಕಾಯ್ದೆ ಜಾರಿಗೊಳಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.

ನವದೆಹಲಿ (ಜು.24): ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ತೀವ್ರಗೊಂಡಿರುವಾಗಲೇ ಗುರುವಾರ ಮಧ್ಯರಾತ್ರಿ ಸುಮಾರು 3 ನಿಮಿಷಗಳ ಸೆಲ್ಫಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಜಿರಳೆ ಪಾರ್ಟಿ ಹೋರಾಟಕ್ಕೆ ಉಗ್ರ ಪನ್ನೂನ್‌ ಬೆಂಬಲ! 95 ಲಕ್ಷ ರು. ನೆರವು ನೀಡುವುದಾಗಿಯೂ ಘೋಷಣೆ!

‘ಯುವಕರ ಭವಿಷ್ಯಕ್ಕಿಂತ ನಮಗೆ ಬೇರೇನೂ ಮುಖ್ಯವಲ್ಲ, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ ತ್ವರಿತವಾಗಿ ಹಾಗೂ ಕಠಿಣ ಶಿಕ್ಷೆ ವಿಧಿಸಲು ಶೀಘ್ರಗತಿ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದೇವೆ’ ಎಂದು ಗುರುವಾರ ಬೆಳಗ್ಗೆಯಷ್ಟೇ ಪ್ರಧಾನಿ ಟ್ವೀಟ್‌ ಮಾಡಿದ್ದರು. ಗುರುವಾರ ಮಧ್ಯರಾತ್ರಿ ವೇಳೆಗೆ ಬಲು ಅಪರೂಪಕ್ಕೆಂಬಂತೆ 2.56 ನಿಮಿಷಗಳ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ಶುಕ್ರವಾರ ಕೇಂದ್ರ ಸಚಿವ ಸಂಪುಟ ಕೈಗೊಳ್ಳಲಿದೆ. ಮುಂದಿನ ವಾರವೇ ಸಂಸತ್ತಿನಲ್ಲಿ ಆದಷ್ಟು ಮಸೂದೆ ಪಾಸಾಗುವಂತೆ ನೋಡಿಕೊಳ್ಳಲಿದೆ ಎಂದರು.

ಪ್ರಧಾನಿ ಮೋದಿ ವಿಡಿಯೋದಲ್ಲಿ ಹೇಳಿದ್ದೇನು?:

ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಹಾಗೂ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದೂ ಸೇರಿದಂತೆ ಕಠೋರ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮೋದಿ ಸೆಲ್ಫಿ ವಿಡಿಯೋದಲ್ಲಿ ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಸಾಧಾರಣ ವಿಷಯವಲ್ಲ ಎಂಬುದು ಗೊತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಇದೊಂದು ನೋವಿನ ಸಂಗತಿ. ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ಎರಡೂವರೆ ತಿಂಗಳಿನಲ್ಲಿ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಪ್ಪು ಮಾಡಿದವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ವಿದ್ಯಾರ್ಥಿಗಳ ಒಂದಿಡೀ ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಯಾಗಿತ್ತು. ಸರ್ಕಾರ ತನ್ನ ಎಲ್ಲ ಸಾಮರ್ಥ್ಯ ಬಳಸಿ 22 ಲಕ್ಷ ವಿದ್ಯಾರ್ಥಿಗಳು ಅತ್ಯಂತ ಅಲ್ಪಾವಧಿಯಲ್ಲಿ ಮರುಪರೀಕ್ಷೆ ಬರೆಯುವಂತೆ ನೋಡಿಕೊಂಡಿದೆ ಎಂದು ವಿವರಿಸಿದರು.

ಇಲಾಖೆಗಳು ಈ ತಡರಾತ್ರಿ ಹೊತ್ತಿನಲ್ಲಿ ನಿರ್ಣಯ ತಿಳಿಸಿವೆ. ಈ ನಿರ್ಣಯ ಹಾಗೂ ಅದರ ಜತೆಗೆ ಶೀಘ್ರಗತಿ ನ್ಯಾಯಾಲಯ ಮತ್ತು ಕಠಿಣ ಶಿಕ್ಷೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಚರ್ಚಿಸುತ್ತೇವೆ. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಪಡೆದು, ಅದನ್ನು ಅಂತಿಮಗೊಳಿಸಲಾಗುತ್ತದೆ. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಎರಡನೇ ವಾರದ ಕಲಾಪದಲ್ಲಿ ಅದನ್ನು ಅಂಗೀಕರಿಸಲಾಗುತ್ತದೆ ಎಂದರು.

ಬೆಳಗ್ಗೆ ಮೋದಿ ಹೇಳಿದ್ದು:

ಗುರುವಾರ ಬೆಳಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಪ್ರಧಾನಿ ಮೋದಿ, ‘ಪೇಪರ್‌ ಲೀಕ್‌ನಲ್ಲಿ ಭಾಗಿಯಾದವರಿಗೆ ತ್ವರಿತಗತಿಯಲ್ಲಿ ಹಾಗೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರಗತಿ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಯುವಕರ ಭವಿಷ್ಯ ಹಾಗೂ ಕಲ್ಯಾಣಕ್ಕಿಂತ ನಮ್ಮ ಸರ್ಕಾರಕ್ಕೆ ಇನ್ಯಾವುದೂ ಮುಖ್ಯವಲ್ಲ. ದೇಶದ ಯುವಕರ ಭವಿಷ್ಯ ಹಾಳುಗೆಡವಲೆತ್ನಿಸುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಇದು ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಕೈಗೊಳ್ಳುತ್ತಿರುವ ಕ್ರಮಗಳ ಮುಂದುವರಿದ ಭಾಗ’ ಎಂದು ಹೇಳಿದ್ದಾರೆ.

ದೇಶದ ಯುವಕರ ಭವಿಷ್ಯ ಹಾಳು ಮಾಡಿದ ಮೋದಿ: ರಾಹುಲ್ ಕಿಡಿ

ಮೋದಿ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ ತೀವ್ರ ಆಕ್ರೋಶ ಹೊರಹಾಕಿದೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಮೋದಿ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಿಕೊಂಡಿದೆ.

ದೇಶದ ಯುವಕರಿಗೆ ಅತಿ ಹೆಚ್ಚು ಹಾನಿ ಮಾಡಿದವರೇ ಮೋದಿ. ಅವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹಾಗೂ ನಾಶ ಮಾಡಲು ಅವಕಾಶ ಮತ್ತು ಪ್ರೋತ್ಸಾಹ ನೀಡಿದ್ದಾರೆ. ಇದಕ್ಕೆ ಕಾರಣರಾದ ಎಲ್ಲ ವ್ಯಕ್ತಿಗಳನ್ನು ಅವರು ರಕ್ಷಿಸಿದ್ದಾರೆ ಎಂದು ಎಕ್ಸ್‌ನಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆ ಸ್ಪಷ್ಟವಾಗಿದೆ. ಅವು, 1. ಧರ್ಮೇಂದ್ರ ಪ್ರಧಾನ್‌ರನ್ನು ವಜಾ ಮಾಡಬೇಕು, 2 ವಿದ್ಯಾರ್ಥಿಗಳಲ್ಲಿ ಕ್ಷಮೆ ಕೋರಬೇಕು, 3. ಅವರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದಾಗಿದೆ ಎಂದು ರಾಹುಲ್‌ ತಿಳಿಸಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಕೂಡ ಆಕ್ರೋಶ ಹೊರಹಾಕಿದ್ದು, ಈ ಹಿಂದಿನ ಪ್ರಧಾನಿಗಳಂತೆ ಸಂಸತ್ತಿನಲ್ಲಿ ಮಾತನಾಡಲಾಗಲಿ, ಅನಿವಾರ್ಯವಾದಾಗ ಸರಣಿ ಚರ್ಚೆಗಳಲ್ಲಿ ಪಾಲ್ಗೊಳ್ಳಲಿಕ್ಕಾಗಲಿ ಮೋದಿ ಅವರಿಗೆ ಧೈರ್ಯ ಇಲ್ಲ ಎಂದಿದ್ದಾರೆ.

ಬೆಳಗ್ಗೆ ಮೋದಿ ಪೋಸ್ಟ್‌ವೊಂದನ್ನು ಹಾಕಿ ವಿದ್ಯಾರ್ಥಿಗಳು ದೇಶಾದ್ಯಂತ ಎತ್ತಿರುವ ವಿಚಾರಗಳ ಕುರಿತು ಕಳವಳ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಪೋಸ್ಟ್‌ ಅವರು ಬೆಚ್ಚಿಬಿದ್ದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.

ವೋಟ್‌ ಕಳ್ಳತನ, ಸೀಟು ಕಳ್ಳತನ, ದೇಣಿಗೆ ಕಳ್ಳತನ, ಪ್ರಶ್ನೆ ಪತ್ರಿಕೆ ಕಳ್ಳತನ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂದು ಜೈರಾಂ ವ್ಯಂಗ್ಯವಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Sonam Wangchuk: ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿ 26 ದಿನಗಳ ಬಳಿಕ ಕೊನೆಗೂ ಉಪವಾಸ ಸತ್ಯಾಗ್ರಹ ಕೈಬಿಟ್ಟ ಸೋನಮ್, ಹೇಳಿದ್ದೇನು?
ಜಿರಳೆ ಪಾರ್ಟಿ ಹೋರಾಟಕ್ಕೆ ಉಗ್ರ ಪನ್ನೂನ್‌ ಬೆಂಬಲ! 95 ಲಕ್ಷ ರು. ನೆರವು ನೀಡುವುದಾಗಿಯೂ ಘೋಷಣೆ!