ಜಿರಳೆ ಪಾರ್ಟಿ ಹೋರಾಟಕ್ಕೆ ಉಗ್ರ ಪನ್ನೂನ್‌ ಬೆಂಬಲ! 95 ಲಕ್ಷ ರು. ನೆರವು ನೀಡುವುದಾಗಿಯೂ ಘೋಷಣೆ!

Kannadaprabha News   | Kannada Prabha
Published : Jul 24, 2026, 05:20 AM IST
Extremist Gurpatwant singh Pannun support to Cockroach Party protest

ಸಾರಾಂಶ

ನಿಷೇಧಿತ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್, ದೆಹಲಿಯಲ್ಲಿನ ನೀಟ್‌ ಅಕ್ರಮ ಹೋರಾಟಕ್ಕೆ ₹95 ಲಕ್ಷದ ನೆರವು ಘೋಷಿಸಿದ್ದಾನೆ. ಮೋದಿ ಸರ್ಕಾರದೊಂದಿಗೆ ಸಂಧಾನ ಮಾಡಬಾರದ, ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕರಿಸಬೇಕು ಎಂಬಂತಹ ಷರತ್ತುಗಳನ್ನು ವಿಧಿಸಿದ್ದಾನೆ.

ನವದೆಹಲಿ (ಜು.24) : ಭಾರತ ವಿರೋಧಿ ದುಷ್ಕೃತ್ಯಗಳಿಗೆ ಸದಾ ಬೆಂಬಲ ನೀಡುವ ನಿಷೇಧಿತ ‘ಸಿಖ್‌ ಫಾರ್‌ ಜಸ್ಟಿಸ್‌’ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್‌ ಸಿಂಗ್‌ ಪನ್ನೂನ್ ಇದೀಗ, ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ)ಯ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾನೆ. ಅಲ್ಲದೆ ತನ್ನ ಮೂರು ಷರತ್ತು ಈಡೇರಿಸಿದರೆ ಸಿಜೆಪಿಗೆ 1 ದಶಲಕ್ಷ ಡಾಲರ್ (₹95 ಲಕ್ಷ ) ನೆರವಿನ ಘೋಷಣೆಯನ್ನೂ ಮಾಡಿದ್ದಾನೆ.

ಸಿಜೆಪಿ ಹೋರಾಟ ದಿಕ್ಕು ತಪ್ಪುತ್ತಿರುವ ಬಗ್ಗೆ ಕಳವಳದ ಬೆನ್ನಲ್ಲೇ ಪನ್ನೂನ್ ನೀಡಿರುವ ಹೇಳಿಕೆ, ದೆಹಲಿ ಹೋರಾಟದೊಳಗೆ ದೇಶ ವಿರೋಧಿ ಶಕ್ತಿಗಳು ನುಸುಳಿರುವ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಪನ್ನೂನ್‌ ವಿಡಿಯೋ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ನಿಶಿಕಾಂತ್‌ ದುಬೆ, ‘ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತಿದೆ? ಇದರ ಹಿಂದೆ ಯಾವ ಸಂಚಿದೆ? ತಮ್ಮ ಇತ್ತೀಚಿನ ವಿದೇಶಿ ಭೇಟಿ ವೇಳೆ ರಾಹುಲ್‌ ಗಾಂಧಿ ಯಾರ್‍ಯಾರನ್ನು ಭೇಟಿ ಮಾಡಿದ್ದರು? ಇದರ ಹಿಂದಿನ ನಿಜವಾದ ಶಕ್ತಿ ಯಾರು?’ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?:

ಪನ್ನೂನ್ ಬಿಡುಗಡೆ ಮಾಡಿರುವ ಎರಡೂವರೆ ನಿಮಿಷಗಳ ವಿಡಿಯೋದಲ್ಲಿ, ‘ನಾನು ಸಿಜೆಪಿ ನಾಯಕರ ಜೊತೆ ಝೂಮ್‌ ಮೀಟಿಂಗ್‌ ನಡೆಸಿದ್ದು, ಅವರಿಗೆ 1 ದಶಲಕ್ಷ ಡಾಲರ್‌ ನೆರವು ಘೋಷಿಸಿದ್ದೇನೆ. ಆದರೆ ಇದಕ್ಕಾಗಿ ನಾನು ಅವರಿಗೆ ಮೂರು ಷರತ್ತು ಹಾಕಿದ್ದೇನೆ. ಮೊದಲನೆಯದ್ದು, ಯಾವುದೇ ಕಾರಣಕ್ಕೂ ನೀವು ಮೋದಿ ಸರ್ಕಾರದ ಜೊತೆ ಸಂಧಾನ ಮಾಡಿಕೊಳ್ಳಬಾರದು ಎರಡನೆಯದ್ದು ಆ.15ರವರೆಗೂ ಹೋರಾಟ ಮುಂದುವರೆಸಬೇಕು ಮೂರನೆಯದ್ದು ಸಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬುದಾಗಿದೆ’ ಎಂದು ಹೇಳಿದ್ದಾನೆ.

ಜೊತೆಗೆ ‘ಸಿಜೆಪಿ ಕಾರ್ಯಕರ್ತರು ಮೋದಿ ಪದಚ್ಯುತಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಜನಮತಗಣನೆಗೆ ಕರೆ ಕೊಡಬೇಕು’ ಎಂದು ಸಲಹೆ ನೀಡಿದ್ದಾನೆ.

ಜೊತೆಗೆ ಮುಂದಿನ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನಾವು ಅಡ್ಡಿ ಮಾಡಲಿದ್ದೇವೆ ಮತ್ತು ಭಾರತದ ಪ್ರಧಾನಿ ಮೋದಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾನೆ.

ಯಾರು ಈ ಪನ್ನು?

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಮುಖ್ಯಸ್ಥ ಈ ಗುರುಪತ್ವಂತ್‌ ಸಿಂಗ್‌ ಪನ್ನೂನ್‌. ಭಾರತದಲ್ಲಿ ಜನಿಸಿ, ಸದ್ಯ ಅಮೆರಿಕದಲ್ಲಿರುವ ಈತ, ಖಲಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದ್ದು, ಆಗಾಗ ವಿಡಿಯೋಗಳ ಮೂಲಕ ಭಾರತದ ನಾಯಕರಿಗೆ ಬೆದರಿಕೆ ಒಡ್ಡುತ್ತಿರುತ್ತಾನೆ. ಪ್ರತ್ಯೇಕತಾವಾದ ಹರಡುವುದು, ಹಿಂಸೆಗೆ ಕರೆ ನೀಡುವುದು ಸೇರಿದಂತೆ ಹಲವಾರು ಆರೋಪಗಳನ್ನು ಹೊತ್ತಿರುವ ಈತನನ್ನು 2020ರಲ್ಲಿ ಭಾರತ ಸರ್ಕಾರ ಉಗ್ರ ಎಂದು ಘೋಷಿಸಿದೆ.

ಜೊತೆಗೆ, ‘ದೆಹಲಿ ಮತ್ತು ಮೋದಿ ಸರ್ಕಾರದ ಪತನವನ್ನು ಯಾರೂ ತಡೆಯಲಾಗದು. ಭಾರತವನ್ನು ವಿಭಜಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಮೋದಿ ಪತನ ನಮಗೆ ಖಾಯಂ ಪರಿಹಾರವಲ್ಲ, ಬದಲಾಗಿ ನಿಜವಾದ ಪರಿಹಾರವೆಂದರೆ ಭಾರತದ ವಿಭಜನೆ ಮತ್ತು ಭಾರತವನ್ನು ಬಾಲ್ಕಾನಿಸ್ತಾನವನ್ನಾಗಿ ಪರಿವರ್ತಿಸುವುದು. ಈ ನಿಟ್ಟಿನಲ್ಲಿ ಆ.16ರಂದು ಖಲಿಸ್ತಾನಿ ಜನಮತಗಣನೆ ನಡೆಸಲಿದ್ದೇವೆ. ಈ ಮೂಲಕ ಪಂಜಾಬ್‌ ಅನ್ನು ಭಾರತದಿಂದ ಪ್ರತ್ಯೇಕಗೊಳಿಸಲಿದ್ದೇವೆ’ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಸೋನಮ್‌, ಇಟ್ಸ್‌ ಡನ್‌ ಬ್ರೋ' ವಾಂಗ್ಚುಕ್‌ಗೆ ಸಲ್ಲು ಮನವಿ; ವಿದ್ಯಾರ್ಥಿಗಳಿಗೆ ಪ್ರತಿಭಟನೆ ಅಂತ್ಯಗೊಳಿಸಲು ಹೇಳಿದ ಸಲ್ಮಾನ್‌ ಖಾನ್‌
ಅಂದು 12 ಗಂಟೆ ಕೆಲಸ, ತಿಂಗಳಿಗೆ 15000 ಸಂಬಳ! ಇಂದು 35 ಸಾವಿರ ಸ್ಯಾಲರಿ.. ಇವರು ಮಾಡಿದ ಟ್ರಿಕ್ಸ್ ಏನು?