
ನವದೆಹಲಿ: ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ಅಶ್ಲೀಲ ಹಾಸ್ಯ ವಿವಾದದ ಬೆನ್ನಲ್ಲೇ ಒಟಿಟಿ ಮತ್ತು ಯೂಟ್ಯೂಬ್‌ನಂಥ ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಮತ್ತಷ್ಟು ಕಠಿಣ ನಿಯಂತ್ರಣ ಕ್ರಮಗಳನ್ನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಶನಿವಾರ ನಿಶಿಕಾಂತ್ ದುಬೆ ನೇತೃತ್ವದ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ, ‘ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶಿಸಲ್ಪಡುವ ಅಶ್ಲೀಲ ಮತ್ತು ಹಿಂಸೆಯ ಕಂಟೆಂಟ್‌ಗಳಿಗೆ ಸಂಬಂಧಿಸಿ ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಅಂಥ ಹಾನಿಕಾರಕ ಕಂಟೆಂಟ್‌ಗಳನ್ನು ನಿಯಂತ್ರಿಸಲು ಹೊಸ ಕಾನೂನು ನಿಯಮಾವಳಿ ರೂಪಿಸುವ ಹಾಗೂ ಹಾಲಿ ಇರುವ ಶಾಸನಬದ್ಧ ನಿಬಂಧನೆಗಳ ಪರಿಶೀಲಿಸುವ ಕೆಲಸ ಆಗುತ್ತಿದೆ’ ಎಂದು ತಿಳಿಸಿದೆ.
‘ಆನ್‌ಲೈನ್‌ಗಳ ಮೂಲಕ ಅಶ್ಲೀಲ ಮತ್ತು ಹಿಂಸಾಚಾರದ ಪ್ರದರ್ಶನ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಹೆಚ್ಚುತ್ತಿದೆ. ಇಂಥ ಹಾನಿಕಾರಕ ಅಂಶಗಳನ್ನು ನಿಯಂತ್ರಿಸಲು ಹಾಲಿ ಕಾನೂನಿನಲ್ಲಿ ಕೆಲ ನಿಯಮಾವಳಿಗಳಿವೆ. ಆದರೂ, ಈ ರೀತಿಯ ಕಂಟೆಂಟ್‌ಗಳನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ಹಾಗೂ ಪರಿಣಾಮಕಾರಿ ಕಾನೂನು ರೂಪಿಸುವ ಬೇಡಿಕೆ ಹೆಚ್ಚುತ್ತಿದೆ.’
ಇದನ್ನೂ ಓದಿ: ಬಾಂಗ್ಲಾಕ್ಕಷ್ಟೇ ಅಲ್ಲ, ಭಾರತಕ್ಕೂ 180 ಕೋಟಿ ರೂ. ಹಣ, ಟ್ರಂಪ್ ಹೇಳಿಕೆ ಬೆನ್ನಲ್ಲೇ ಕೇಂದ್ರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್!
‘ಈ ರೀತಿಯ ಬೇಡಿಕೆ ಹಾಗೂ ಆನ್‌ಲೈನ್ ಕಂಟೆಂಟ್‌ಗಳ ಕುರಿತು ಕೇಳಿ ಬರುತ್ತಿರುವ ದೂರುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ’ ಎಂದು ಸಚಿವಾಲಯವು ಹೇಳಿದೆ. ಇಂಡಿಯಾ ಗಾಟ್ ಲೆಟೆಂಟ್ ಯೂಟ್ಯೂಬ್ ಚಾನೆಲ್‌ನಲ್ಲಿ ರಣವೀರ್ ಅಲಹಬಾದಿಯಾ ಅವರ ಅಶ್ಲೀಲ ಹೇಳಿಕೆ ವಿವಾದಕ್ಕೆ ಗುರಿಯಾದ ಬಳಿಕ ಹೈಕೋರ್ಟ್, ಸುಪ್ರೀಂ ಕೋರ್ಟ್, ಸಂಸದರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದಂಥ ಶಾಸನಬದ್ಧ ಸಂಸ್ಥೆಗಳು ಆನ್‌ಲೈನ್ ಕಂಟೆಂಟ್‌ಗಳ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿವೆ.
ಈ ಹಿನ್ನೆಲೆಯಲ್ಲಿ ಫೆ.13ರಂದು ಸಂಸದೀಯ ಸ್ಥಾಯಿ ಸಮಿತಿಯು ಹೊಸ ತಂತ್ರಜ್ಞಾನ ಮತ್ತು ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳ ವಿಚಾರದಲ್ಲಿ ಹಾಲಿ ಕಾಯ್ದೆಗಳಿಗೆ ಸಂಬಂಧಿಸಿ ತಿದ್ದುಪಡಿಯ ಅಗತ್ಯ ಕುರಿತು ಒತ್ತಾಯಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಇದೀಗ ಆನ್‌ಲೈನ್ ಕಂಟೆಂಟ್‌ಗಳ ನಿಯಂತ್ರಣಕ್ಕೆ ಮೂಗುದಾರ ಹಾಕುವ ಕುರಿತು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಹೋಳಿ ಹಬ್ಬ 'ಛಪ್ರಿಗಳ ಹಬ್ಬ' ಎಂದ ಫರಾ ಖಾನ್, ಹಿಂದೂಗಳು ಆಕ್ರೋಶ, ಕ್ರಿಮಿನಲ್ ಪ್ರಕರಣ ದಾಖಲು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ