ಜಾತಿ, ಮತ ಎಂಬ ಭೇದ– ಭಾವ ಅಳಿಸಿ ಹಾಕಿ ಹಿಂದೂ ಜೀವನಶೈಲಿ ಮತ್ತಷ್ಟು ಬಲಪಡಿಸೋಣ: ಸದ್ಗುರು!

By Suvarna NewsFirst Published Sep 14, 2021, 11:15 AM IST
Highlights

* ಹಿಂದೂ ಜೀವನ ಶೈಲಿಯನ್ನು ನಾಶ ಮಾಡಲಾಗುತ್ತಿದೆ ಎಂಬ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ

* ಜಾತಿ ಮತ್ತು ಪಂಥಗಳ ಭೇದ ಎಂಬುವುದನ್ನು ಅಳಿಸಿ ಹಾಕಿದರೆ ಹಿಂದುತ್ವ ಬಲಗೊಳ್ಳುತ್ತದೆ

* ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಸದ್ಗುರು ಮಾತು

ಕೊಯಮುತ್ತೂರು(ಸೆ.14): ಇಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಪೇಜಾವರ ಅಧೋಕ್ಷಜ ಮಠದ 34 ನೇ ಚಾತುರ್ಮಾಸ್ಯ ಮಹೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ ಹಿಂದೂ ಜೀವನ ಶೈಲಿಯನ್ನು ನಾಶ ಮಾಡಲಾಗುತ್ತಿದೆ ಎಂಬ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ನಾವು ಇದನ್ನು ಬಲಪಡಿಸಿ, ಆಕರ್ಷಕವಾಗಿಸಿದರೆ, ಜಾತಿ ಮತ್ತು ಪಂಥಗಳ ಭೇದ ಎಂಬುವುದನ್ನು ಅಳಿಸಿ ಹಾಕಿದರೆ ಹಿಂದುತ್ವ ಎಂಬ ಪರಿಧಿಯಲ್ಲಿ ಎಲ್ಲರೂ ಘನತೆಯಿಂದ ಬದುಕಬಹುದು, ಯಾರೂ ಅದನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸೋಮವಾರದಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸದ್ಗುರು ಅವರು ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು, ನಮ್ಮ ಕಾಲದಲ್ಲಿ ಸನಾತನ ಧರ್ಮದ ಪ್ರಸ್ತುತತೆ ಮುಂತಾದ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. 

ರಾಷ್ಟ್ರೀಯ ಶಿಕ್ಷಣ ನೀತಿಗೆ ಕೆಲವು ಜನರ ಪ್ರತಿರೋಧದ ಕುರಿತು ಡಾ.ಆನಂದತೀರ್ಥಾಚಾರ್ಯ ನಾಗಸಂಪಿಗೆ ಅವರ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ಶಿಕ್ಷಣದ ವಿಷಯಕ್ಕೆ ಬಂದಾಗ, ಶಿಕ್ಷಣವು ಎಡ ಅಥವಾ ಬಲ ಪಂಥದ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಶಿಕ್ಷಣ ಎಂಬುವುದು ನಿಮ್ಮ ಮತ್ತು ನನ್ನ ಬಗ್ಗೆ ಅಲ್ಲ, ಶಿಕ್ಷಣ ಎಂಬುವುದು ನಮ್ಮ ಮುಂದಿನ ಪೀಳಿಗೆ ಮತ್ತು ಅವರ ಭವಿಷ್ಯದ ಬಗ್ಗೆಯಾಗಿದೆ. ಮುಂದಿನ ಪೀಳಿಗೆಗೆ ಯಾವುದು ಉತ್ತಮವೋ ಅದೇ ಇರಬೇಕು ಎಂದಿದ್ದಾರೆ.

We don’t have to worry about someone trying to dismantle the Hindu way of life. If we strengthen it & make it attractive for people, eliminating distinctions of caste & creed so all can live with dignity in the Hindu framework, no one can dismantle it. -Sg pic.twitter.com/RTvkqRB2er

— Sadhguru (@SadhguruJV)

ಸಂಸ್ಕೃತಿ ಒಂದು ಜೀವಂತ ವಸ್ತು

ಇದೇ ವೇಳೆ ಇಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಎಷ್ಟು ಮಹತ್ವ ವಹಿಸುತ್ತದೆ ಎಂಬ ಬಗ್ಗೆಯೂ ಮಾತನಾಡಿದ ಸದ್ಗುರು ನಮ್ಮ ಸಂಸ್ಕೃತಿಯಲ್ಲಿ ಜೀವನವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ನೋಡುವ ಬದಲು, ನಾವು ಅದನ್ನು ಸಂರಕ್ಷಿಸಲು ಪ್ರಯತ್ನಿಸಬೇಕು. ಸಂಸ್ಕೃತಿ ಒಂದು ಜೀವಂತ ವಸ್ತು. ನಾವು ಅದನ್ನು ಜೀವಂತವಾಗಿರಿಸಬೇಕು. ಭವಿಷ್ಯದ ಪೀಳಿಗೆ ನಮ್ಮ ಸಂಸ್ಕೃತಿಯ ಅಂಶಗಳನ್ನು ಅಳವಡಿಸಿಕೊಳ್ಳಬೇಕಾದರೆ, ಅದು ಅವರಿಗೆ ಆಕರ್ಷಕವಾದ ರೀತಿಯಲ್ಲಿ ಪ್ರಸ್ತುತಪಡಿಸುವುದು ಅತ್ಯಗತ್ಯ ಎಂದಿದ್ದಾರೆ.

ರಾಷ್ಟ್ರಕ್ಕಾಗಿ ವೀರರ ಕೊಡುಗೆ ಬಗ್ಗೆ ಯುವಕರಿಗೆ ಅರಿವಿದೆಯೇ?

ವೇದಾಂತ ಶಿಕ್ಷಕ ಶ್ಯಾಮಾಚಾರ್ಯ ರಾಷ್ಟ್ರಕ್ಕಾಗಿ ವೀರರ ಕೊಡುಗೆ ಬಗ್ಗೆ ಯುವಕರಿಗೆ ಅರಿವಿದೆಯೇ?? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ಯುವಕರು ಭ್ರಷ್ಟರು ಎಂದು ಹೇಳುವುದು ಒಳ್ಳೆಯದಲ್ಲ. ಯುವಕರು ಭ್ರಷ್ಟರಲ್ಲ. ನಾವು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಸರಿಯಾಗಿ ನೀಡಿಲ್ಲ. ಅವರಿಗದು ಅರ್ಥವಾಗುವಂತೆ ನಾವು ಹೇಳಬೇಕು. ನೀವು ಅವರಿಗೆ ಮೌಲ್ಯವನ್ನು ತೋರಿಸಬೇಕು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೀವು ಅವರಿಗೆ ತೋರಿಸಬೇಕು. ಆಗ ಮಾತ್ರ ಅವರು ಅದರ ಬಗ್ಗೆ ಆಲೋಚಿಸುತ್ತಾರೆ ಎಂದಿದ್ದಾರೆ.

ಪ್ರತಿದಿನ ಹತ್ತು ನಿಮಿಷಗಳ ಧ್ಯಾನವು ನಮ್ಮ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದೇ?

ಪ್ರತಿದಿನ ಹತ್ತು ನಿಮಿಷಗಳ ಧ್ಯಾನವು ನಮ್ಮ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ಧ್ಯಾನವು ಕ್ರಿಯೆಯಲ್ಲ, ಧ್ಯಾನವು ಒಂದು ನಿರ್ದಿಷ್ಟ ಗುಣವಾಗಿದೆ. ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಯನ್ನು ಒಂದು ನಿರ್ದಿಷ್ಟ ಮಟ್ಟದ ಪ್ರಬುದ್ಧತೆಗೆ ಅಭಿವೃದ್ಧಿಪಡಿಸಿದರೆ, ನೀವು ಧ್ಯಾನಸ್ಥರಾಗುತ್ತೀರಿ. ಇದು ಮಾನವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯ ಪ್ರಶ್ನೆಯಾಗಿದೆ, ಅದು ಎಷ್ಟು ಕಾಲದ ಪ್ರಶ್ನೆಯಲ್ಲ.

click me!