ಮಣಿಪಾಲದಲ್ಲಿ ನಿಪಾ ವೈರಸ್‌ ಸಂಶೋಧನೆಗೆ ಬಿತ್ತು ಬ್ರೇಕ್‌

By Kannadaprabha NewsFirst Published Feb 8, 2020, 11:00 AM IST
Highlights

ನಿಪಾ ವೈರಸ್‌ ಬಗ್ಗೆ ಮಣಿಪಾಲದ ಸಂಸ್ಥೆಯೊಂದರ ಮೂಲಕ ಸಂಶೋಧನೆ ನಡೆಸುತ್ತಿದ್ದ ಅಮೆರಿಹಾಗೆ ಕೇಂದ್ರ ಸರ್ಕಾರ ನಿಲ್ಲಿಸುವಂತೆ ಸೂಚನೆ ನೀಡಿದೆ. 

ನವದೆಹಲಿ  [ಫೆ.08] : ಅತ್ಯಂತ ಅಪಾಯಕಾರಿಯಾದ ನಿಪಾ ವೈರಸ್‌ ಬಗ್ಗೆ ಮಣಿಪಾಲದ ಸಂಸ್ಥೆಯೊಂದರ ಮೂಲಕ ಸಂಶೋಧನೆ ನಡೆಸುತ್ತಿದ್ದ ಅಮೆರಿಕದ ಕ್ರಮಕ್ಕೆ ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದೆ.

ನಿಪಾ ವೈರಸ್‌ ಕುರಿತು ಸಂಶೋಧನೆ ನಡೆಸುವ ಅರ್ಹತೆ ಇಲ್ಲದಿದ್ದರೂ ಮಣಿಪಾಲ ವೈರಾಣು ಸಂಶೋಧನಾ ಕೇಂದ್ರ (ಎಂವಿಸಿಆರ್‌) ಆ ಬಗ್ಗೆ ಸಂಶೋಧನೆ ಮಾಡುತ್ತಿತ್ತು. ಅಮೆರಿಕದ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ರೋಗ ನಿಯಂತ್ರಣ ತಡೆ ಕೇಂದ್ರ (ಸಿಡಿಸಿ) ಇದಕ್ಕೆ ಅನುದಾನ ಒದಗಿಸುತ್ತಿತ್ತು. ಆದರೆ ಈ ಸಂಬಂಧ ಕೇಂದ್ರ ಸರ್ಕಾರದ ಅನುಮತಿಯನ್ನೇ ಪಡೆದಿರಲಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆಯದೇ ಸಂಶೋಧನೆಗೆ ಹಣ ನೀಡದಂತೆ ಅಮೆರಿಕಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಂಶೋಧನೆ ನಿಲ್ಲಿಸುವಂತೆಯೂ ನಿರ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕರಾವಳಿಗೆ ಕೊರೋನಾ ಭೀತಿ, ಉಡುಪಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆ...

ದೇಶಾದ್ಯಂತ ಅಸ್ವಾಸ್ಥ್ಯ ಸರ್ವೇಕ್ಷಣೆ ನಡೆಸುವ ಸಂಬಂಧ ಮಣಿಪಾಲ ವೈರಾಣು ಸಂಶೋಧನಾ ಸಂಸ್ಥೆ ಜತೆ ಅಮೆರಿಕ ಪಾಲುದಾರಿಕೆ ಮಾಡಿಕೊಂಡಿತ್ತು. ಇದರ ಜತೆಗೆ ನಿಪಾ ವೈರಸ್‌ ಕುರಿತ ಸಂಶೋಧನೆಗೂ ಸಹಾಯ ಮಾಡಿತ್ತು. ಆದರೆ ಆ ವೈರಾಣು ರಿಸ್ಕ್‌ ಗ್ರೂಪ್‌ 4ರಡಿ ಬರುತ್ತದೆ. ಅದು ಮಾರಣಾಂತಿಕ. ಅತ್ಯಂತ ನಿಯಂತ್ರಿತ ರೀತಿಯಲ್ಲಿ ಅದನ್ನು ನಿರ್ವಹಿಸಬೇಕಾಗುತ್ತದೆ.

ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!...

ಎಚ್ಚರ ತಪ್ಪಿದರೆ ಜೈವಿಕ ಅಸ್ತ್ರವಾಗುವ ಸಾಧ್ಯತೆ ಇರುತ್ತದೆ. ಇಂತಹ ವಿಚಾರಗಳಲ್ಲಿ ಸಂಶೋಧನೆ ನಡೆಸುವ ಲ್ಯಾಬ್‌ಗಳು 4ನೇ ಹಂತದ ಜೈವಿಕ ಸುರಕ್ಷತೆ ಪ್ರಮಾಣಪತ್ರ ಪಡೆದಿರಬೇಕಾಗುತ್ತದೆ. ಆದರೆ ಮಣಿಪಾಲ ಸಂಸ್ಥೆ ಬಳಿ ಅದು ಇರಲಿಲ್ಲ.

ಒಂದು ವೇಳೆ, ನಿಪಾ ವೈರಸ್‌ ಕುರಿತು ಸಂಶೋಧನೆ ನಡೆಸಿ, ಅದರಿಂದ ನಿಪಾ ಸೋಂಕಿಗೆ ಔಷಧ ಪತ್ತೆ ಹಚ್ಚಿದರೂ ಅದರ ಬೌದ್ಧಿಕ ಹಕ್ಕು ಭಾರತಕ್ಕೆ ಸಿಗುತ್ತಿರಲಿಲ್ಲ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ರೋಗ ಸರ್ವೇಕ್ಷಣಾ ಯೋಜನೆಯನ್ನು ನಿಲ್ಲಿಸುವಂತೆ ಸೂಚಿಸಿದೆ. ವೈರಸ್‌ ವಿಷಯವಾಗಿ ಸಿಡಿಸಿ ಹಾಗೂ ಮಣಿಪಾಲ ಲ್ಯಾಬ್‌ ಹೇಗೆ ಕೆಲಸ ಮಾಡುತ್ತಿದ್ದವು ಎಂಬ ವಿಚಾರಣೆಯಲ್ಲಿ ಗೃಹ ಸಚಿವಾಲಯ ತೊಡಗಿದೆ ಎಂದು ಹೇಳಲಾಗಿದೆ.

click me!