
ಡೆಹ್ರಾಡೂನ್ (ಅಕ್ಟೋಬರ್ 8) : ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಿದ ಮೇಲೆ ಸಿಕ್ಕಿಬೀಳುವ ಭಯದಲ್ಲಿ ಓಡಿಹೋಗುತ್ತಾರೆ. ಆದರೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಖದೀಮನೊಬ್ಬ ಯುವತಿಯ ಐಫೋನ್ ಕದ್ದು ಆಮೇಲೆ ಆಕೆಗೇ ಮೆಸೇಜ್ ಮಾಡಿ ಫೋನ್ ಪಾಸ್‌ವರ್ಡ್ ಕೊಡು ಎಂದು ಬೆದರಿಸಿದ್ದಾನೆ!
ಡೆಹ್ರಾಡೂನ್‌ನ ಕ್ಲೆಮೆಂಟ್ ಟೌನ್‌ನಲ್ಲಿ ವಾಸವಾಗಿರುವ ಕೌಶಿಕಿ ಧ್ಯಾನಿ ಎಂಬ ಯುವತಿಯ ಐಫೋನ್ ಕಳ್ಳತನವಾಗಿದೆ. ಮನೆಯಲ್ಲಿ ಸೆಪ್ಟೆಂಬರ್ 12ರಂದು ಬೆಳಗಿನ ಜಾವ ಕಳ್ಳತನ ನಡೆದಿತ್ತು. ಕೌಶಿಕಿ ಅವರ ದುಬಾರಿ ಐಫೋನ್ ಜೊತೆಗೆ ಆಕೆಯ ಸ್ನೇಹಿತನ ಸಹೋದರನ ಮೊಬೈಲ್ ಮತ್ತು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್, ಮ್ಯಾಕ್‌ಬುಕ್‌ಗಳನ್ನು ಕಳ್ಳರು ದೋಚಿದ್ದರು.
ಕಳ್ಳತನವಾದ ಐಫೋನ್ ಸ್ಕ್ರೀನ್ ಮೇಲೆ ಕಾಂಟ್ಯಾಕ್ಟ್ ನಂಬರ್ ಡಿಸ್‌ಪ್ಲೇ ಆಗುತ್ತಿತ್ತು. ಇದನ್ನು ನೋಡಿದ ಕಳ್ಳ ಆ ನಂಬರ್‌ಗೆ ನೇರವಾಗಿ SMS ಮತ್ತು WhatsApp ಮೂಲಕ ಸಂದೇಶ ಕಳುಹಿಸಿದ್ದಾನೆ. ಫೋನ್ ಅನ್‌ಲಾಕ್ ಮಾಡಲು ಪಾಸ್‌ವರ್ಡ್ ನೀಡಿ ಎಂದು ಆತ ಕೇಳಿದ್ದಾನೆ! ಫೋನ್ ಕಳೆದುಕೊಂಡು ಕಂಗಾಲಾಗಿದ್ದ ಯುವತಿಗೆ ಕಳ್ಳನ ಈ ಧೈರ್ಯ ನೋಡಿ ಬೆಚ್ಚಿಬಿದ್ದಿದ್ದಾಳೆ.
ಕೌಶಿಕಿ ಪ್ರಕಾರ, ಈ ಕಳ್ಳತನ ಕೇವಲ ಅವರ ಫ್ಲಾಟ್‌ಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ದಿನ ಬೆಳಗಿನ ಜಾವ 4 ರಿಂದ 8 ಗಂಟೆಯ ನಡುವೆ ಆ ಭಾಗದ ಹಾಸ್ಟೆಲ್‌ಗಳು ಹಾಗೂ ಪಿಜಿಗಳಲ್ಲೂ (PG) ಕಳ್ಳತನ ನಡೆದಿದೆ. ಸುಮಾರು 5 ರಿಂದ 6 ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ದೋಚಲಾಗಿದೆ. ಅದೇ ಏರಿಯಾದಲ್ಲಿ ನಂತರದ ದಿನಗಳಲ್ಲೂ ಸರಣಿ ಕಳ್ಳತನಗಳು ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಘಟನೆಯ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ (Kaushiki_28) ರೀಲ್ಸ್ ಹಂಚಿಕೊಂಡಿರುವ ಕೌಶಿಕಿ.. ಪೊಲೀಸರ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ದೂರು ಸ್ವೀಕರಿಸದೆ ನಂತರ ಬನ್ನಿ ಎಂದು ಕಳುಹಿಸಿದರು. ಕಳ್ಳರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ನಗರ ಎಸ್ಪಿ ಶೇಖರ್ ಸುಯಾಲ್ ಮಾತನಾಡಿ.. ಪೊಲೀಸರು ದೂರನ್ನು ನಿರ್ಲಕ್ಷಿಸಿಲ್ಲ. ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದ್ದು, ಸರ್ಕಲ್ ಆಫೀಸರ್ ನೇತೃತ್ವದಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಕದ್ದ ಮಾಲನ್ನು ಅನ್‌ಲಾಕ್ ಮಾಡಲು ಸ್ವತಃ ಮಾಲೀಕರನ್ನೇ ಸಂಪರ್ಕಿಸಿದ ಈ ಖದೀಮನ ಕೃತ್ಯ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದಾಗ ಅಸಲಿ ಸತ್ಯ ಹೊರ ಬೀಳಲಿದೆ. ಆದರೆ ಕಿರಾತಕನ ಧೈರ್ಯ ಮೆಚ್ಚಲೇಬೇಕು. ನೇರವಾಗಿ ಪಾಸ್‌ವರ್ಡ್ ಕೇಳ್ತಾನೆ ಅಂದರೆ ಆತ ಸಾಮಾನ್ಯದವನಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ