
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಇಲ್ಲಿನ ಪೌರತ್ವ ನೀಡುವ ವಿಚಾರದಲ್ಲಿ ರಾಜ್ಯಗಳಿಗೆ ಯಾವ ಅಧಿಕಾರವೂ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಹೀಗಾಗಿ, ತಮ್ಮ ರಾಜ್ಯದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳದ ಮುಖ್ಯಮಂತ್ರಿಗಳು ಹೇಳಿರುವುದಕ್ಕೆ ಯಾವುದೇ ಬೆಲೆ ಇಲ್ಲವಾಗಿದೆ!
ಸಿಎಎ ಅಡಿ ಭಾರತದ ಪೌರತ್ವ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಪರಿಶೀಲಿಸಿ, ನಿರ್ಧರಿಸಿ, ಅಂತಿಮವಾಗಿ ಪೌರತ್ವ ನೀಡುವವರೆಗೆ ಎಲ್ಲಾ ಹಂತದಲ್ಲೂ ಕೇಂದ್ರ ಸರ್ಕಾರದ ಅಧಿಕಾರಿಗಳೇ ನಿರ್ಣಾಯಕ ಸ್ಥಾನಗಳಲ್ಲಿ ಇರುತ್ತಾರೆ. ರಾಜ್ಯಗಳ ಅಧಿಕಾರಿಗಳಿಗೆ ಸ್ಥಾನ ಇದೆಯಾದರೂ ಅದು ನಾಮ್‌ಕೆವಾಸ್ತೆ ಎಂಬಂತಿದೆ. ಅವರು ವಿರೋಧಿಸಿದರೂ ಅಥವಾ ಸಭೆಗೆ ಗೈರಾದರೂ ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ ಎಂದು ತಿಳಿದು ಬಂದಿದೆ.
ಅಮಿತ್ ಷಾ ಕಾರಿನ ನಂಬರ್ ಪ್ಲೇಟ್‌ನಲ್ಲೂ ಸಿಎಎ: ಕಾಯ್ದೆ ಜಾರಿಗೂ ಮೊದಲು ಫೋಟೋ ಸಖತ್ ವೈರಲ್
ಪೌರತ್ವ ಸಂಬಂಧಿ ಅಧಿಕಾರ ಕೇಂದ್ರಕ್ಕೆ
ಪೌರತ್ವಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಸಂವಿಧಾನದ ಕೇಂದ್ರ ಪಟ್ಟಿಯಲ್ಲಿವೆ. ಜೊತೆಗೆ ಸಿಎಎ ಅರ್ಜಿಗಳನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸ್ವೀಕರಿಸಿ, ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ಸಮಿತಿಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೇ ಇದ್ದಾರೆ. ಪ್ರತಿ ಸಮಿತಿಯಲ್ಲೂ ರಾಜ್ಯದ ಒಬ್ಬ ಅಧಿಕಾರಿ ಆಹ್ವಾನಿತರಾಗಿರುತ್ತಾರೆ. ರಾಜ್ಯದ ಪ್ರತಿನಿಧಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆಯೇ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗೆ ಇರುತ್ತದೆ ಎಂದು ತಿಳಿದು ಬಂದಿದೆ.
ಕೇಂದ್ರದ ಅಧಿಕಾರಿಗಳೇ ನಿರ್ಣಾಯಕ:
ಅರ್ಜಿಗಳನ್ನು ಬೇರೆ ಬೇರೆ ಹಂತದಲ್ಲಿ ಸ್ವೀಕರಿಸಿ, ಪರಿಶೀಲಿಸಿ, ನಿರ್ಧರಿಸುವ ಜಾಗದಲ್ಲಿ ಗಣತಿ ಅಧಿಕಾರಿ, ಅಂಚೆ ಇಲಾಖೆ ಸುಪರಿಂಟೆಂಡೆಂಟ್, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ, ಗುಪ್ತಚರ ಅಧಿಕಾರಿ, ವಿದೇಶಿಗರ ನೋಂದಣಿ ಅಧಿಕಾರಿ, ಪೋಸ್ಟ್ ಮಾಸ್ಟರ್ ಜನರಲ್, ವಿಭಾಗೀಯ ರೈಲ್ವೆ ಮ್ಯಾನೇಜರ್ ಮುಂತಾದವರಿದ್ದಾರೆ. ಇವರೆಲ್ಲರೂ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿದ್ದಾರೆ.
ಸಮಿತಿಗಳಲ್ಲಿ ರಾಜ್ಯದಿಂದ ಆಹ್ವಾನಿತರಾಗಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಉಪ ತಹಸೀಲ್ದಾರ್ ಮಟ್ಟದ ಅಧಿಕಾರಿ ಇರುತ್ತಾರೆ. ಇವರ ಪಾತ್ರ ಸೀಮಿತ ಅಥವಾ ನಗಣ್ಯವಾಗಿರುತ್ತದೆ ಎಂದು ಮೂಲಗಳು ಹೇಳಿವೆ.
ಮೋದಿ ಸರ್ಕಾರದ ಕೊನೆಯ ಅಧಿವೇಶನ ಮುಕ್ತಾಯ: ಇದು ಹೆಚ್ಚು ಯುವ, ಹೆಚ್ಚು ಸುಶಿಕ್ಷಿತ ಲೋಕಸಭೆ!
ಸಿಎಎ ಅರ್ಜಿದಾರರಿಗೆ ಶೀಘ್ರದಲ್ಲೇ ಸಹಾಯವಾಣಿ ಜಾರಿ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಅಡಿಯಲ್ಲಿ ಭಾರತದ ಪೌರತ್ವ ಪಡೆಯುವ ಅರ್ಹತೆಯನ್ನು ಹೊಂದಿರುವ ಜನರಿಗಾಗಿ ಮಂಗಳವಾರ ವೆಬ್‌ಸೈಟ್ ಪೋರ್ಟಲ್ ಆರಂಭಿಸಿದ ಗೃಹ ಸಚಿವಾಲಯ, ಇದೀಗ ಅರ್ಜಿದಾರರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲು ನಿರ್ಧರಿಸಿದೆ. ಶೀಘ್ರದಲ್ಲೇ ಸಹಾಯವಾಣಿ ನಂಬರ್ ಜಾರಿಗೆ ಬರಲಿದ್ದು, ಇದರ ಸೇವೆ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಲಭ್ಯವಿರಲಿದೆ. ಅರ್ಜಿದಾರು ಭಾರತದಲ್ಲಿ ಎಲ್ಲಿಂದಲಾದರೂ ಕರೆ ಮಾಡಬುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ